ಬಿಕ್ಕುತಿರುವೆ ನಿನ್ನ
ಒಲವಿನಕ್ಕರೆಯ ನೆನೆ ನೆನೆದು!
ಹೋದ ದಾರಿಯಲೆ
ಬಂದು ಬಿಗಿದಪ್ಪು ಎದೆ ತೆರೆದು!

ನಗುವಿನಲೆಯ ತುಮುಲಕೆ
ಮುಗಿಲ ತಾರೆ ಕಿಲ ಕಿಲ
ಒಲವಿನಲರ ಮೊರೆತಕೆ
ಬಿರಿದ ಎದೆಯೆ ವಿಲ ವಿಲ
ತರಂಗಗಳುನ್ಮಾದವ ತೀರ
ಸಹಿಸಿಕೊಳ್ಳುವುದು ಬಿಡದೆ!
ಮನದಾಂಬುಧಿಯ ತಳಮಳವ
ಬೇಗ ಸಂತೈಸು ಕಾಡದೆ!
ನಗುವಿನಲೆಯ ಕಡಲಲಿ
ಅರಳುತಿರುವ ಚಂದಿರ
ಮೊಗದ ಬಾನ ಬಯಲಲಿ
ಹಾಕುತಿರು ಹಂದರ
ಏನೊಂದೂ ಕೇಳದೇ ಎದೆಯ
ವನದೊಳಿಳಿದು ನಲಿದೆ ನೀ !
ಅರಳಿಸುತಿರುವೆ ಒಲವ ಸುಮವ
ಗೆಲಿದೆ ನನ್ನ ನಲ್ಲೆ ನೀ!
ಕಣ್ಣು ಕಣ್ಣು ಕಲೆತಾಗ
ಹೃದಯದಲಿ ಅದೇನೋ ಆವೇಗ!
ಎಷ್ಟೇ ಪ್ರಯತ್ನಿಸಿದರೂ
ನಿಲ್ಲದು ಎದೆ ಬಡಿತದ ಆ ವೇಗ!
ಗಲ್ಲದ ಮೇಲೆ ನಲ್ಲ ಕೆತ್ತಿದ
ಚಿತ್ರದಲಿ ಅದೆಂಥ ಕುಸುರಿ!
ಅವನೊಲವ ಜೊಲ್ಲಿನ ರಸಕೆ
ನನ್ನೆದೆಯು ತಂತಾನೇ ಬಸುರಿ!!
ತೋರದಿರುವ ಒಲವಿಗೆ
ತನ್ನ ಬಿಟ್ಟು ಬೇರೇನೂ ಇಲ್ಲ
ಕಾಣದಿರುವ ಮನಸಿಗೆ
ಉಟ್ಟುಕೊಳ್ಳಲು ಸೀರೇನೇ ಇಲ್ಲ
ನಿದ್ದೆಯ ವಶವಾಗುವ
ಬುದ್ಧಿಗೆ ಮಂಕು
ಬುದ್ಧಿ ಮಂಕಾದೊಡನೆ
ನಿದ್ದೆಯ ಕೊಂಕು
#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301