ಬಂಟ್ವಾಳ, ಜೂ. ೭: ಪುರಸಭಾ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ದೆಸೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಕೈಗೊಂಡ ಮಹತ್ವದ ಕಾರ್ಯ ಫಲ ನೀಡಿದ್ದು, ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿಯಲಾರಂಭಿಸಿದ್ದು, ಹೆಚ್ಚುವರಿ ನೀರನ್ನು ಶುಕ್ರವಾರ ಸಂಜೆ ತುಂಬೆ ಡ್ಯಾಂನತ್ತ ಬಿಡಲಾಯಿತು. ಇದರಿಂದಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರು ನಿಟ್ಟುಸಿರು ಬಿಡುವಂತಾಗಿದೆ.


ಶುಕ್ರವಾರ ಬೆಳಿಗ್ಗೆಯಿಂದ ತುಂಬೆ ಡ್ಯಾಂನಲ್ಲಿ ೨.೩೪ ಮೀ. ನೀರು ಇದ್ದು, ಮಂಗಳೂರಿಗೆ ನೀರು ಪೂರೈಕೆ ಹಿನ್ನಲೆಯಲ್ಲಿ ಪಂಪಿಂಗ್ ಕಾರ್ಯ ನಡೆದರೂ ಸಂಜೆ ೬ಗಂಟೆಯ ವೇಳೆಗೆ ತುಂಬೆ ಡ್ಯಾಂನಲ್ಲಿ ಯಥಾಸ್ತಿತಿಯಲ್ಲಿತ್ತು.
ನೆಕ್ಕಿಲಾಡಿ ಡ್ಯಾಂನಿಂದ ಹೆಚ್ಚುವರಿ ನೀರು ಹರಿದುಬಂದು ಎಂಆರ್‌ಪಿಎಲ್ ಡ್ಯಾಂನ ಅಲ್ಲಲ್ಲಿ ಶೇಖರಣೆಯಾಗಿತ್ತು. ನಾಲ್ಕು ದಿನಗಳ ಹಿಂದೆ ಶಾಸಕ ರಾಜೇಶ್ ನಾಯ್ಕ್ ಮತ್ತು ಅಧಿಕಾರಿಗಳ ತಂಡ ಎಂಆರ್‌ಪಿಎಲ್ ಡ್ಯಾಂಗೆ ತೆರಳಿ ನೀರಿನ ಮಟ್ಟವನ್ನು ಪರಿಶೀಲಿಸಿದಾಗ ಹೂಳು ತುಂಬಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿತ್ತು. ಕಳೆದ ೨ ದಿನಗಳಿಂದ ಶಾಸಕರ ನೇತೃತ್ವದಲ್ಲಿ ಪುರಸಭಾ ಸದಸ್ಯ ಗೋವಿಂದ ಪ್ರಭು ಅವರು ಮುತುವರ್ಜಿ ವಹಿಸಿ, ಡ್ಯಾಂನ ಗೇಟ್ ಮತ್ತು ಪರಿಸರದಲ್ಲಿ ತುಂಬಿದ್ದ ಹೂಳನ್ನು ತೆರವುಗೊಳಿಸಿದ ಪರಿಣಾಮ ನೀರು ಕೊಂಚ ಹರಿಯಲಾರಂಬಿತು.
ಇದರ ಪರಿಣಾಮವಾಗಿ ಶುಕ್ರವಾರ ಜಕ್ರಿಬೆಟ್ಟುವಿನಲ್ಲಿರುವ ಇಂಟೆಕ್‌ವೆಲ್‌ನಲ್ಲಿ ನೀರು ಶೇಖರಣೆಯಾಗಿದೆ. ಸಂಜೆ ನೀರಿನ ಒಳ ಹರಿವು ಹೆಚ್ಚಾದರಿಂದ ಈ ಮೊದಲು ಇಂಟೆಕ್‌ವೆಲ್ ಸಮೀಪ ಕಟ್ಟಿದ್ದ ಕಟ್ಟವನ್ನು ತೆರವು ಮಾಡಿ ಹೆಚ್ಚುವರಿ ನೀರನ್ನು ತುಂಬೆ ಡ್ಯಾಂನತ್ತ ಹರಿಯಬಿಡಲಾಯಿತು.
ಶಾಸಕರಿಂದ ವೀಕ್ಷಣೆ:
ಪರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಳೆದ ಒಂದು ವಾರಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ಶಾಸಕ ರಾಜೇಶ್ ನಾಯಕ್ ಶುಕ್ರವಾರ ಸಂಜೆ ಜಕ್ರಿಬೆಟ್ಟುವಿನ ಇಂಟಕ್‌ವೆಲ್‌ಗೆ ಭೇಟಿ ಪಂಪಿಂಗ್ ವ್ಯವಸ್ಥೆಯನ್ನು ವೀಕ್ಷಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಸರಪಾಡಿ ಎಂಆರ್‌ಪಿಎಲ್ ಡ್ಯಾಂ ಬಳಿ ಡ್ರೆಜ್ಜಿಂಗ್ ಮೆಷಿನ್ ಬಳಸಿ ಹೂಳು ಮೇಲೆತ್ತುತಿದ್ದಂತೆ ಅಲ್ಲಲ್ಲಿ ಶೇಖರಣೆಯಾಗಿದ್ದ ನೀರು ಜಕ್ರಿಬೆಟ್ಟುವಿನ ಜಾಕ್‌ವೆಲ್‌ನಲ್ಲಿ ತುಂಬಿ ಕೊಂಡಿದೆ. ಮೊನ್ನೆ ರಾತ್ರಿ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರು ತುಂಬಲು ಸಾಧ್ಯವಿಲ್ಲ. ಡ್ರಜ್ಜಿಂಗ್ ಮೂಲಕ ಗೋವಿಂದ ಪ್ರಭು ಅವರ ಸತತ ಪ್ರಯತ್ನದಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದಿದೆ.
ಇಲ್ಲಿನ ಕಟ್ಟದಲ್ಲಿ ಸಂಗ್ರಹಿಸಿಟ್ಟಿದ್ದ ಹೆಚ್ಚುವರಿ ನೀರನ್ನು ಮಂಗಳೂರಿನ ನಾಗರಿಕರು ಕೂಡಾ ಬಳಸಿಕೊಳ್ಳುವ ನಿಟ್ಟಿನಲ್ಲಿ ತುಂಬೆ ಡ್ಯಾಂನತ್ತ ಹರಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಸದ್ಯಕ್ಕೆ ಬಂಟ್ವಾಳದ ನಾಗರಿಕರಿಗರ ನೀರಿನ ಅಭಾವವಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಆದರೂ, ಜನರು ನೀರಿನ ಅಗತ್ಯತೆಯನ್ನು ತಿಳಿದುಕೊಂಡು ಮಿತವಾಗಿ ಬಳಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯ ದೇವದಾಸ್ ಶೆಟ್ಟಿ, ಸರಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ದನಂಜಯ್ ಶೆಟ್ಟಿ, ಸಂತೋಷ್ ರಾಯಿಬೆಟ್ಟು, ಸುದರ್ಶನ ಬಜ, ಅಭಿಷೇಕ್ ರೈ, ಕಾರ್ತಿಕ್ ಬಲ್ಲಾಳ್, ಪುರುಷೋತ್ತಮ ಶೆಟ್ಟಿ, ಜೋಕಿಂ ಡಿಸೋಜ, ಶಿವರಾಮ ಶೆಟ್ಟಿ ಹಾಜರಿದ್ದರು.
ಶಾಸಕರಿಂದ ಶ್ಲಾಘನೆ:
ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ಅವರು ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಗಲು-ರಾತ್ರಿ ಅವಿರತವಾಗಿ ಶ್ರಮಿಸಿ, ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಾಥ್ ನೀಡಿದ್ದಾರೆ. ಇವರ ಈ ಕಾರ್ಯಕ್ಕೆ ಪುರವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಮಾಡಬೇಕಾಗಿದ್ದ ಈ ಕಾರ್ಯವನ್ನು ಪುರಸಭಾ ಸದಸ್ಯ ಗೋವಿಂದ ಪ್ರಭು ಅವರು ಮಾಡುವ ಮೂಲಕ ಅಧಿಕಾರಿಗಳ ಕಣ್ತೆರಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here