ವಿಟ್ಲ: ವಿಟ್ಲ ಪರಿಸರದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರದಿಂದ ಬುಧವಾರ ಆಚರಿಸಿದರು.
ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬು ಅಬ್ದುಲ್ ಸಲಾಂ ಲತೀಫಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಸಂದೇಶ ನೀಡಿದ ಅವರು ಶಾಂತಿ-ಸೌಹಾರ್ದತೆ ಸಾರುವುದೇ ಈದುಲ್ ಫಿತ್ರ್ ಹಬ್ಬದ ಸಂದೇಶವಾಗಿದೆ. ದಾನ ಧರ್ಮಗಳ ಮೂಲಕ ಹಬ್ಬಗಳನ್ನು ಆಚರಿಸಬೇಕು. ಹಬ್ಬದ ಸಡಗರದಲ್ಲಿ ಧರ್ಮದ ಚೌಕಟ್ಟನ್ನು ಮೀರಬಾರದು. ಹಬ್ಬದ ಸಡಗರವೇ ದೇವರ ಸ್ಮರಣೆಯಿಂದ ಕೂಡಿರಬೇಕು. ದೇವರ ಭಕ್ತಿಯಲ್ಲಿ ಹಬ್ಬವನ್ನು ಆಚರಿಸಬೇಕು. ಇದರಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಮನಸ್ಸು ಪೂರ್ತಿ ದೇವರ ಸ್ಮರಣೆ ಮಾಡಬೇಕು. ಪವಿತ್ರ ರಂಮ್ಜಾನ್ ತಿಂಗಳಿನಲ್ಲಿ ಬಡವರನ್ನು ಗುರುತಿಸುವ ಕೆಲಸ ನಡೆಯಬೇಕು. ಅವರ ಕಷ್ಟಗಳಿಗೆ ನಿರಂತರ ಸ್ಪಂದಿಸುವ ಕಾರ್ಯ ನಡೆಯಬೇಕು ಎಂದರು.
ವಿಟ್ಲದ ಅಶ್ ಅರಿಯ್ಯ ಟೌನ್ ಮಸೀದಿಯಲ್ಲಿ ಖತೀಬು ಅಬ್ಬಾಸ್ ಮದನಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಸಂದೇಶ ನೀಡಿದ ಅವರು ಈದುಲ್ ಫಿತ್ರ್ ಮುಸ್ಲಿಂ ಬಾಂಧವರಿಗೆ ಸಂತೋಷ ಹಾಗೂ ನೆಮ್ಮದಿಯಿಂದ ಆಚರಿಸುವ ಹಬ್ಬವಾಗಿದೆ. ಐಕ್ಯತೆ, ಶಾಂತಿಯಿಂದ ನಾವು ಜೀವಿಸಬೇಕು ಹೊರತು ಅಶಾಂತಿ ಉಂಟು ಮಾಡುವ ಮೂಲಕ ಜೀವಿಸಬಾರದು. ಅದನ್ನು ದೇವರು ಮೆಚ್ಚುವುದಿಲ್ಲ ಎಂದು ಹೇಳಿದರು.
ಅದೇ ರೀತಿ ವಿಟ್ಲ ನಾನಾ ಭಾಗಗಳಲ್ಲಿ ಮುಸ್ಲಿಂ ಬಾಂಧವರು ಹಬ್ಬವನ್ನು ಆಚರಿಸಿದರು. ನಮಾಜ್‌ಗಿಂತ ಮೊದಲು ಬಡವರಿಗೆ ಫಿತ್ರ್ ಝಕಾತ್ ನೀಡಿದರು. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿವಿಧ ಮನೆಗಳಿಗೆ ತೆರಳಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಹಬ್ಬಕ್ಕೆ ಅಡ್ಡಿಯಾದ ನೀರಿನ ಸಮಸ್ಯೆ:
ಮುಸ್ಲಿಮರು ಸಡಗರದಲ್ಲಿ ಹಬ್ಬವನ್ನು ಆಚರಿಸುತ್ತಿದ್ದರೂ ಕೆಲವು ಮನೆಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ಹಬ್ಬದ ದಿನ ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅದು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ವಿಟ್ಲ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದ್ದರಿಂದ ವಿಟ್ಲ ಭಾಗದ ಮುಸ್ಲಿಮರು ತೊಂದರೆ ಅನುಭವಿಸಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಮುನ್ಸೂಚನೆ ಇದ್ದರೂ ಕೂಡಾ ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್ ಮೂಲಕವಾದರೂ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ತುರ್ತು ಸಭೆ ಕರೆಯುವ ಗೋಜಿಗೂ ಹೋಗಿಲ್ಲ. ಹಲವು ಮನೆಗಳಿಗೆ ಖಾಸಗಿ ವ್ಯಕ್ತಿಗಳಿಂದ ದುಪ್ಪಟ್ಟು ಹಣ ನೀಡಿ ನೀರು ಖರೀದಿಸಿ ಹಬ್ಬ ಆಚರಿಸುವ ಅನಿವಾರ್ಯತೆ ವಿಟ್ಲ ಭಾಗಕ್ಕೆ ಎದುರಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here