ವಿಟ್ಲ: ವಿಟ್ಲ ಪ್ರಖಂಡದ ಬಜರಂಗದಳದ ಮುಖಂಡರ ಮೇಲೆ ಕೇರಳ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಕಾರಿ, ಖಾಸಗಿ, ಹಾಗೂ ಕೇರಳ ರಾಜ್ಯದ ಬಸ್‌ಗಳು ಸೇರಿದಂತೆ ಒಟ್ಟು ಆರು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿದೆ.

ಸೋಮವಾರ ಕೇರಳ ಭಾಗದ ಅಡ್ಯನಡ್ಕದಲ್ಲಿ ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಅವರಿಂದ ಹಣ ಹಾಗೂ ಪಿಕಪ್ ವಾಹನ ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ವಿಟ್ಲ ಪ್ರಖಂಡದ ಬಜರಂಗ ದಳದ ಮುಖಂಡ ಅಕ್ಷಯ್ ರಜಪೂತ್, ಮಿಥುನ್ ಸೇರಿದಂತೆ ಹಲವು ಮಂದಿಯ ಮೇಲೆ ಕೇರಳದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಖಂಡರ ಮೇಲೆ ಪ್ರಕರಣ ದಾಖಲಾದ ಹಿನ್ನೆಯಲ್ಲಿ ವಿಟ್ಲ ಪ್ರಖಂಡದ ಪ್ರದೇಶಗಳಲ್ಲಿ ಮಂಗಳವಾರ ಬಂದ್ ಮಾಡಲಾಗುವುದು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್ ಹರಿಯಬಿಟ್ಟಿದ್ದರು. ಇದರ ಮುಂದುವರಿದ ಭಾಗವಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ನಸುಕಿನ ವೇಳೆ ದುಷ್ಕರ್ಮಿಗಳ ತಂಡ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ಈ ಕೃತ್ಯ ನಡೆಸಿ ಪರಾರಿಯಾಗಿದ್ದಾರೆ. ಕೇಪು ಗ್ರಾಮದ ಮೈರ ಹಾಗೂ ಕಂಬಳಬೆಟ್ಟು ಎಂಬಲ್ಲಿ ಕಾಸರಗೋಡು-ವಿಟ್ಲ-ಪುತ್ತೂರು ಕಡೆ ಸಂಚಾರ ಮಾಡುವ ಕೇರಳ ರಾಜ್ಯದ ಎರಡು ಬಸ್‌ಗಳ ಮೇಲೆ ತೂರಾಟ ನಡೆಸಿ ಗಾಜು ಪುಡಿ ಮಾಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಕೇರಳ ರಾಜ್ಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ.

ಸಾಲೆತ್ತೂರಿನಲ್ಲಿ ನಿಲ್ಲಿಸಿದ್ದ ಒಂದು ಸರಕಾರಿ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ವಿಟ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಸರಕಾರಿ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಸಾಲೆತ್ತೂರು ಹಾಗೂ ಪರ್ತಿಪ್ಪಾಡಿ ಎಂಬಲ್ಲಿ ಎರಡು ಖಾಸಗಿ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಂದ್ ಕರೆಗೆ ಪ್ರತಿಕ್ರಿಯೆ ಶೂನ್ಯ: ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ವಿರೋಧಿಸಿ ಮಂಗಳವಾರ ವಿಟ್ಲ ಬಂದ್‌ಗೆ ನೀಡಿದ್ದ ಕರೆಗೆ ಮಾತ್ರ ವಿಟ್ಲ ಯಾವುದೇ ಸ್ಪಂದನೆ ದೊರಕ್ಕಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಂದ್‌ಗೆ ಸಹಕಾರ ನೀಡಬೇಕೆಂದು ಕೇಳಿಕೊಂಡರೂ ವರ್ತಕರು, ವಾಹನ ಮಾಲಕರು ಸಹಕಾರ ನೀಡದ ಕಾರಣ ಬಂದ್ ನೀರಸವಾಗಿ ಹೋಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here