ಸಾಧನೆ ಮೆಟ್ಟಿಲೇರುವ ವಿದ್ಯಾರ್ಥಿಗಳ ಗುರುತಿಸಿ ಸನ್ಮಾನಿಸಬೇಕು : ಸಂಸದ ನಳಿನ್
ಮತ ಹಾಕಿದವರ ಭಾವನೆ ಗೌರವಿಸುವೆ : ಸಂಸದ ನಳಿನ್
ಗುರುಪುರ : ಸಾಧನೆಯ ಗುರಿ ಮುಟ್ಟಬೇಕಾದರೆ ಕರ್ತವ್ಯದ ಅರಿವು ಇರಬೇಕಾಗುತ್ತದೆ ಮತ್ತು ಅಂತಹ ಕರ್ತವ್ಯದ ಹುಚ್ಚು ಈ ಸಂಘಕ್ಕಿದೆ. ವೈದ್ಯರು, ಇಂಜಿನಿಯರ್ ಅಥವಾ ಉನ್ನತ ಸ್ಥಾನಕ್ಕೇರಿದ ವ್ಯಕ್ತಿಗಳ ಸಾಧನೆ ಗುರುತಿಸಿ ಸನ್ಮಾನಿಸುವ ಬದಲಾಗಿ, ಸಾಧನೆಯ ಮೆಟ್ಟಿಲೇರುವ ವಿದ್ಯಾರ್ಥಿಗಳು, ಅರ್ಹರ ಗುರುತಿಸಿ ಸನ್ಮಾನಿಸುವುದು ಸಂಘದ ಆದ್ಯ ಕರ್ತವ್ಯ ಅಥವಾ ಸಮಾಜ ಕಾರ್ಯವಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಗುರುಪುರ ಕುಕ್ಕುದಕಟ್ಟೆಯಲ್ಲಿ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಮಂಗಳೂರು ಸಂಸದ ಕಟೀಲ್, ಜಿಲ್ಲೆಯ ಅಭಿವೃದ್ಧಿಗಾಗಿ ಕ್ರಿಯಾತ್ಮಕ ಯೋಜನೆಗಳಿವೆ. ತನಗೆ ಮತ ಹಾಕಿದವರ ಭಾವನೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಹಾಗೂ ಪ್ರಧಾನಿ ಮೋದೀಜಿಯವರ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸಂಸದರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವ ಪಾಲಕರು, ಮಕ್ಕಳಿಗೆ ನಮ್ಮ ಸಂಸ್ಕೃತಿ-ಸಂಸ್ಕಾರ ಪರಿಚಯಿಸುವಲ್ಲಿ ಸೋತಿದ್ದಾರೆ. ಹಾಗಾಗಿ ಇಂದಿನ ಮಕ್ಕಳು ತಮ್ಮ ಪಾಲಕರು, ಸಮಾಜ, ನಾಡಿನ ಋಣದ ಬಗ್ಗೆ ಹೆಚ್ಚೇನೂ ತಲೆಗೆಡಿಸಿಕೊಳ್ಳುವುದಿಲ್ಲ. ಇದು ಇಂದಿನ ದುರಂತ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ವಸಂತ ಶೆಟ್ಟಿ ಸಂಘದ ಯೋಜನೆಗಳ ಬಗ್ಗೆ ಸಮಾಜ ಬಾಂಧವರಿಗೆ ತಿಳಿಸುತ್ತ, ಈಗ ಸಂಘವು ೭೫ ಮಂದಿ ವಿಕಲಚೇತನರಿಗೆ ಮಾಸಿಕ ೫೦೦ ರೂ ನೀಡುತ್ತಿದ್ದು, ಸಮಾಜದಲ್ಲಿರಬಹುದಾದ ವಿಕಲಚೇತನರ ಗುರುತಿಸಿ ಸಂಘದ ಗಮನಕ್ಕೆ ತನ್ನಿ. ಅವರಿಗೂ ಮಾಸಿಕ ವೇತನ ನೀಡಲಾಗುವುದು. ಅಲ್ಲದೆ ಸಮಾಜದ ನಿರ್ಗತಿಕ ಹೆಣ್ಣು ಮಕ್ಕಳಿಗೂ ನೆರವು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ ೯೦ಕ್ಕಿಂತ ಅಧಿಕ ಅಂಕ ಗಳಿಸಿದ ಮಕ್ಕಳನ್ನು ವಿದ್ಯಾರ್ಥಿವೇತನದೊಂದಿಗೆ ಸನ್ಮಾನಿಸಲಾಯಿತು. ಉಳಿದಂತೆ ಅರ್ಹ ವಿದ್ಯಾರ್ಥಿಗಳ ಅಭಿನಂದಿಸಿ, ಕೆಲವು ಬಡ ಕುಟುಂಬಗಳಿಗೆ ನೆರವು ನೀಡಲಾಯಿತು. ಸಂಘದ ವತಿಯಿಂದ ಸುಮಾರು ಐದು ಲಕ್ಷ ರೂ ವಿದ್ಯಾರ್ಥಿವೇತನ ಹಾಗೂ ನೆರವಿನ ಮೊತ್ತ ನೀಡಲಾಯಿತು. ಉದ್ಯಮಿ ರವೀಂದ್ರನಾಥ ರೈ ಪದವು ಮೇಗಿನಮನೆ ಹಾಗೂ ಇತರ ಗಣ್ಯರು ಸಂಘದ ಸಾಧನೆ ಗುಣಗಾಣ ಮಾಡಿದರು. ಈ ವೇಳೆ ಸುಬ್ಬಯ್ಯ ಶೆಟ್ಟಿ ಲಿಂಗಮಾರುಗುತ್ತು ಅವರು ಗುರುಪುರ ಬಂಟರ ಮಾತೃ ಸಂಘದ ಕಟ್ಟಡ ನಿರ್ಮಿಸಲು ದಾನ ಮಾಡಿದ ಒಂದು ಎಕ್ರೆ ಜಾಗದ ದಾಖಲೆಪತ್ರ ಹಸ್ತಾಂತರಿಸಿದರು.
ಬಾಕ್ಸ್ :
ಯೋಕ್ಷಾಗೆ ನೆರವು :
ಮಾರಣಾಂತಿಕ ‘ಗೌಚರ್’ ಕಾಯಿಲೆಯಿಂದ ಬಳಲುತ್ತಿರುವ ಗುರುಪುರ ಮೂಳೂರು ಸೈಟ್ ಮಠದಗುಡ್ಡೆಯ ನಿವಾಸಿ ಪೂಜಾ-ಸಂತೋಷ್ ದಂಪತಿಯ ಎರಡೂವರೆ ವರ್ಷದ ಪುತ್ರಿಗೆ ಸಂಘ ಹಾಗೂ ಪುರುಷೋತ್ತಮ ಮಲ್ಲಿ ವೈಯಕ್ತಿಕ ನೆಲೆಯಲ್ಲಿ ನೆರವಿನ ಚೆಕ್ ನೀಡಿದರು.
ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ರವಿರಾಜ ಶೆಟ್ಟಿ ನಿಟ್ಟೆಗುತ್ತು(ಅಧ್ಯಕ್ಷ, ಮಂಗಳೂರು ತಾಲೂಕು ಬಂಟರ ಸಂಘ), ಆನಂದ ಶೆಟ್ಟಿ (ಅಧ್ಯಕ್ಷ, ಕಾವೂರು ಬಂಟರ ಸಂಘ), ದೇವಿಚರಣ್ ಶೆಟ್ಟಿ, ಸುಬ್ಬಯ್ಯ ಶೆಟ್ಟಿ ಲಿಂಗಮಾರುಗುತ್ತು, ಮುರಳೀಧರ ಶೆಟ್ಟಿ(ಅಧ್ಯಕ್ಷ, ಶ್ರೀರಾಮ ಭಜನಾ ಮಂದಿರ ಎಡಪದವು). ವಿನಯ ಕುಮಾರ ಶೆಟ್ಟಿ ಮಾಣಿಬೆಟ್ಟುಗುತ್ತು(ಅಧ್ಯಕ್ಷ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ) ಸುಬ್ಬಯ್ಯ ಶೆಟ್ಟಿ ಬರ್ಕೆ, ಉದ್ಯಮಿ ಉಮೇಶ್ ಮುಂಡ, ಸಚ್ಚಿದಾನಂದ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಸುನಿತಾ ಶೆಟ್ಟಿ ವಾಮಂಜೂರು ಬೆಳ್ಳೂರುಗುತ್ತು, ಸಂತೋಷ್ ಶೆಟ್ಟಿ ಶೆಡ್ಡೆ, ಜಯರಾಮ ರೈ ಉಳಾಯಿಬೆಟ್ಟು, ಉದಯ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು ಮೊದಲಾವರಿದ್ದರು. ಕೋಶಾಧಿಕಾರಿ ಸತ್ಯಾನಂದ ಶೆಟ್ಟಿ ಗುರುಪುರ ಲೆಕ್ಕಪತ್ರ ಮಂಡಿಸಿದರು. ಸುದರ್ಶನ ಶೆಟ್ಟಿ ಪೆರ್ಮಂಕಿ ಹಾಗೂ ರಾಜೀವ್ ಶೆಟ್ಟಿ ಸಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು ಹಾಗೂ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮ ಸಾದರಗೊಂಡಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here