(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಇದರ ಮಹಾಸಭೆಯು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಭವನದಲ್ಲಿ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅಧ್ಯಕ್ಷತೆಯಲ್ಲಿ ಜರಗಿದ್ದು ಸಭೆಯಲ್ಲಿ 2019 ಹಾಗೂ 2021ರ ಸಾಲಿನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ ನಡೆಸಲ್ಪಟ್ಟಿದ್ದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಇದರ ನೂತನ ಅಧ್ಯಕ್ಷರಾಗಿ ಡಾ| ರಾಜಶೇಖರ ಆರ್.ಕೋಟ್ಯಾನ್ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು. ನಿವೃತ್ತ ಸಹಕಾರಿ ಅಧಿಕಾರಿ ಚಂದ್ರಶೇಖರ ಸುವರ್ಣ ಅವರು ಚುನಾವಣಾಧಿಕಾರಿಯಾಗಿ ಅಯ್ಕೆ ಪ್ರಕ್ರಿಯೆ ನಡೆಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಮಾಜದ ಸಂಘಟನೆಯನ್ನು ಕಟ್ಟಿಕೊಂಡು ಒಂದಾಗಿ ದುರ್ಬಲ ವರ್ಗದ ಜನರ ಸೇವೆಯನ್ನು ನಿಸ್ವಾರ್ಥವಾಗಿ ಮಾಡೋಣ ಎಂದು ಮಹಾಮಂಡಲದ ಗೌರವಾಧ್ಯಕ್ಷ ಜಯ ಸಿ. ಸುವರ್ಣ ಎಂದು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ನೂತನ ಅಧ್ಯಕ್ಷ ರಾಜೇಶೇಖರ ಕೋಟ್ಯಾನ್ ಮಾತನಾಡಿ, ಇದ್ದವರಿಂದ ಪಡೆದು ಇಲ್ಲದವರಿಗೆ ಹಂಚುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಸಮಾಜ ಪ್ರತಿನಿಧಿಗಳನ್ನು ಬೆಳೆಸೋಣ, ದುರ್ಬಲ ಸಮಾಜವನ್ನು ಬಲಿಷ್ಠರನ್ನಾಗಿ ಮಾಡಲು ಒಮ್ಮನಸ್ಸಿನ ಕಾರ್ಯಕ್ರಮ ರೂಪಿಸೋಣ ಎಂದು ಕರೆಯಿತ್ತರು.
ಸಭೆಯ ಮಧ್ಯಾಂತರದಲ್ಲಿ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಹರೀಶ್ ಜಿ.ಅವಿನ್ ಅವರು ಪುತ್ತೂರು ಅಲ್ಲಿ ನಿರ್ಮಿತ ಗೆಜ್ಜೆಗಿರಿ ನಂದನಬಿತ್ತಲ್ ಕ್ಷೇತ್ರಕ್ಕೆ ರೂಪಾಯಿ 5 ಲಕ್ಷ ದೇಣಿಗೆ ಹಸ್ತಾಂತರಿಸಿದರು. ನಂತರ ಜಯ ಸುವರ್ಣ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಸಲ್ಪಟ್ಟಿತು.
ವೇದಕುಮಾರ್ ಬೆಂಗಳೂರು, ಕಟಪಾಡಿ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ್ ಪೂಜಾರಿ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು, ಶಂಕರ ಕೆ.ಸುವರ್ಣ ಮುಂಬಯಿ, ಹರೀಶ್ಚಂದ್ರ ಅಮೀನ್ ಕಟಪಾಡಿ ಅಭಿನಂದನಾ ಮಾತುಗಳನ್ನಾಡಿ ಶುಭಾರೈಸಿದರು.
ಉಪಾಧ್ಯಕ್ಷ ಪಿತಾಂಬರ ಹೆರಾಜೆ ಬೆಳ್ತಂಗಡಿ, ನೂತನ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು, ಸಹ ಕಾರ್ಯದರ್ಶಿಗಳಾದ ಗಣೇಶ್ ಎಲ್.ಪೂಜಾರಿ ಬೈಂದೂರು ಮತ್ತು ಗಂಗಾಧರ ಪೂಜಾರಿ ಬಾಳ ಚೆಳ್ಯಾರು, ಸಹ ಕೋಶಾಧಿಕಾರಿ ಶಿವಾಜಿ ಸುವರ್ಣ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದು ಕೋಶಾಧಿಕಾರಿ ಯೋಗೀಶ್ ಕೋಟ್ಯಾನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು, ಪ್ರಧಾನ ಕಾರ್ಯದರ್ಶಿ ಮೋಹನ್‌ದಾಸ್ ಪಾವೂರು ಭಂಡಾರಮನೆ ಸ್ವಾಗತಿಸಿ ವರದಿ ಮಂಡಿಸಿದರು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ನರೇಂದ್ರ ಕೆರೆಕಾಡು ಸಭಾ ಕಲಾಪ ನಿರೂಪಿಸಿದರು.
ಡಾ| ರಾಜಶೇಖರ ಆರ್.ಕೋಟ್ಯಾನ್:
ಮುಂಬಯಿನ ತುಳು ಕನ್ನಡಿಗ ನಿರ್ದೇಶಕ-ನಟ, ‘ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ತುಳು ಚಲನಚಿತ್ರ ನಿರ್ಮಾಪಕ ರಾಜಶೇಖರ್ ಆರ್.ಕೋಟ್ಯಾನ್ ಇವರಿಗೆ ಮಲೇಷಿಯಾ ರಾಷ್ಟ್ರದ ದ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್ ಸಂಸ್ಥೆಯು ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಿದೆ. ವಿಶ್ವದಾದ್ಯಂತ ಸೇವಾ ನಿರತ ಬಿಲ್ಲವ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಒಡನಾಟದಲ್ಲಿರುವ ಯುವ ಧುರೀಣ. ಇವರು ಸರಳ ಸಜ್ಜನಿಕಾ, ನಿಷ್ಠಾವಂತ ಯುವ ಬಿಲ್ಲವ ನಾಯಕ. ಮುಂಬಯಿನಲ್ಲಿ ಯುವ ಹೊಟೇಲು ಉದ್ಯಮಿ ಆಗಿದ್ದು ಸಮಾಜ ಸೇವಕರಾಗಿರುವರು.
ಕಳೆದ ವರ್ಷ ಎಐಸಿಐ ಅಧ್ಯಕ್ಷ ರಾಹುಲ್ ಗಾಂಧಿ ಆದೇಶದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ರಾಜಶೇಖರ ಕೋಟ್ಯಾನ್ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಸ್ಯಾಂಡಲ್‌ವುಡ್ ನಟ, ನಿರ್ಮಾಪಕ, ನಿರ್ದೇಶಕ, ಡಾ| ರಾಜಶೇಖರ ಕೋಟ್ಯಾನ್ ಯುವ ಹೊಟೇಲು ಉದ್ಯಮಿ ಆಗಿ, ಪುತ್ತೂರು ಪಡುಮಲೆ ಅಲ್ಲಿನ ಬಡಗನ್ನೂರು ಗ್ರಾಮದ ದೇಯಿ ಬೈದ್ಯೆತಿ, ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್’ನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷರಾಗಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರಮಿಸುತ್ತಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಕರ್ನಾಟಕ ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ರಾಜಶೇಖರ ಕೋಟ್ಯಾನ್ ಅವರಿಗೆ ಕರ್ನಾಟಕ ರಾಜ್ಯದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಚಲನಚಿತ್ರ ಪುರಸ್ಕಾರ ಸಮಾರಂಭದಲ್ಲಿ ಪ್ರದಾನಿಸಿದ್ದು ‘ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ’ ಪ್ರಶಸ್ತಿ ವಿಭಾಗದ 2014ನೇ ಸಾಲಿನ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಿದ್ದರು.