


ಅಡ್ಯನಡ್ಕ: ಕಾರ್ಟೂನ್ ರಚನೆಯು ಅತ್ಯಂತ ಸುಲಭವಾಗಿ ಮತ್ತು ಆಸಕ್ತಿದಾಯಕವಾಗಿ ಕಲಿಯಬಲ್ಲ ಚಿತ್ರ ರಚನಾ ಪದ್ಧತಿಯಾಗಿದೆ. ಇಂದು ಕಾರ್ಟೂನ್ ಮತ್ತು ಆನಿಮೇಶನ್ ಕ್ಷೇತ್ರದಲ್ಲಿ ಸೃಜನಶೀಲ ಕಲಾವಿದರಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ವ್ಯಂಗ್ಯಚಿತ್ರ ಕಲಾವಿದ ಮತ್ತು ಆನಿಮೇಟರ್ ಜಯರಾಮ ನಾವಡ ನಿಟಿಲಾಪುರ ಅವರು ಹೇಳಿದರು.
ಸಾಹಿತ್ಯ ಸಂಘ ಜನತಾ ಪ್ರೌಢಶಾಲೆ ಅಡ್ಯನಡ್ಕ ಮತ್ತು ’ಅಮೃತವಾಹಿನಿ’ ಸಹಯೋಗದಲ್ಲಿ ಜೂ.೨೯ರಂದು ಅಡ್ಯನಡ್ಕ ಜನತಾ ಪ್ರೌಢಶಾಲೆಯ ವಾರಣಾಶಿ ಕೃಷ್ಣ ಸಭಾಂಗಣದಲ್ಲಿ ನಡೆದ ಚಿತ್ರಕಲೆ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳಿಗೆ ಆನಿಮೇಶನ್ ಮತ್ತು ಕಾರ್ಟೂನ್ ರಚನೆಯ ತರಬೇತಿ ನೀಡಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಚಿತ್ರಕಲಾವಿದ, ವಿನ್ಯಾಸಕಾರ ನವೀನ್ ಜಿ. ಪುತ್ತೂರು ಅವರು ವಿದ್ಯಾರ್ಥಿಗಳಿಗೆ ನಾನಾ ಪ್ರಕಾರದ ಚಿತ್ರಕಲೆಯ ಮಾದರಿಗಳನ್ನು ಪರಿಚಯಿಸಿ ಮಾಹಿತಿ ನೀಡಿದರು.
ಸಾಹಿತ್ಯ ಸಂಘದ ಗೌರವಾಧ್ಯಕ್ಷ, ಮುಖ್ಯ ಶಿಕ್ಷಕ ಟಿ. ಆರ್. ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಅಧ್ಯಾಪಕ ಶಿವಕುಮಾರ ಸಾಯ ಅವರು ಪ್ರಸ್ತಾವಿಸಿ, ಪರಿಚಯಿಸಿದರು. ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಾಹಿತ್ಯ ಸಂಘದ ಅಧ್ಯಕ್ಷೆ ಮಧುರಾ ಬಿ. ಸ್ವಾಗತಿಸಿದರು. ಕಾರ್ಯದರ್ಶಿ ಕೃತಿಕಾ ಎಂ. ಎಸ್. ವಂದಿಸಿದರು. ಉಪಾಧ್ಯಕ್ಷೆ ನಾಗವೇಣಿ ಎ. ಕಾರ್ಯಕ್ರಮ ನಿರೂಪಿಸಿದರು.


