ವಿಟ್ಲ: ಪುಣಚ ಗ್ರಾಮದ ಮನೆಲ ಕ್ರಿಸ್ತರಾಜ ಚರ್ಚ್ ಬಳಿಯಲ್ಲಿದ್ದ ಪ್ರತಿಮೆಗೆ ಕಲ್ಲು ತೂರಿ ಸಮಾಜದಲ್ಲಿ ಶಾಂತಿ ಕೆಡಿಸಲು ಮುಂದಾಗಿರುವ ವಿಚಾರ ಊರಿಗೆ ತಿಳಿದಿದೆ. ಸಮರ್ಪಕವಾಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸದೇ ಒತ್ತಡಕ್ಕೆ ಮಣಿದು ಹಿಂದೂ ಯುವಕರನ್ನು ಠಾಣೆಗೆ ಕರೆಸಿ ತನಿಖೆಗೆ ಒಳಪಡಿಸಲಾಗಿತ್ತು. ಆದರೆ ನೈಜ ಆರೋಪಿಗಳೆಂದು ತಿಳಿದರೂ ಅವರನ್ನು ಸಮರ್ಪಕ ವಿಚಾರಣೆಯನ್ನೂ ನಡೆಸದೇ ಬಿಟ್ಟಿರುವುದು ಸರಿಯಲ್ಲ ಎಂದು ಬಿಜೆಪಿ ಪುತ್ತೂರು ಮಂಡಲ ಕಾರ್ಯದರ್ಶಿ ರಾಮಕೃಷ್ಣ ಬಿ. ಮೂಡಂಬೈಲು ಹೇಳಿದರು.
ಹಿಂದೂ ಹಿತರಕ್ಷಣಾ ವೇದಿಕೆ ಪುಣಚ ಘಟಕದ ವತಿಯಿಂದ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಈ ಹಿಂದೆ ಅದೆಷ್ಟೋ ವರ್ಷಗಳಿಂದ ಶಾಂತಿ ಸಾಮರಸ್ಯದಿಂದ ಬಾಳುತ್ತಿದ್ದ ಪುಣಚ ಗ್ರಾಮದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವಂತ ಘಟನೆಗಳು ಶಾಂತಿಯನ್ನು ಸಹಿಸದ ಬೆರಳೆಣಿಕೆಯ ಮಂದಿಯಿಂದ ನಡೆಯುತ್ತಿದೆ. ಚರ್ಚ್ ಬಳಿಯಿದ್ದ ಕ್ರೈಸ್ತ ದೇವರ ಪ್ರತಿಮೆ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಧ್ವನಿ ಮುದ್ರಣದ ಸತ್ಯಾಸತ್ಯತೆಯನ್ನು ಪೊಲೀಸ್ ಇಲಖೆ ಕೂಲಂಕುಷವಾಗಿ ಪರಿಶೀಲಿಸಬೇಕು. ದುಷ್ಕೃತ್ಯ ನಡೆಸಿದ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕ್ರೈಸ್ತ ಧರ್ಮಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಈ ಕೃತ್ಯವನ್ನು ನಡೆಸಿ ಕೋಮು ಸಾಮಾರಸ್ಯ ಕೆಡಿಸುವ ಪ್ರಯತ್ನಕ್ಕೆ ಮುಂದಾಗಿದ್ದರು ಎಂಬುದು ಈಗ ಅವರಿಂದಲೇ ಬಹಿರಂಗವಾಗಿರುವುದಕ್ಕೆ ಆಡಿಯೋ ಸಂಭಾಷಣೆ ದಾಖಲೆಖೊದಗಿಸುತ್ತದೆ. ಆದರೂ ನೈಜತೆಯನ್ನು ಮರೆ ಮಾಚಿ ಒತ್ತಡಕ್ಕೆ ಮಣಿದು ಅಮಾಯಕ ಹಿಂದೂಗಳ ಮೇಲೆ ದರ್ಪ ತೋರಿಸಲಾಗುತ್ತಿರುವುದು ಸರಿಯಲ್ಲ. ಕಾನೂನು ರೀತಿಯಲ್ಲಿ ನೈಜತೆಯನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೂರು ವರ್ಷಗಳ ಹಿಂದೆ ಪುಣಚದ ಹಿಂದೂ ಧರ್ಮದ ಶ್ರದ್ಧಾಕೇಂದ್ರವಾದ ಮಹಿಷಮರ್ಧಿನಿ ದೇವಸ್ಥಾನದಿಂದ ಲಕ್ಷಾಂತರ ಮೌಲ್ಯದ ಬೆಳ್ಳಿಯ ದೇವರ ಆಭರಣ, ಸೊತ್ತು ಕಳವಾದಾಗ ಕೆರೆಯಲ್ಲಿ ಪಿಕ್ಕಾಸು ಹಾಗೂ ಕಬ್ಬಿಣದ ರಾಡ್ ಪತ್ತೆಯಾಗಿತ್ತು. ಕಳ್ಳತನದ ಸುಳಿವಿನ ಬಗ್ಗೆ ಮಾಹಿತಿಗಳು ಸಿಕ್ಕರೂ ಆರೋಪಿಗಳನ್ನು ವಿಚಾರಣೆ ನಡೆಸುವ ಗೋಜಿಗೆ ಹೋಗದವರು ಈಗ ಒತ್ತಡಕ್ಕೆ ಮಣಿಯುತ್ತಿರುವುದು ಸರಿಯಲ್ಲ. ನಿರಪರಾಧಿಗಳನ್ನು ಬಂಧಿಸಿ ಸಮಾಜದಲ್ಲಿ ಶಾಂತಿ ಸಾಮರಸ್ಯ ಕೆಡಿಸುವ ಕೆಲಸಕ್ಕೆ ಹೋಗಬಾರದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸಿ ನೈಜತೆಯನ್ನು ಸಮಾಜಕ್ಕೆ ತೋರಿಸಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಮಂಡಲ ರೈತ ಮೋರ್ಚಾ ಉಪಾಧ್ಯಕ್ಷ ರಾಜೇಂದ್ರ ರೈ ಬೈಲುಗುತ್ತು, ಬಿಜೆಪಿ ಪುಣಚ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಎಂ., ಕಾರ್‍ಯದರ್ಶಿ ಪ್ರವೀಣ್, ಸಾಮಾಜಿಕ ಕಾರ್‍ಯಕರ್ತ ಗುರುವಪ್ಪ ಡಿ. ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here