Thursday, September 28, 2023

ಕಲಾವಿದ ಝುಬೇರ್ ಖಾನ್ ಕುಡ್ಲ ಅವರಿಗೆ ಗೌರವ ಡಾಕ್ಟರೇಟ್

Must read

ಮಂಗಳೂರು:  ಕಲಾವಿದ ಝುಬೇರ್ ಖಾನ್ ಕುಡ್ಲ ಅವರಿಗೆ ಪಾಂಡಿಚೇರಿಯ ಗ್ಲೋಬಲ್ ಪೀಸ್ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಜೂನ್‌ 9 ರಂದು ಪಾಂಡಿಚೇರಿಯಲ್ಲಿ ನಡೆದ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇವರು ಕಲೆ ಹಾಗೂ ಮಕ್ಕಳ ಕ್ರಿಯಾತ್ಮಕ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಲಲಿತಕಲೆ ವಿಭಾಗದಲ್ಲಿ ಈ ಗೌರವಕ್ಕೆ ಇವರನ್ನು ಆರಿಸಲಾಗಿದೆ.
ಸಮಾರಂಭದಲ್ಲಿ ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ. ಸ್ವಾಮಿ ದೋರೈ, ಜರ್ಮನಿಯ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಯ ಸಲಹೆಗಾರರಾದ ಜಾನ್ ಪೀಟರ್ ಜಸ್ ಬರ್ಗ್, ಇಂಗ್ಲೆಂಡ್ ಜಿಪಿಯು ನ ಡಾ| ರಾಯಲ್ ಪ್ರೆಸೆನ್ಟ್, ದಕ್ಷಿಣ ಭಾರತದ ಖ್ಯಾತ ನಟರಾದ  ರಂಜಿತ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಗೌರವಿಸಲಾಯಿತು.
ದುಬೈ ನ ಏಶಿಯನ್ ಕಿಡ್ಸ್ ಅಕಾಡೆಮಿಯ ಕಲಾ ನಿರ್ದೇಶಕರಾಗಿರುವ ಝಬೇರ್ ರವರು ಕಳೆದ ಇಪ್ಪತ್ತು ವರ್ಷಗಳಿಂದ ಕಲೆ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. 300ಕ್ಕೂ ಅಧಿಕ ಮಕ್ಕಳ ಕ್ರಿಯಾತ್ಮಕ ಶಿಬಿರಗಳಲ್ಲಿ ನಿರ್ದೇಶಕರಾಗಿ, ಸಂಪನ್ಮೂಲ ವ್ಯಕ್ತಿ, ಸಂಘಟಕರಾಗಿ ತೊಡಗಿಸಿಕೊಂಡಿದ್ದಾರೆ.
ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ ಅಬ್ದುಲ್ ಕಲಾಂ ರಿಂದ ಮೆಚ್ಚುಗೆ ಪತ್ರ ಪಡೆದಿರುವ ಇವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಲಾಂ ಪ್ರದರ್ಶನಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮನ್ನಣೆಯನ್ನು ಪಡೆದಿರುತ್ತಾರೆ.
ರಂಗ ಸ್ವರೂಪ ಕುಂಜತ್ತಬೈಲ್ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಝುಬೇರ್ ಮಂಗಳೂರು ಮಹಾನಗರ ಪಾಲಿಕೆ ಉದ್ಯೋಗಿ  ಆದಂಖಾನ್ , ಫಾತಿಮ ದಂಪತಿಯ ಪುತ್ರ.
ಮಂಗಳೂರಿನ ಮಹಾಲಸ ಚಿತ್ರಕಲಾ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಶ್ವ ವಿದ್ಯಾನಿಲಯದಿಂದ ಚಿತ್ರಕಲಾ ಪದವೀಧರರು.

More articles

Latest article