Monday, September 25, 2023
More

  ಸಿಳ್ಳು

  Must read

  ಸಿಳ್ಳು ಹಾಕುವುದೆಂದರೆ ಮಕ್ಕಳಿಗೆ ಬಹಳ ಖುಷಿ. ಕೆಲವು ಪುಟಾಣಿಗಳು ನಾನಾ ರೀತಿ ಮತ್ತು ಭಂಗಿಗಳಲ್ಲಿ ಸಿಳ್ಳು ಹೊಡೆಯುವುದನ್ನು ಬಹಳ ಕಷ್ಟ ಪಟ್ಟು ಅಭ್ಯಸಿಸುತ್ತಾರೆ. ಬಸ್ ಕಂಡಕ್ಟರ್ ಸಿಳ್ಳು ಹೊಡೆಯಲು ಅರಿತವನಾದರೆ ಅವನ ಕೆಲಸ ಬಹಳ ಸುಲಭ. ಕೆಲವರು ಸಿಳ್ಳು ಹಾಕುತ್ತಾ ನಡೆಯುವುದನ್ನು ನೋಡಿದ್ದೇನೆ. ಕೆಲವರಿಗೆ ಬಂಡೆಯ ಮೇಲೆ ಕುಳಿತು ಸಿಳ್ಳು ಹೊಡೆಯುವುದೆಂದರೆ ಅವರಿಗಾಗುವ ಮಜಾನೇ ಬೇರೆಯಿದೆಯಂತೆ. ಸಿಳ್ಳಿಗೆ ತುಟಿಗಳು ಬಹಳ ನೆರವೀಯುತ್ತವೆ. ಸಿಳ್ಳು ಹಾಕಲು ಬೆರಳನ್ನು ಅಥವಾ ಬೆರಳುಗಳನ್ನು ಬಳಸುವ ನಿಪುಣತನ ಅನೇಕರಲ್ಲಿರುವುದನ್ನು ಗಮನಿಸಿದ್ದೇನೆ. ಸಿಳ್ಳು ಹೊಡೆಯಲು ಬಾರದವರು ಕೂಕಿಲು ಹಾಕುವ ಸುಲಭೋಪಾಯ ಬಳಸಿ ಸಂದೇಶ ರವಾನಿಸುವುದನ್ನು ನೋಡದವರು ವಿರಳ. ಯಾವುದೇ ವೆಚ್ಚ ಇಲ್ಲದ ಅತೀ ಸುಲಭ ಗ್ರಹ್ಯವಾದ ಸಿಳ್ಳು ಅನೇಕರಿಗೆ ಬಾತ್ ರೂಂ ಮ್ಯೂಸಿಕ್. ಬಾಗಿಲಿರದ ಶೌಚಾಲಯದಲ್ಲಿ ಸಿಳ್ಳು ಹಾಕುತ್ತಾ ಕಕ್ಕುವರಿದ್ದಾರೆಂದರೆ ನಗು ಬರುತ್ತದೆಯಲ್ಲವೇ? ಹೌದು, ಸಿಳ್ಳು ಅಂತಹ ಸಂದರ್ಭದಲ್ಲಿ ಮಾನ ಉಳಿಸುವ ರಕ್ಷಕನಾಗಿ ಬಾಗಿಲಿನ ಪಾತ್ರವನ್ನು ನಿರ್ವಹಿಸುತ್ತದೆ.


  ಚುನಾವಣಾ ಭಾಷಣದ ಸಂದರ್ಭದಲ್ಲಿ ಸಿಳ್ಳಿಗೆ ಮತ್ತು ದೀರ್ಘ ಸಿಳ್ಳು ಹಾಕುವ ಚತುರರಿಗೆ ಬಹಳ ಬೇಡಿಕೆ. ರಾಜಕೀಯ ನಾಯಕರು ಮಾತನಾಡಲು ಎದ್ದು ನಿಂತೊಡನೆ ಮೊದಲ ಸಿಳ್ಳು ಕೇಳಿಸ ಬೇಕು. ಆಗಲೇ ಭಾಷಣ ಮಾಡ ಹೊರಟವರಿಗೆ ಸ್ಫೂರ್ತಿ ಬಂದಂತಾಗುತ್ತದೆ. ಭಾಷಣದ ಮೊದಲ ಪದ, ಬಂಧುಗಳೇ ಎಂದೊಡನೆ ಜೋರಾದ ಸಿಳ್ಳು ಬಿದ್ದರೆ ಅವರ ಭಾಷಣಕ್ಕೆ ಏರುಗತಿ ದೊರೆಯುತ್ತದೆ. ವಿರೋಧೀ ಗುಂಪಿನ ಅಥವಾ ವಿರೋಧ ಪಕ್ಷದ ನಾಯಕರನ್ನು ಜರೆದು ಮಾತನಾಡಿದಾಗಲಂತೂ ಸಿಳ್ಳುಗಳ ಸುರಿಮಳೆ ಬೀಳುತ್ತದೆ. ನಾಯಕರ ಮಾತುಗಳು ವಿರೋಧೀ ಗುಂಪಿನವರಿಗೆ ಕೇಳಿಸದಿರಲಿ ಎಂಬ ಜಾಣತನದಿಂದ ಅವರು ಸಿಳ್ಳು ಹೊಡೆಯುವರೋ ಅಥವಾ ಬೈದಂತೆ ಅವರಿಗೆ ಖುಷಿಯೇರುತ್ತಾ ಸಿಳ್ಳು ಚಿಮ್ಮುವುದೋ ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯಲು ಜ್ಯೋತಿಷಿಗಳನ್ನೇ ಪ್ರಶ್ನಿಸಬೇಕಾಗಬಹುದು. ಅಂತು ರಾಜಕೀಯ ಪಕ್ಷಗಳ ಭಾಷಣ ಎಂದರೆ ಸಿಳ್ಳೋ ಸಿಳ್ಳು.

  ಬೀದಿ ಕಾಮಣ್ಣರಿಗೆ ರಸ್ತೆಯಂಚಿನಲ್ಲಿ ಹುಡುಗಿಯರು ಹೋಗುತ್ತಿರುವಾಗ ಸಿಳ್ಳುಹಾಕುವುದೆಂದರೆ ಪಂಚಪ್ರಾಣ. ಹುಡುಗಿಯರು ತಿರುಗಿ ನೋಡಿದೊಡನೆ ಅವರ ಸಿಳ್ಳು ಕೆಲವೊಮ್ಮೆ ನಿಲ್ಲುವುದೂ ಇದೆ, ಕೆಲವೊಮ್ಮೆ ಈ ಸಿಳ್ಳು ಏರುವುದೂ ಇದೆ. ಎಲ್ಲಾದರೂ ಹುಡುಗಿಯರು ಧೈರ್ಯ ತೋರಿದರೆ ಈ ಕಾಮಣ್ಣರ ಭಂಡತನ ಬಯಲಾಗುವುದೂ ಇದೆ. ಅವರು ಕಾಲ್ಕಿತ್ತೇ ಬಿಡುತ್ತಾರೆ.
  ಬಸ್ ನಿರ್ವಾಹಕರು ಹಾಕುವ ಸಿಳ್ಳು ಅನಿವಾರ್ಯತೆಯ ಸಿಳ್ಳು. ಕೆಲವೆಡೆ ಸಿಳ್ಳು ಹಾಕಲೇ ಬೇಕಾದ ಅನಿವಾರ್ಯತೆ ಇರಲೂ ಬಹುದು. ಆದರೆ ಎಲ್ಲ ಕಡೆ ಸಿಳ್ಳು ಹಾಕುವುದು ಸೂಕ್ತವೂ ಅಲ್ಲ. ಅಗತ್ಯವೂ ಅಲ್ಲ. ಮಹಾಶಯರು ಎನಿಸಿಕೊಂಡವರು ಭಾಷಣ ಮಾಡುತ್ತಾ ಇದ್ದಂತೆ ಸಿಳ್ಳು ಬೀಳುವುದೂ ಇದೆ. ಇದು ಕಿಡಿಗೇಡಿತನದ ಸಿಳ್ಳು. ಸಿಳ್ಳುಹಾಕಿದ ವ್ಯಕ್ತಿ ಆ ಕಾರ್ಯಕ್ರಮದಲ್ಲಿ ಭಾಷಣ ಆಲಿಸಲು ಬಂದವನಾಗಿರದೇ ಇದ್ದಾಗ, ಆತನ ಉದ್ದೇಶ ಯಾವುದೋ ಮನರಂಜನೆಯ ಕಾರ್ಯಕ್ರಮವಾಗಿದ್ದಾಗ, ಭಾಷಣ ಗಾರರು ಮಾತು ನಿಲ್ಲಿಸಲು ಸೂಚನೆಯೆಂಬಂತೆ ಸಿಳ್ಳು ಹಾಕುವ ಪರಿಪಾಟ ಕಿಡಿಗೇಡಿತನವೇ ಸರಿ. ಮಾತು ಕೇಳಿ ಖುಷಿಯಾದರೆ ಚಪ್ಪಾಳೆ ತಟ್ಟ ಬಹುದು. ಅದು ಗೌರವದ ಸಂಸ್ಕಾರವೂ ಹೌದು.
  ಭಾರತ ಗೌರವ, ಘನತೆಗಳಿಗೆ ಹೆಸರಾದ ದೇಶ. ಇಲ್ಲಿ ಸಜ್ಜನಿಕೆಗೆ ಸಿಗುವ ಮಾನ್ಯತೆ ದುರ್ಜನಿಕೆಗೆ ಸಿಗದು. ಮನಸ್ಸಿಗೆ ಮುದವೇರಿದರೆ ಚಪ್ಪಾಳೆಯೊಂದಿಗೆ ಪುರಸ್ಕರಿಸುವ ಘನವಂತರು ನಾವು.

  ಆದರೂ ಕೆಲವರು ಮದವೇರಿದವರಂತೆ ಸಿಳ್ಳು, ಕೇಕೆ ಹಾಕುವುದನ್ನು, ಕುತ್ಸಿತವಾಗಿ ವರ್ತಿಸುವುದನ್ನು ಕಾಣುತ್ತಿದ್ದೇವೆ. ಇದು ದೇಶಕ್ಕೆ, ಸಜ್ಜನಿಕೆಗೆ ಮಾಡುವ ಅಪಚಾರವಾಗಿದೆ. ಸಿಳ್ಳನ್ನು ಒಳ್ಳೆಯ ಉದ್ದೇಶದಲ್ಲಿ ಬಳಸುವುದು ಶ್ರೇಯಸ್ಕರ. ಮನರಂಜನೆಗಾಗಿ ಹಾಡನ್ನು ಸಿಳ್ಳಿಗೆ ಹೊಸೆಯಬಹುದು, ವಾದ್ಯಗಳು ಸಂಗೀತನುಡಿಸುವಂತೆ ಸಿಳ್ಳಿನ ಮೂಲಕವೂ ಸಂಗೀತದ ರಸವನ್ನು ಚಿಮ್ಮಿಸಬಹುದು. ಆ ಸಂಗೀತಕ್ಕೆ ಅಭಿನಯವನ್ನೂ ಮಾಡಬಹುದು. ಆದರೆ ಅಪಹಾಸ್ಯಕ್ಕಾಗಿ, ಗೇಲಿಗಾಗಿ, ಕುಹಕಕ್ಕಾಗಿ, ಅಪಮಾನಿಸುವುದಕ್ಕಾಗಿ ಯಾಕೆ ಸಿಳ್ಳು ಹಾಕಬೇಕು? ಸಿಳ್ಳು ಯಾರಿಗೂ ಮುಳ್ಳಾಗದಿರಲಿ.

   

   

  ಲೇ: ರಮೇಶ ಎಂ. ಬಾಯಾರು ಎಂ.ಎ; ಬಿ.ಎಡ್;
  ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕರು

  More articles

  LEAVE A REPLY

  Please enter your comment!
  Please enter your name here

  Latest article