Friday, October 27, 2023

ಸ್ಮಾರ್ಟ್ ಕ್ಲಾಸಿನಿಂದ ಕೊಡಂಗೆ ಶಾಲೆಗೆ ಬಂತು ಮರುಜೀವನ

Must read

  • ಯಾದವ ಕುಲಾಲ್ ಬಿ.ಸಿ.ರೋಡ್ಹನಿಹನಿಗೂಡಿ ಹಳ್ಳವಾಗುವುದು…….ಹಾಗೆಯೇ ಹತ್ತು ಜನರು ಸೇರಿದರೇ ಒಂದು ಸರಪಳಿಯಾಗುವುದು. ಈ ಊರಿನಲ್ಲಿರುವ ಸರಕಾರಿ ಶಾಲೆ ಒಂದು ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. ಆದರೆ ಕಾಲಕ್ರಮೇಣ ನೂರು ಮಕ್ಕಳಾಗುವುದೇ ಕಷ್ಟದ ಪರಿಸ್ಥಿತಿಯಾಗಿತ್ತು. ಹೀಗೇ ಮುಂದುವರಿದು ಶಾಲೆ ಮುಚ್ಚುವ ಹಂತದಲ್ಲಿದ್ದಾಗ ಅಲ್ಲಿನ ಹಳೆ ವಿದ್ಯಾರ್ಥಿಗಳೇ ಸೇರಿ ಶಾಲಾಭಿವೃದ್ಧಿಗೆ ಹೆಗಲುಕೊಟ್ಟರು. ಕೇವಲ 5 ತಿಂಗಳ ಹಿಂದೆ ಪೆರ್ಲಿಯಾ ಎಜುಕೇಶನ್ ಟ್ರಸ್ಟ್ ಕೊಡಂಗೆ ಎಂಬ ಹೆಸರಿನಲ್ಲಿ ಟ್ರಸ್ಟ್ ಒಂದರ ನಿರ್ಮಾಣ ಮಾಡಿ ಇದರ ಮುಖಾಂತರ ಸುಮಾರು 5 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್‌ಕ್ಲಾಸ್ ರೂಮ್ ಮಾಡಿದರು. ಅಷ್ಟಕ್ಕೆ ತೃಪ್ತರಾಗಿ ಸುಮ್ಮನೆ ಕೂರಲಿಲ್ಲ. ಮನೆ ಮನೆ ಭೇಟಿ ಕೊಟ್ಟು ತಮ್ಮ ಶಾಲೆಗೆ 46 ವಿದ್ಯಾರ್ಥಿಗಳ ಸೇರ್ಪಡೆ ಮಾಡಿಯೇ ಬಿಟ್ಟರು.

    ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಕೊಡಂಗೆ ಸರಕಾರಿ ಪ್ರಾಥಮಿಕ ಶಾಲೆಯ ಕಥೆ ಇದು. ಸುಮಾರು 45 ವರ್ಷಗಳ ಹಿಂದೆ ಕೊಡಂಗೆ, ಪೆರ್ಲಿಯಾ, ಅಲೆತ್ತೂರು, ನಂದರಬೆಟ್ಟು ಭಾಗದ ವಿದ್ಯಾರ್ಥಿಗಳು ದೂರದ ಅಜ್ಜಿಬೆಟ್ಟು ಸರಕಾರಿ ಶಾಲೆ ಇಲ್ಲವೇ ಮೊಡಂಕಾಪಿನಲ್ಲಿರುವ ಖಾಸಗಿ ಅನುದಾನಿತ ಶಾಲೆಗೆ ಹೋಗಬೇಕಾಗಿತ್ತು. ಒಂದು ಕಡೆ ರಸ್ತೆಯೂ ಸಮರ್ಪಕವಾಗಿರಲಿಲ್ಲ. ಇನ್ನೊಂದು ಕಡೆ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಹೋಗಬೇಕು. ಸಣ್ಣ ಮಕ್ಕಳಿಗೆ ನಡೆದುಕೊಂಡು ಹೋಗುವುದು ಕಷ್ಟವಾಗಿತ್ತು. ಆಟೋ ಮಾಡಿಕೊಂಡು ಹೋಗೋಣವೆಂದರೆ ಅಲ್ಲಿಯ ಜನರು ಆರ್ಥಿಕವಾಗಿ ಹಿಂದುಳಿದವರಾಗಿದ್ದರು. ಈ ಸಮಸ್ಯೆಯನ್ನು ಮನಗಂಡ ದಿ. ಅಬ್ದುಲ್ ಹಾಜಿ, ದಿ. ಅಬ್ದುಲ್ ಖಾದರ್ ಕಡೆಪಿಕರಿಯ, ಹಮ್ಮಬ್ಬ ಮಾಸ್ತರ್, ಡಾ. ಕೆ. ಮಹಮ್ಮದ್ ಇವರುಗಳು 1975ರಲ್ಲಿ ತಮ್ಮ ಊರಿನಲ್ಲೇ ಸರಕಾರಿ ಶಾಲೆ ಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿ ಸರಕಾರದಿಂದ ಅಧಿಕೃತವಾಗಿ ಶಾಲೆಯನ್ನು ತೆರೆಯಲು ಒಪ್ಪಿಗೆ ಪಡೆದರು.

ನಂತರ ವರುಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಜಾಸ್ತಿಯಾಗ ತೊಡಗಿತು. ಒಂದು ಹಂತದಲ್ಲಿ ಒಂದನೇ ತರಗತಿಯಿಂದ 7ನೇ ತರಗತಿ ವರೆಗೆ ಒಂದು ಸಾವಿರಕ್ಕಿಂತ ಜಾಸ್ತಿ ವಿದ್ಯಾರ್ಥಿಗಳಿದ್ದರು. ನಂತರ ಖಾಸಗಿ ಆಂಗ್ಲ ಮಾಧ್ಯಮಗಳ ಅಬ್ಬರಕ್ಕೆ ಈ ಊರಿನ ಜನರು ಮನಸೋತು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸತೊಡಗಿದರು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಾಗ  ಊರಿನ ಶಾಲೆ ಮುಚ್ಚುವ ಹಂತಕ್ಕೆ ಬಂತು. ಆಗ ಎಚ್ಚೆತ್ತುಕೊಂಡ ಅಲ್ಲಿನ ಹಳೇ ವಿದ್ಯಾರ್ಥಿಗಳು ಝಾಕೀರ್ ಹುಸೈನ್‌ರವರ ಅಧ್ಯಕ್ಷತೆಯಲ್ಲಿ ಮತ್ತು ಪಿ. ಹಂಝರವರ ಗೌರವಾಧ್ಯಕ್ಷತೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಒಂದು ತಂಡಮಾಡಿ ಶಾಲೆಗೆ ಬೇಕಾಗುವ ಮೂಲ ಸೌಕರ್ಯಗಳನ್ನು ಪಟ್ಟಿ ಮಾಡಿ ಮೊದಲಿಗೆ ಸ್ಮಾರ್ಟ್ ಕ್ಲಾಸ್ ರೂಮ್, ಶೌಚಾಲಯ ನಿರ್ಮಾಣ, ಶಾಲೆ ಪೈಂಟಿಂಗ್, ಅತಿಥಿ ಉಪನ್ಯಾಸಕರು ಹೀಗೆ ಹಲವು ಇಲ್ಲಗಳನ್ನು ಸಾಧ್ಯ ಮಾಡಲು ಕಾರಣ ಕರ್ತರಾದರು.

ಸ್ಮಾರ್ಟ್ ಕ್ಲಾಸ್ ರೂಮ್ : ಪಾರಿವಾಳಗಳ ತಂಗುದಾಣವಾಗಿದ್ದ ಶಾಲಾ ಸಾಮಾಗ್ರಿಗಳನ್ನಿಡುವ ಸುಮಾರು 300 ಸ್ಕಾರ್ ಫೀಟ್ ವಿಸ್ತೀರ್ಣದ 2 ಕೊಠಡಿಯನ್ನು ಸ್ಮಾರ್ಟ್ ಕ್ಲಾಸ್ ರೂಮ್ ಆಗಿ ಪರಿವರ್ತಿಸಿದ್ದಾರೆ. ನೆಲದಲ್ಲಿ ಬಗೆ ಬಗೆಯ ಟೈಲ್ಸ್ ಅಳವಡಿಕೆ, ಗೋಡೆಯಲ್ಲಿ ಮಕ್ಕಳಿಗೆ ಆಟೋಟಕ್ಕೆ ಪೂರಕ ವಾತಾವರಣ ಬರಲು ಚಿತ್ತಾರಗಳು, ಜಾರು ಬಂಡಿ ಗಳನ್ನೊಳಗೊಂಡಿದೆ. ವಿದ್ಯಾರ್ಥಿಗಳ ತರಗತಿ ಕೋಣೆಯಲ್ಲಿಯೂ ಟೈಲ್ಸ್ ಅಳವಡಿಸಿದ್ದು, ಉತ್ತಮ ಬಾಳ್ವಿಕೆಯ ಬೆಂಚು, ಡೆಸ್ಕ್ ಹೊಂದಿದ್ದು ಸುಮಾರು 46 ಮಕ್ಕಳು ಒಮ್ಮೆಲೆ ಕುಳಿತು ಕೊಂಡು ವ್ಯಾಸಾಂಗ ಮಾಡಬಹುದು.

ಸುಮಾರು 82 ಸೆಂಟ್ಸ್ ಜಾಗ ಹೊಂದಿರುವ ಈ ಪ್ರಾಥಮಿಕ ಶಾಲೆ ಭದ್ರತೆ ದೃಷ್ಟಿಯಿಂದ ಸುಸಜ್ಜಿತ ಕಂಪೌಂಡ್ ಹೊಂದಿದೆ. ಸಿಸಿ ಕ್ಯಾಮರ ವನ್ನೂ ಅಳವಡಿಸಿಕೊಂಡಿದ್ದು ವಿಶಾಲವಾದ ಶಾಲಾ ಮೈದಾನವನ್ನು ಹೊಂದಿದ್ದು ಮಕ್ಕಳಿಗೆ ಕಲಿಕೆಯ ಜತೆಗೆ ಕ್ರೀಡಾಕೂಟದಲ್ಲಿಯೂ ಮುಂಚೂಣಿಯಲ್ಲಿದೆ. ಮಕ್ಕಳ ಕೈ ತೋಟವನ್ನೂ ಹೊಂದಿದ್ದು ಮಕ್ಕಳ ಬಿಸಿಯೂಟಕ್ಕೆ ತಾಜಾ ತರಕಾರಿಗಳನ್ನು ಇಲ್ಲಿಯೇ ಬೆಳೆಯುತ್ತಿದ್ದಾರೆ. ಬಳಕೆಯಾಗಿ ಹೆಚ್ಚಾದ ತರಕಾರಿಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಿ ಅದರಲ್ಲಿ ಉಳಿದ ಹಣವನ್ನೂ ಶಾಲಾ ಜೀರ್ಣೋದ್ದಾರಕ್ಕೆ ಬಳಸುತ್ತಿದ್ದಾರೆ.

ಕಳೆದ ಸಾಲಿನಲ್ಲಿ 1 ತರಗತಿಗೆ 40 ವಿದ್ಯಾರ್ಥಿಗಳನ್ನು ಹೊಂದಿದ್ದು ಈ ವರ್ಷ ಸ್ಮಾರ್ಟ್  ಕ್ಲಾಸ್‌ಗೆ 46 ಮಕ್ಕಳನ್ನು ಸೇರ್ಪಡೆಗೊಳಿಸಿದ್ದಾರೆ. ಈ ಭಾಗದಲ್ಲಿ ಸುಮಾರು 5000 ಜನಸಂಖ್ಯೆಯನ್ನು ಹೊಂದಿದ್ದು ಹೊಸ ಸೇರ್ಪಡೆಯಲ್ಲಿ 400 ವಿದ್ಯಾರ್ಥಿಗಳ ಪೋಷಕರು ಬೇಡಿಕೆ ಸಲ್ಲಿಸಿದ್ದರು. ಆದರೆ ತರಗತಿ ಕೋಣೆಯು ಚಿಕ್ಕದಾಗಿದ್ದು ಅದಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗಿದೆ. ಈ ಶಾಲೆಯಲ್ಲಿ 1ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸವನ್ನು ಕಲಿಸಲಾಗುತ್ತಿದೆ. ಅದಕ್ಕಾಗಿ ವಿಶೇಷ ಶಿಕ್ಷಕಿಯರನ್ನೂ ನೇಮಕ ಮಾಡಿದ್ದು ಹತ್ತಿರದಲ್ಲಿರುವ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸರಿಸಮಾನವಾಗಿ ಬೆಳೆದು ನಿಂತಿದೆ.

 

ನಮ್ಮ ಊರಿನ ಹಿರಿಯರು ಈ ಭಾಗದಲ್ಲಿ ಸರಕಾರಿ ಶಾಲೆಯನ್ನು ಮಾಡಿರುವುದು ತುಂಬಾ ಸಂತೋಷವಾಗಿದೆ. ಅದನ್ನು ಉಳಿಸಬೇಕಾದುದು ನಮ್ಮ ಕರ್ತವ್ಯ. ನಮ್ಮ ಸ್ನೇಹಿತರನ್ನೆಲ್ಲಾ ಸೇರಿಸಿಕೊಂಡು ಈ ಶಾಲೆಗೆ ಈಗ 5 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್, ಶೌಚಾಲಯ, ಪೈಂಟಿಂಗ್ ಮಾಡಿದ್ದೇವೆ. ಈ ಊರಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು ಸರಕಾರಿ ಶಾಲೆಯಲ್ಲಿಯೇ ಮಕ್ಕಳಿಗೆ ಬೇಕಾಗುವ ಅನುಕೂಲಗಳನ್ನು ಈಡೇರಿಸಿದರೆ ಆಂಗ್ಲ ಮಾದ್ಯಮ ಶಾಲೆಗೆ ಹೋಗುವುದನ್ನು ತಪ್ಪಿಸಬಹುದು. ಮುಂದಿನ ದಿನದಲ್ಲಿ ನಮ್ಮ ಟ್ರಸ್ಟ್‌ನ ಮುಖಾಂತರ ಶಾಲೆಯನ್ನು ದತ್ತು ಪಡೆದು ಇನ್ನೂ ಅಭಿವೃದ್ಧಿ ಮಾಡಲು ಬಯಸಿದ್ದೇವೆ.
– ಝಾಕೀರ್ ಹುಸೈನ್, ಅಧ್ಯಕ್ಷರು ಪೆರ್ಲಿಯಾ ಎಜುಕೇಶನ್ ಟ್ರಸ್ಟ್ ಕೊಡಂಗೆ

ಶಾಲೆಯಲ್ಲಿ ವಿಶಾಲವಾದ ಮೈದಾನವಿದೆ. ನಮ್ಮ ಮಕ್ಕಳಿಂದಲೇ ನಿರ್ಮಾಣ ಮಾಡಿದ ಕೈತೋಟ ಇದೆ. ಅದರಲ್ಲಿ ತರಕಾರಿಗಳನ್ನು ಬೆಳೆಸುತ್ತೇವೆ. ಬಿಸಿಯೂಟಕ್ಕೆ ಬೇಕಾಗುವಷ್ಟು ತರಕಾರಿ ತೆಗೆದು ಹೆಚ್ಚಿನ ತರಕಾರಿಯನ್ನು ಮಾರುಕಟ್ಟೆ ಕೊಟ್ಟು ಅದರ ಉಳಿಕೆ ಹಣದಿಂದ ಶಾಲಾ ಅಭಿವೃದ್ಧಿಗೆ ವಿನಿಯೋಗಿಸುತ್ತೇವೆ. ಸ್ಮಾರ್ಟ್ ಕ್ಲಾಸ್‌ನಿಂದ ಶಾಲೆಯ ವಾತಾವರಣವೇ ಬದಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಮುಂದಿನ ದಿನದಲ್ಲಿ ಶಾಲೆಗೆ ಹೆಚ್ಚುವರಿ ಕೋಣೆಯೂ ಬೇಕಾಗಬಹುದು. ಅದರ ನಿರ್ಮಾಣ ಮಾಡಲು ಸರಕಾರದ ಸಹಾಯಧನ ಅಗತ್ಯವಿದೆ.

  • ಬಿ.ಎಂ. ಇಸ್ಮಾಯಿಲ್, ಎಸ್‌ಡಿಎಂಸಿ ಅಧ್ಯಕ್ಷರು

More articles

Latest article