ಮುಂಬಯಿ: ವಾಣಿಜ್ಯ ಹೂಬೆಳೆಗಳಲ್ಲಿ ಮಲ್ಲಿಗೆ ಮುಖ್ಯವಾದುದು. ಅತ್ಯಂತ ಪರಿಮಳ ಬೀರುವ ಮಲ್ಲಿಗೆಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ಪೂಜೆಗೆ ಸತ್ಕಾರಕ್ಕೆ , ಸುಗಂಧ ತೈಲ ಉತ್ಪಾದನೆಗೆ ಇದು ಬಳಸಲಾಗಿದ್ದು ಪುಷ್ಪಗಳ ರಾಣಿ ಎಂದೇ ಕರೆಯಲ್ಪಡುವ ಮಲ್ಲಿಗೆಯ ಬೇಸಾಯವನ್ನು ಹೇಗೆ ಮಾಡಬೇಕು ಎಂಬುದೇ ಈ ಶಿಬಿರದ ಮೂಲ ಆಶಯವಾಗಿದೆ. ಹಾಗಾಗಿ ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿಯ ರೈತ ಸದಸ್ಯರಿಗಾಗಿ ಮಲ್ಲಿಗೆ ಕೃಷಿಯ ವೈಜ್ಞಾನಿಕ ಬೇಸಾಯ ಪದ್ಧತಿ ಬಗ್ಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಪುಷ್ಪಹರಾಜು ಕೇಂದ್ರ ಉಡುಪಿ ಇದರ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ತಿಳಿಸಿದರು.

ತೋಟಗಾರಿಕೆ ಇಲಾಖೆ ಉಡುಪಿ, ಇದರ ಪುಷ್ಪ ಹರಾಜು ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ವತಿಯಿಂದ ಮಲ್ಲಿಗೆ ಕೃಷಿಯ ವೈಜ್ಞಾನಿಕ ಬೇಸಾಯ ಪದ್ಧತಿ ಬಗ್ಗೆ ತರಬೇತಿ ಶಿಬಿರವನ್ನು ಇಂದಿಲ್ಲಿ ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿಯ ಕಚೇರಿ ಆವರಣದಲ್ಲಿ ನಡೆಸಲಾಗಿದ್ದು, ಅನಿತಾ ಭಾಸ್ಕರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಮಾತನಾಡಿದರು.

ರೈತ ಸದಸ್ಯರಿಗೆ ಮಲ್ಲಿಗೆ ಕೃಷಿಯ ಬೇಸಾಯ ಪದ್ಧತಿಯ ಬಗ್ಗೆ ಬೆಳೆಗೆ ಬೇಕಾಗುವ ಹವಾಗುಣ, ಸ್ಥಳ, ಮಣ್ಣು ಭೂಮಿ ಸಿದ್ಧತೆ, ನಾಟಿಕ್ರಮ, ನೀರು ನಿರ್ವಹಣೆ ಹಾಗೂ ಗಿಡಕ್ಕೆ ತಗಲುವ ರೋಗ ವಿಶ್ಲೇಷಣೆಯೊಂದಿಗೆ ರಸಾಯನಿಕ ಯಾ ಸಾವಯವ ಕೀಟನಾಶಕಗಳ ಅಳವಡಿಕೆಯ ಬಗ್ಗೆ ವಿಸ್ತಾರವಾದ ವಿವರಣೆಯನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಎಸ್.ಚೈತನ್ಯ ಸಾದರ ಪಡಿಸಿದರು.

ಕಾರ್ಕಳ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಬಿ.ಶ್ರೀನಿವಾಸ ಅಥಿತಿಯಾಗಿದು, ಇಲಾಖಾ ವತಿಯಿಂದ ರೈತರಿಗೆ ಸಿಗುವ ಅನುದಾನ ಹಾಗೂ ಇತರ ಪರಿಕರ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕಾ ಕಂಪೆನಿ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮಾತನಾಡಿ ಮಲ್ಲಿಗೆಯನ್ನು ವೈಜ್ಞಾನಿಕ ನೆಲೆಯಲ್ಲಿ ಬೆಳೆದಲ್ಲಿ ಬೆಳಸುವ ರೈತನ ಸಂಸಾರದ ನಿರ್ವಹಣೆಯ ಖರ್ಚುವೆಚ್ಚ ಈ ಬೆಳೆಯಿಂದ ಸಾಧ್ಯ ಎಂದರು.

ವೇದಿಕೆಯಲ್ಲಿ ಕಂಪೆನಿ ನಿರ್ದೇಶಕರಾದ ಧರಣೇಂದ್ರ, ಪ್ರವೀಣ್ ಸಾಲ್ಯಾನ್, ಗಂಗಯ್ಯ ಪೂಜಾರಿ, ಮುರಳೀಧರ ಶರ್ಮ, ವೀಣಾ ನಾಯಕ್, ಜಯಲಕ್ಷ್ಮಿ ಮುಡಾರು, ಜ್ಯೋತಿ ಕುಲಾಲ್, ಕಂಪೆನಿ ಸಲಹೆಗಾರರಾದ ನವೀನ್‌ಚಂದ್ರ ಜೈನ್ ವೇದಿಕೆಯಲ್ಲಿದ್ದರು.

ಕಾರ್ಯಕ್ರಮವನ್ನು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್.ಆರ್ ನಿರೂಪಿಸಿದರು. ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ಇದರ ಉಪಾಧ್ಯಕ್ಷ ಹರಿಶ್ಚಂದ್ರ ತೆಂಡುಲ್ಕರ್ ಧನ್ಯವದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here