ಬಂಟ್ವಾಳ: ವಾಹನವೊಂದನ್ನು ಒವರ್ ಟೇಕ್ ಮಾಡುವ ಭರದಲ್ಲಿ ಪೋಲೀಸ್ ಜೀಪ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದು ಅಲ್ಪಸ್ವಲ್ಪ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕಲ್ಲಡ್ಕ ಸಮೀಪದ ನರಹರಿ ಪರ್ವತದ ಬಳಿ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಬೋಳಂತೂರು ನಿವಾಸಿ ಮುಸ್ತಾಪ ಎಂದು ಗುರುತಿಸಲಾಗಿದೆ. ವಿಟ್ಲ ಎಸ್.ಐ. ಯಲ್ಲಪ್ಪ ಅವರು ವಿಶೇಷ ಕರ್ತವ್ಯಕ್ಕೆಂದು ವಿಟ್ಲದಿಂದ ಮಂಗಳೂರು ಕಡೆಗೆ ಜೀಪ್ ನಲ್ಲಿ ಹೋಗುತ್ತಿದ್ದ ವೇಳೆ ನರಹರಿ ಪರ್ವತದ ಬಳಿಯಲ್ಲಿ ಬಿ.ಸಿ.ರೋಡಿನ ಕಡೆಯಿಂದ ಬರುತ್ತಿದ್ದ ಬೈಕ್ ಸವಾರ ಒವರ್ ಟೇಕ್ ಮಾಡುವ ವೇಳೆ ರಾಂಗ್ ಸೈಡಿಗೆ ಏಕಾಏಕಿ ಬಂದು ಜೀಪ್ ಗೆ ಡಿಕ್ಕಿಹೊಡೆದಿದ್ದಾನೆ.
ಡಿಕ್ಕಿ ಹೊಡೆದ ರಭಸಕ್ಕೆ ಈತ ಬೈಕಿನಿಂದ ರಸ್ತೆಯ ಬದಿಗೆ ಎಸೆಯಲ್ಪಟ್ಟು ಸಣ್ಣ ಪುಟ್ಟ ಗಾಯಗಳೊಂದಿಗೆ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ.
ಡಿಕ್ಕಿಯಾದ ಬೈಕನ್ನು ಜೀಪ್ ಸುಮಾರು ದೂರ ಎಳೆದುಕೊಂಡು ಹೋಗಿದೆ ಎಂದು ಹೇಳಲಾಗಿದೆ. ಗಾಯಗೊಂಡ ಮುಸ್ತಾಪನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
