ಬಂಟ್ವಾಳ: ಪುನರ್ ನಿರ್ಮಾಣಗೊಳ್ಳುತ್ತಿರುವ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ಗರ್ಭಗುಡಿ ಪ್ರವೇಶ ಧ್ವಾರ ಪ್ರತಿಷ್ಠೆಯು ಶುಕ್ರವಾರ ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಪುರೋಹಿತರಾದ ಕೇಶವ ಶಾಂತಿ ನಾಟಿ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು. ಐತಿಹಾಸಿಕ ಹಿನ್ನೆಲೆಯ ಕಾರಣೀಕ ಕ್ಷೇತ್ರವಾಗಿರುವ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಈಗಾಗಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರಿಗೆ ನೂತನ ದೇವಸ್ಥಾನ ಸಹಿತ ಪರಿವಾರ ದೈವದೇವರುಗಳಿಗೆ ನೂತನ ಸಾನಿಧ್ಯವನ್ನು ನಿರ್ಮಿಸಲು ಸಂಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ನೂತನ ಸಾನಿಧ್ಯಗಳ ಪ್ರವೇಶ ಧ್ವಾರ ಪ್ರತಿಷ್ಠೆಯನ್ನು ಊರಪರವೂರ ಭಕ್ತಾದಿಗಳ ಸಮಕ್ಷಮದಲ್ಲಿ ವಿಧಿವತ್ತಾಗಿ ನೆರವೇರಿಸಲಾಯಿತು.

ಮಾಜಿ ಸಚಿವ ಬಿ.ರಮಾನಾಥ ರೈ, ನಿವೃತ್ತ ಬ್ಯಾಂಕ್ ಅಧಿಕಾರಿ ಬೇಬಿ ಕುಂದರ್, ಪುರಸಭಾ ಸದಸ್ಯ ವಾಸು ಪೂಜಾರಿ ಲೊರೆಟ್ಟೊ, ಅನುವಂಶೀಯ ಆಡಳಿತ ಮೊಕ್ತೇಸರ ಅರುಣ್ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ಪ್ರಧಾನ ಕಾರ್ಯದರ್ಶಿ ನಾಗೇಶ್ ದರ್ಬೆ, ಕೋಶಾಧಿಕಾರಿ ಜಯಶಂಕರ ಕಾನ್ಸಾಲೆ, ಸಲಹೆಗಾರರಾದ ಸಂತೋಷ್ ಕುಮಾರ್ ಕೊಟ್ಟಿಂಜ, ಗೋಪಾಲ ಅಂಚನ್, ಶ್ರೀ ಮಹಮ್ಮಾಯಿ ಕ್ಷೇತ್ರ ಪ್ರತಿಷ್ಠಾನದ ಅಧ್ಯಕ್ಷ ಕೊರಗಪ್ಪ ಕೊಲಂಬೆಬೈಲು, ಸಮಿತಿ ಪದಾಧಿಕಾರಿಗಳಾದ ಮಚ್ಚೇಂದ್ರ ಸಾಲಿಯಾನ್, ವಾಮನ ಕುಲಾಲ್ ಜಕ್ರಿಬೆಟ್ಟು, ಭಾಸ್ಕರ ಅಜೆಕಲ, ಗಂಗಾಧರ ಸಾಮಾನಿ ದರ್ಬೆ, ಮರದ ಶಿಲ್ಪಿ ಪ್ರವೀಣ್ ಅಮೀನ್, ಕುಬೇರ, ವೆಂಕಪ್ಪ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿಚಂದ್ರ ಬರ್ದೆಲ್ ಮೊದಲಾದವರಿದ್ದರು.