ವಿಟ್ಲ: ವಿಟ್ಲದ ಇತಿಹಾಸ ಪ್ರಸಿದ್ಧ ವಿಟ್ಲ ಕೋಟಿಕೆರೆಯ ತಡೆಗೋಡೆ ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದ್ದು, ಇದನ್ನು ಗ್ರಾಮಸ್ಥರೇ ಶ್ರಮದಾನದ ಮೂಲಕ ಕಾಯಕಲ್ಪಕ್ಕೆ ಮುಂದಾಗಿದ್ದಾರೆ.
ಸುಮಾರು ಒಂದು ಶತಮಾನಕ್ಕಿಂತಲೂ ಅಧಿಕ ಇತಿಹಾಸ ಹೊಂದಿರುವ ವಿಟ್ಲದ ಅರಮನೆಗೆ ಸಂಬಂಧಿಸಿದ ಕೋಟಿಕೆರೆ ಎಂದು ಕರೆಯಲ್ಪಡುವ ಇತಿಹಾಸ ಪ್ರಸಿದ್ಧ ಕೆರೆಗೆ ಜೂನ್‌ನಿಂದ ಡಿಸೆಂಬರ್ ತನಕ ಪ್ರತಿನಿತ್ಯ ಈಜಾಡಲು ಆಗಮಿಸುತ್ತಾರೆ. ಇತ್ತೀಚೆಗೆ ವರ್ಷಗಳಲ್ಲಿ ಕೆರೆಯಲ್ಲಿ ಹೂಳು ತುಂಬಿದ್ದು, ತಡೆಗೋಡೆ ಕೂಡಾ ನಿರಂತರ ಕುಸಿಯುತ್ತಿತ್ತು. ಈ ಬಗ್ಗೆ ಗಮನಹರಿಸಿದ ಕಾಶಿಮಠ ಸುತ್ತಮುತ್ತಲಿನ ಗ್ರಾಮಸ್ಥರು ತಾವೇ ಕೆರೆ ದುರಸ್ತಿ ಕಾರ್‍ಯಕ್ಕೆ ಮುಂದಾಗಿದ್ದಾರೆ. ಕಾಶಿ ಯುವಕ ಮಂಡಲದ ಗೌರವಾಧ್ಯಕ್ಷ ಬಾಬು ಕೆ.ವಿ ಅವರ ನೇತೃತ್ವದಲ್ಲಿ 25ಕ್ಕಿಂತಲೂ ಅಧಿಕ ಗ್ರಾಮಸ್ಥರು ಶ್ರಮದಾನ ನಡೆಸಿದ್ದಾರೆ. ವಿಟ್ಲದ ಕೆಲವು ದಾನಿಗಳು ಕೂಡ ಸಹಕಾರ ನೀಡಿದ್ದಾರೆ. ಬಿರುಕು ಬಿಟ್ಟ ತಡೆಗೋಡೆಗೆ ಕಲ್ಲು ಹಾಗೂ ಸಿಮೆಂಟ್ ಹಾಕುವ ಮೂಲಕ ಭದ್ರಪಡಿಸಿದ್ದಾರೆ. ಇದರಿಂದ ವಿಟ್ಲ ಸುತ್ತಮುತ್ತಲಿನ ನೂರಾರು ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ. ಈಜುಪಟು ಕಾಶಿಮಠ ಈಶ್ವರ್ ಭಟ್, ಕಾಶಿ ಯುವಕ ಮಂಡಲದ ಅಧ್ಯಕ್ಷ ಕೇಶವ, ಮಾಜಿ ಅಧ್ಯಕ್ಷ ಪ್ರತಾಪ್, ವಿಟ್ಲ ಜೇಸಿಐ ಅಧ್ಯಕ್ಷ ಬಾಲಕೃಷ್ಣ, ವಿಶ್ವನಾಥ ಕೊಪ್ಪಳ, ವಿಶ್ವನಾಥ ಕಬ್ಬಿಣಹಿತ್ತಿಲು, ಪ್ರವೀಣ್ ಪುಚ್ಚೆಗುತ್ತು, ಮಿಥುನ್, ಲಕ್ಷ್ಮಣ ಆರ್.ಎಸ್, ಮೊದಲಾದವರು ಭಾಗವಹಿಸಿದ್ದಾರೆ.
