Saturday, April 13, 2024

ಸ್ವಾತಂತ್ರ್ಯ ಯೋಧ ಶ್ಯಾಮರಾಯರಿಗೆ ರಾಷ್ಟ್ರಪತಿ ಚಹಾಕೂಟದ ನಿರೀಕ್ಷೆ

  • ಮೌನೇಶ ವಿಶ್ವಕರ್ಮ

ಬಂಟ್ವಾಳ: ತಲೆಯ ಮೇಲೆ ಗಾಂಧಿಟೋಪಿ, ಹಣೆಗೆ ವಿಭೂತಿ, ಕಣ್ಣಿಗೆ ದಪ್ಪ ಕನ್ನಡಕ, ಸುಕ್ಕುಗಟ್ಟಿದ ಚರ್ಮ.. 94 ಹರೆಯದ ಈ ಹಿರಿಯ ಜೀವ ಒಂದು ಚಹಾ ಕ್ಕಾಗಿ ಹಾತೊರೆಯುತ್ತಿದೆ.. ಅಂದಹಾಗೆ ಇದು ಅಂತಿಂತಾ ಚಹಾ ಅಲ್ಲ.. ಹಾಗಾಗಿಯೇ ಈ ಹಿರಿಯ ಜೀವಕ್ಕೆ ಆ ಚಹಾದ ನಿರೀಕ್ಷೆ..
ಹೌದು.. ಕ್ವಿಟ್ ಇಂಡಿಯಾ ಚಳುವಳಿಯ ಅಂಗವಾಗಿ ಪ್ರತೀವರ್ಷ ದೆಹಲಿಯಲ್ಲಿ ಏರ್ಪಾಡುಗೊಳ್ಳುತ್ತಿರುವ ರಾಷ್ಟ್ರಪತಿಗಳ ಚಹಾ ಕೂಟದಲ್ಲಿ ಪಾಲ್ಗೊಳ್ಳಬೇಕೆಂಬ ಆಸೆಯಿಂದ, ಕಳೆದ ನಾಲ್ಕೈದು ವರ್ಷಗಳಿಂದ ಕಾತರರಾಗಿರುವ ಬಂಟ್ವಾಳದ ಎಂ.ಡಿ.ಶ್ಯಾಮರಾವ್ ಅವರ ಕಥೆಯಿದು.
ಭಾರತಕ್ಕೆ ಸ್ವಾತಂತ್ರ್ಯ ದೊರೆತು 72 ವರ್ಷ ಕಳೆದಿದೆ. ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದವರಲ್ಲಿ ಬಹುತೇಕರು ನಮ್ಮೊಂದಿಗಿಲ್ಲ. ಇರುವವರಲ್ಲಿ ಹಲವರು ಹಾಸಿಗೆ ಹಿಡಿದಿದ್ದರೆ, ಕೆಲವರು ಮಾತ್ರ ದೈಹಿಕವಾಗಿ ಸಮರ್ಥರಾಗಿ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅಂತವರ ಸಾಲಿನಲ್ಲಿ ಬಂಟ್ವಾಳ ತಾಲೂಕಿನ ಏಕೈಕ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ ಕೂಡ ಒಬ್ಬರು. ಮೂಲತಃ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನವರಾದ ಶ್ಯಾಮರಾವ್, ತಾಲೂಕಿನ ಉಳಿಗ್ರಾಮದಲ್ಲಿ ಸರ್ಕಾರ ನೀಡಿರುವ ಜಮೀನಿನಲ್ಲಿ ಸ್ವಂತ ಮನೆ ಹೊಂದಿದ್ದರೂ, ವಿಶ್ರಾಂತ ಜೀವನದ ಹಿನ್ನೆಲೆಯಲ್ಲಿ ಶಿವಮೊಗ್ಗದ ತನ್ನ ಮಗನ ಮನೆಯಲ್ಲಿ ವಾಸ್ತವ್ಯವಿದ್ದಾರೆ. ಆದರೂ ಬಂಟ್ವಾಳದ ನಂಟು ಬಿಡದೆ, ತಾಲೂಕಿನ ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಜಿಲ್ಲಾಧಿಕಾರಿ ಕಛೇರಿಯಿಂದ ಕರೆ..!
ಕಳೆದ ಕೆಲವು ವರ್ಷಗಳ ಹಿಂದೆ ಇವರಿಗೆ ಜಿಲ್ಲಾಧಿಕಾರಿ ಕಛೇರಿಯಿಂದ ಕರೆ ಬಂದಿತ್ತು. ರಾಷ್ಟ್ರಪತಿಗಳ ಚಹಾಕೂಟಕ್ಕೆ ತೆರಳುವಿರಾ, ಒಪ್ಪಿಗೆ ಪತ್ರ ಕಳುಹಿಸಿ ಎಂದು. ಅದರಂತೆ ಇವರು ಒಪ್ಪಿಗೆ ಸೂಚಿಸಿದರು. ಜೊತೆಯಾಗಿ ತೆರಳುವ ಸಹಾಯಕನ ವಿವರವನ್ನೂ ನೀಡಿದರು. ಆದರೆ ಆ ವರ್ಷ ಇವರ ಪತ್ರಕ್ಕೆ ಮರಳಿ ಪ್ರತಿಕ್ರಿಯೆ ಸಿಕ್ಕಲೇ ಇಲ್ಲ.. ನಂತರದ ವರ್ಷ ಇವರನ್ನು ಅನಾರೋಗ್ಯ ಕಾಡಿತ್ತು, ಹಾಗಾಗಿ ದೆಹಲಿಗೆ ಬರಲಾರೆ ಎಂದಿದ್ದರು, ಆ ಬಳಿಕದ ವರ್ಷದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸೂಚನೆಯಂತೆ ಬಂಟ್ವಾಳ ತಾಲೂಕಿನ ಆಗಿನ ತಹಶೀಲ್ದಾರರು ಶ್ವಾಮ್ ರಾವ್ ಅವರನ್ನು ಕರೆಸಿ ಅವರಿಂದ ಒಪ್ಪಿಗೆ ಪತ್ರ ಕೇಳಿದ್ದರು. ಶ್ವಾಮ್ ರಾವ್ ಅವರು ದೆಹಲಿಗೆ ಹೊರಡುವ ಎಲ್ಲಾ ಉತ್ಸಾಹದಲ್ಲೂ ಇದ್ದರು. ಆದರೆ ಆ.9 ರಂದು ನಡೆಯುವ ಚಹಾಕೂಟಕ್ಕೆ ನಿಮ್ಮ ಸ್ವಂತ ಖರ್ಚಿನಲ್ಲಿ ಬನ್ನಿ ಎಂಬ ಪತ್ರ ಆ.೭ ರಂದು ಇವರ ಕೈ ಸೇರಿತ್ತು. ಎರಡು ದಿನಗಳ ಅವಧಿಯಲ್ಲಿ ಪ್ರಯಾಣ ತ್ರಾಸವೆನಿಸಿ ಆ ವರ್ಷವೂ ರಾಷ್ಟ್ರಪತಿಗಳ ಚಹಾಕೂಟದ ಆಸೆ ಕೈಬಿಡಬೇಕಾಯಿತು. ಹೀಗೆ ಕಳೆದ ಕೆಲವೊಂದು ವರ್ಷಗಳಿಂದ ರಾಷ್ಟ್ರಪತಿಗಳ ಚಹಾ ಕೂಟದಲ್ಲಿ ಭಾಗವಹಿಸಬೇಕೆನ್ನುವ ಕಾತರದಲ್ಲಿರುವ ಎಂ.ಡಿ.ಶ್ಯಾಮರಾವ್ ರವರು ಕೊನೆಗೆ ಪತ್ರಿಕೆಗಳಲ್ಲಿ ಬರುವ ರಾಷ್ಟ್ರಪತಿಗಳ ಚಹಾಕೂಟದ ಹಿಂದೆಯಷ್ಟೇ ಪೈಕಿ ಭಾವಚಿತ್ರ ಹಾಗೂ ವರದಿಯನ್ನು ನೋಡಿ ಸಮಾಧಾನ ಪಟ್ಟುಕೊಳ್ಳುವಂತಾಗಿದೆ.

ಆಸೆ ಮತ್ತೆ ಚಿಗುರಿದೆ:
94 ರ ಇಳಿವಯಸ್ಸಿನಲ್ಲಿದ್ದರೂ ಸರ್ಕಾರ ಕೊಟ್ಟಿರುವ ಬಸ್‌ಪಾಸ್ ನೆರವಿನಿಂದ ಈಗಲೂ ಶಿವಮೊಗ್ಗ-ಬಂಟ್ವಾಳ ಕ್ಕೆ ಬಸ್ಸಿನಲ್ಲೇ ಪಯಣಿಸುತ್ತಾ ಚುರುಕುತನ ಮೆರೆಯುತ್ತಿರುವ ಎಂ.ಡಿ.ಶ್ಯಾಮರಾವ್ ರವರ ದೆಹಲಿ ಚಹಾಕೂಟದ ಆಸೆ ಈ ಬಾರಿ ಮತ್ತೆ ಚಿಗುರಿದೆ. ದ.ಕ.ಜಿಲ್ಲಾಧಿಕಾರಿಗಳ ಕಛೇರಿಯ ಸೂಚನೆಯಂತೆ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಎಸ್.ಆರ್ ರವರು ಸ್ವಾತಂತ್ರ್ಯ ಯೋಧ ಶ್ಯಾಮರಾವ್ ಅವರ ಆರೋಗ್ಯದ ಕುರಿತಾದ ವರದಿ,ಒಪ್ಪಿಗೆ ಪತ್ರ ಹಾಗೂ ಸಹಾಯಕರಾಗಿ ತೆರಳುವ ಪುತ್ರ ಸತೀಶ್ ಎಸ್‌ಎಸ್ ರವರ ವಿವರವನ್ನೂ ಜಿಲ್ಲಾಧಿಕಾರಿಗಳ ಕಛೇರಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಈ ಹಿಂದಿನ ವರ್ಷಗಳಂತೆ ಎಂ.ಡಿ.ಶ್ಯಾಮರಾವ್ ಅವರ ಒಪ್ಪಿಗೆ ಪತ್ರ ಮೂಲೆ ಸೇರದೆ, ಸಕಾಲದಲ್ಲಿ ಇವರಿಗೆ ದೆಹಲಿಯಿಂದ ಆಹ್ವಾನ ಬರಲಿ. ರಾಷ್ಟ್ರಪತಿಗಳ ಚಹಾಕೂಟದಲ್ಲಿ ಭಾಗಿಯಾಗಬೇಕೆಂಬ ಇವರ ಬಯಕೆ ಈಡೇರಬೇಕಿದೆ.

ದೆಹಲಿಯಲ್ಲಿ ನಡೆಯುವ ರಾಷ್ಟ್ರಪತಿಗಳ ಚಹಾಕೂಟದಲ್ಲಿ ಭಾಗಿಯಾಗಬೇಕೆಂಬ ಆಸೆ ಇದೆ, ಕಳೆದ ನಾಲ್ಕೈದು ವರ್ಷಗಳಿಂದ ಒಂದಲ್ಲ ಒಂದು ಕಾರಣದಿಂದ ಇದು ತಪ್ಪಿ ಹೋಗುತ್ತಿದೆ. ಸ್ವಾಮಿಯ(ಸಾಯಿಬಾಬಾ) ಪ್ರೇರಣೆ ಇಲ್ಲವೋ ಏನೋ. ಈ ಬಾರಿಯಾದರೂ ನನ್ನ ಆಸೆ ಈಡೇರಬಹುದೆಂಬ ನಿರೀಕ್ಷೆ ಹೊಂದಿದ್ದೇನೆ.
-ಎಂಡಿ.ಶ್ಯಾಮರಾವ್
ಸ್ವಾತಂತ್ರ್ಯ ಹೋರಾಟಗಾರರು

 

ರಾಷ್ಟ್ರಪತಿಗಳ ಚಹಾಕೂಟದಲ್ಲಿ ಭಾಗಿಯಾಗುವ ವಿಚಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್‌ರಾವ್ ಅವರಿಗೆ ಈ ಹಿಂದಿನ ವರ್ಷಗಳಲ್ಲಿ ಆಗಿರುವಂತೆ ಈ ಬಾರಿ ಆಗಬಾರದು ಎನ್ನುವ ಕಾರಣಕ್ಕೆ ಈ ವರ್ಷ ನಾನೇ ಹೆಚ್ಚಿನ ಮುತುವರ್ಜಿ ವಹಿಸಿ, ಅವರ ಪತ್ರವನ್ನು, ಅಗತ್ಯವಿವರವನ್ನು ಜಿಲ್ಲಾಧಿಕಾರಿ ಕಛೇರಿಗೆ ಕಳುಹಿಸಿಕೊಡಲಾಗಿದೆ.
ರಶ್ಮಿ ಎಸ್.ಆರ್
ತಹಶೀಲ್ದಾರರು-ಬಂಟ್ವಾಳ

More from the blog

ಮತದಾರರ ಜಾಗೃತಿ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ ಹಾಗೂ ಬೀದಿನಾಟಕ

ತಾಲೂಕು ಪಂಚಾಯತ್‌ ಬಂಟ್ವಾಳ, ತಾಲೂಕು ಸ್ವೀಪ್‌ ಸಮಿತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಮತದಾರರ ಸಾಕ್ಷರತಾ...

ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಖಂಡನೀಯ-ಜಗದೀಶ್ ಕೊಯಿಲ

ಬಂಟ್ವಾಳ: ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಮಾಡಿದ್ದು ಖಂಡನೀಯ ಎಂದು ಜಗದೀಶ್ ಕೊಯಿಲ ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ...

ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್ : ಮೂವರಿಗೆ ಗಾಯ

ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ‌.ಸಿ.ಬಸ್ ಗೆ ಹೆಲ್ಮೆಟ್ ಧರಿಸಿದೆ...

ಮನೆ ಮನೆಗೆ ತೆರಳಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಮತಯಾಚನೆ

ನಮ್ಮ ಬೂತ್ ನಮ್ಮ ಹೊಣೆ ಘೋಷನೇಯಂತೆ ಬೂತ್ ಸಂಖ್ಯೆ 126 ವಾರ್ಡ್ 12 ರ ಅಜ್ಜೀಬೆಟ್ಟು ನಲ್ಲಿ ಮನೆ ಮನೆಗೆ ತೆರಲಿ ಲೋಕ ಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಪರವಾಗಿ ಮತ ಯಾಚನೆ...