ವಿಟ್ಲ: ಸರಕಾರಕ್ಕೂ ಮಾಡಲಾಗದಂತಹ ನಿಜ ಅರ್ಥದ ಗ್ರಾಮಾಭಿವೃದ್ಧಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆದಿದೆ. ಸಮಾಜದ ಸಂಘಟನೆ, ಸಾಮರಸ್ಯ, ಸಮಾನತೆಗೆ ಕಾರಣವಾಗಿದೆ. ಸಣ್ಣ ಮೊತ್ತವನ್ನೇ ಉಳಿತಾಯ ಮಾಡಿಕೊಂಡು ಜೀವನದ ಭವಿಷ್ಯವನ್ನು ರೂಪಿಸಲು ಯೋಜನೆ ಮಾರ್ಗದರ್ಶನ ನೀಡಿದೆ ಎಂದು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬಂಟ್ವಾಳ ತಾಲೂಕು ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ವಿಭಜಿತ ವಿಟ್ಲದ ನೂತನ ಕಚೇರಿಯನ್ನು ಉದ್ಘಾಟಿಸಿ ಸಭಾ ಕಾರ್‍ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರಕ್ಕೂ ಬಂಟ್ವಾಳಕ್ಕೂ ಅವಿನಾಭಾವ ಸಂಬಂಧವಿದೆ. ಸ್ವಂತಿಕೆಯಿಂದ ಮುನ್ನಡೆಯಲು ಯೋಜನೆ ಸಹಕಾರಿಯಾಗಿದೆ. ಯೋಜನೆ ಕಾರ್‍ಯಕರ್ತರು ಸಾಮಾಜಿಕ ಸೇವಾ ಕಾರ್‍ಯಗಳಲ್ಲಿಯೂ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಸಚಿವ ರಮಾನಾಥ ರೈ ಅವರು ಸಭಾ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ವಸ್ಥ ಸಮಾಜ ಪರಿವರ್ತನೆಗೆ ಶ್ರೀ ಕ್ಷೇತ್ರದ ಯೋಜನೆ ಅತ್ಯಂತ ಪೂರಕವಾಗಿದೆ. ಬಡ ವರ್ಗದವರ ಆಶಾಕಿರಣವಾಗಿ ಯೋಜನೆ ಕಾರ್‍ಯನಿರ್ವಹಿಸುತ್ತಿದ್ದು, ಶೋಷಣೆ ಮುಕ್ತ ಸಮಾಜ ನಿರ್‍ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ಕಾರ್‍ಯನಿರ್ವಾಹಕ ನಿರ್ದೇಶಕ ಎಲ್. ಎಚ್ ಮಂಜುನಾಥ ಮಾತನಾಡಿ 2004 ರಲ್ಲಿ ಬಂಟ್ವಾಳ ತಾಲೂಕಿನಲ್ಲಿ ಆರಂಭಗೊಂಡ ಯೋಜನೆ 15 ವರ್ಷಗಳಲ್ಲಿ ಒಂದು ಸಾವಿರ ಕೋಟಿಗಿಂತಲೂ ಅಧಿಕ ವ್ಯವಹಾರ ಚಟುವಟಿಕೆಯೊಂದಿಗೆ ಗ್ರಾಮಾಭಿವೃದ್ಧಿಗೆ ಸದ್ವಿನಿಯೋಗವಾಗಿದೆ. ಯೋಜನೆ ಮೂಲಕ ಕೃಷಿ ಕ್ರಾಂತಿ, ಕ್ಷೀರಕ್ರಾಂತಿ ನಡೆದಿದೆ. ಗ್ರಾಮದ ಬಡ ಜನರಿಗೆ ಆರ್ಥಿಕ ಶಕ್ತಿ ತುಂಬಿಸುವ ಕಾರ್‍ಯ ಮಾಡಿದೆ ಎಂದರು.
ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜನಮಂಗಳ ವತಿಯಿಂದ ವಿಶೇಷಚೇತನ ಫಲಾನುಭವಿಗಳಿಗೆ, ಅಶಕ್ತರಿಗೆ ನಾನಾ ಪರಿಕರಗಳನ್ನು ವಿತರಿಸಲಾಯಿತು.
ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಂಟ್ವಾಳ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ, ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಮಾಧವ ವಳವೂರು, ಉಡುಪಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿದರು. ವಿಟ್ಲ ಯೋಜನಾಧಿಕಾರಿ ಮೋಹನ್ ಕೆ. ವಂದಿಸಿದರು. ನಳಿನಾಕ್ಷಿ ಹಾಗೂ ವಿನೋದ ಕಾರ್‍ಯಕ್ರಮ ನಿರೂಪಿಸಿದರು. ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಮೇಲ್ವೀಚಾರಕರು, ಸೇವಾಪ್ರತಿನಿಧಿಗಳು ಸಹಕರಿಸಿದರು.


