ಬಂಟ್ವಾಳ, ಜೂ. ೨೪: ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಉಳ್ಳಾಲ ತಾಲೂಕಿಗೆ ಪುದು, ಮೇರಮಜಲು ಕೊಡ್ಮನ್, ತುಂಬೆ ಗ್ರಾಮಗಳನ್ನು ಸೇರ್ಪಡೆ ಮಾಡದಂತೆ ಒತ್ತಾಯಿಸಿ ಫರಂಗಿಪೇಟೆ ಕಾಂಗ್ರೆಸ್ ವಲಯ ಸಮಿತಿಯು ಜಿಲ್ಲಾ ಉಸ್ತುವರಿ ಸಚಿವ ಯು.ಟಿ.ಖಾದರ್ ಅವರಿಗೆ ಸೋಮವಾರ ರಾತ್ರಿ ಮನವಿ ಸಲ್ಲಿಸಲಾಯಿತು.
ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ನೇತೃತ್ವದ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ನೂತನ ಉಳ್ಳಾಲ ತಾಲೂ ಕು ರಚನೆಯ ವೇಳೆ ಮೇಲೆ ಉಲ್ಲೇಖಿಸಿರುವ ಗ್ರಾಮಗಳ ಸೇರ್ಪಡೆಗೆ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ.
ಈ ಸಂದರ್ಭ ಪುದು ಗ್ರಾಮ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷ ಲಿಡಿಯೋ ಪಿಂಟೋ, ಸದಸ್ಯರಾದ ಹಾಶಿರ್ ಪೆರಿಮಾರ್, ಇಕ್ಬಾಲ್ ಸುಜೀರ್, ಭಾಸ್ಕರ ರೈ, ಕಿಶೋರ್ ಸುಜೀರ್, ಕಾಂಗ್ರೆಸ್ ವಲಯಾಧ್ಯಕ್ಷ ರಫೀಕ್ ಪೆರಿಮಾರ್, ಲವಿನಾ ಡಿಸೋಜ, ಝಾಹಿರ್ ಕುಂಪನಮಜಲು, ಮಾಜಿ ತಾಪಂ ಸದಸ್ಯ ಆಸಿಫ್ ಇಕ್ಬಾಲ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಮ್ತಿಯಾಝ್ ತುಂಬೆ, ಯುವ ಕಾಂಗ್ರೆಸ್‌ನ ಸದಸ್ಯ ಮಜೀದ್ ಪೆರಿಮಾರ್ ಹಾಗೂ ಪಕ್ಷ ಕಾರ್ಯಕರ್ತರು ಹಾಜರಿದ್ದರು.
ಪುದು, ಮೇರಮಜಲು, ಕೊಡ್ಮಾಣ್, ತುಂಬೆ ಗ್ರಾಮಗಳ ಸಹಿತ ಅಸುಪಾಸಿನ ಪ್ರದೇಶಗಳು ಹಲವು ವರ್ಷಗಳಿಂದ ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನವಾದ ಬಿ.ಸಿ.ರೋಡಿನ ಅವಿಭಾಜ್ಯ ಅಂಗವಾಗಿದೆ. ಉಲ್ಲೇಖಿತ ಗ್ರಾಮಗಳ ಗ್ರಾಮಸ್ಥರ ಕಂದಾಯ ವ್ಯವಹಾರ ಸಹಿತ ಇತರೆ ಸರಕಾರಿ ಕಚೇರಿಗಳಲ್ಲಿ ನಡೆಯುವ ಕೆಲಸ ಕಾರ್ಯಗಳು ಸಮೀಪದ ಬಿ.ಸಿ.ರೋಡಿನಲ್ಲಿ ನಡೆದುಕೊಂಡು ಬರುತ್ತಿದೆ. ಒಂದು ವೇಳೆ ಹೊಸ ತಾಲೂಕು ರಚನೆಗಾಗಿ ಈ ಗ್ರಾಮಗಳನ್ನು ಸೇರಿಸಿಕೊಂಡರೆ ಇಲ್ಲಿನ ನಾಗರಿಕರು ತಮ್ಮ ಕಚೇರಿ ಕೆಲಸ ಕಾರ್ಯಕ್ಕೆ ನೇತ್ರಾವತಿ ನದಿಯನ್ನು ದಾಟಿ ಸುಮಾರು ೩೫ ಕಿ.ಮೀ.ಗಿಂತಲೂ ಅಧಿಕವಾಗಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಬಂಟ್ವಾಳ ತಾಲೂಕಿನಿಂದ ಪುದು, ಮೇರಮಜಲು, ಕೊಡ್ಮಾಣ್, ತುಂಬೆ ಗ್ರಾಮಗಳನ್ನು ಬೇರ್ಪಡಿಸಿ ಹೊಸ ತಾಲೂಕಿಗೆ ಸೇರಿಸಿದರೆ ಇಲ್ಲಿನ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಹೊಸ ಉಳ್ಳಾಲ ತಾಲೂಕು ರಚನೆಯ ವೇಳೆ ಪುದು, ಮೇರಮಜಲು, ಕೊಡ್ಮಾಣ್, ತುಂಬೆ ಗ್ರಾಮಗಳ ಸೇರ್ಪಡೆಗೆ ಸ್ಪಷ್ಟವಾದ ವಿರೋಧವಿದ್ದು, ಈ ಗ್ರಾಮಗಳನ್ನು ಹೊಸ ತಾಲೂಕು ರಚನೆಯಿಂದ ಕೈ ಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here