ಬಂಟ್ವಾಳ, ಜೂ. ೧೫: ಇಂದು ಬಂಟ್ವಾಳ ತಾಲೂಕಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ
ಮಂಗಳೂರು ಸಹಾಯಕ ಆಯುಕ್ತರು ಗೈರು ಹಾಜರಿಯ ಬಗ್ಗೆ ಕಂದಾಯ ಸಚಿವರಿಗೆ ವರದಿ ನೀಡುವುದಾಗಿ ಐವನ್ ಡಿಸೋಜಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತರು ಗೈರು ಹಾಜರಿಯ ಬಗ್ಗೆ ಮಾಜಿ ಸಚಿವ ರಮಾನಾಥ ರೈ ಅವರು ಗಮನಸೆಳೆದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ವಿರೋಧಪಕ್ಷಗಳು ಆಡಳಿತ ಪಕ್ಷದ ಮೇಲೆ ಆರೋಪ ಮಾಡುವ ಬದಲು ಇಂತಹ ಪ್ರಗತಿಪರಿಶೀಲನೆ ಮಾಡುವ ಸತ್ಯಾಂಶ ತಿಳಿದುಕೊಳ್ಳಲಿ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಅವರು ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ತಿಳಿಸಿದ್ದಾರೆ.
ರಾಜ್ಯ ಸರಕಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ವಿರೋಧ ಪಕ್ಷಗಳ ಆರೋಪ ಸತ್ಯಕ್ಕೆ ದೂರವಾದ್ದು ಎಂದ ಅವರು, ಬಂಟ್ವಾಳ ತಾಲೂಕಿನಲ್ಲಿ ಶೇ. ೩೦ ರಷ್ಟು ಅಂದರೆ ೩೮.೮೨ ಕೋಟಿ ರೂ. ಸಾಲಮನ್ನಾ ಮಾಡಿದೆ ಎಂದರು.
ಸರಕಾರ ಸತ್ತಿದೆ ಎಂದು ವಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಹಾಗಾದರೆ ಇವುಗಳು ಅಭಿವೃದ್ಧಿ ಅಲ್ಲವೇ. ಧರಣಿ ಮಾಡುವ ಬದಲು ಪ್ರಗತಿಪರಿಶೀಲನೆ ಮಾಡಿ ಎಂದು ಹೇಳಿದರು.
ರಾಜ್ಯ ಸರಕಾರ ಬಡವರ ಪರವಾಗಿದೆ. ಬಡವರಿಗಾಗಿ ಹಾಕಿಕೊಂಡಿರುವ ಕಾರ್ಯಕ್ರಮಗಳನ್ನು ಸರಕಾರ ಈಡೇರಿಸುತ್ತಿದೆ ಎಂದರು.
ರಾಜ್ಯದ ಬರ ಪರಿಹಾರದ ವಿಚಾರದಲ್ಲೂ ವಿಪಕ್ಷಗಳು ಜನರಿಗೆ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿದೆ. ಶಿವಮೊಗ್ಗದಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಸಾಲವನ್ನು ಮನ್ನ ಮಾಡಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಖಾತೆಗಳಿಗೆ ನೇರವಾಗಿ ಜಮೆ ಮಾಡುವ ಮೂಲಕ ರೈತರಿಗೆ ಸರಕಾರ ನೆರವಾಗಿದೆ ಎಂದರು.
ತಾಲೂಕಿನಲ್ಲಿ ೧೫ ಸಾವಿರ ಎಕರೆ ಭೂಮಿಯನ್ನು ರೈತರಿಗೆ ಕಡಿಮೆ ದರದಲ್ಲಿ ನೀಡಲಾಗಿದೆ. ಜಿಲ್ಲೆಯಲ್ಲಿ ೧೮೧ ಕೋಟಿ ರೂ. ರೈತರ ಸಾಲಮನ್ನಾ, ತಾಲೂಕಿನಲ್ಲಿ ೨೫ ಸಾವಿರ ಮಂದಿ ಪಿಂಚಣಿ, ೫೫,೦೧೮ ಬಿಪಿಎಲ್ ಕಾರ್ಡ್‌ದಾರರು, ೬,೦೮೪ ಅಂತ್ಯೋದಯ ಕಾರ್ಡ್‌ದಾರರೂ ಬಂಟ್ವಾಳ ತಾಲೂಕಿನಲ್ಲಿದ್ದಾರೆ. ಅರ್ಜಿ ಸಲ್ಲಿಸಿದ ಕೇವಲ ೯ ಬಿಪಿಎಲ್ ಕಾರ್ಡ್ ಮಾತ್ರ ವಿತರಣೆಗೆ ಬಾಕಿ ಇದೆ ಎಂದರು.
ತಾಲೂಕಿನಲ್ಲಿ ೧೮ ಸಾವಿರ ೯೪ಸಿ-ಸಿಸಿ ಅಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದ್ದು, ಮಾಜಿ ಸಚಿವ ರಮಾನಾಥ ಅವರ ಅಧಿಕಾರದಲ್ಲಿ ಇದು ರಾಜ್ಯದಲ್ಲೇ ಪ್ರಥಮ ಎಂದು ಹೇಳಿದರು.
ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಪದ್ಮಶೇಖರ್ ಜೈನ್, ಮಮತಾಗಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ ಬಿ.ಎಂ, ಸದಸ್ಯ ಉಸ್ಮಾನ್ ಕರೋಪಾಡಿ ಉಪಸ್ಥಿತರಿದ್ದರು.