Wednesday, October 18, 2023

’ನಾರಾಯಣಗುರುಗಳ ಚಿಂತನೆಯಲ್ಲಿ ದೇಶದ ಉಜ್ವಲ ಭವಿಷ್ಯ’- ಬಲ್ಯೊಟ್ಟು ಶ್ರೀ

Must read

ವಿಟ್ಲ: ದೇಶದಲ್ಲಿ ಸಾಮಾಜಿಕ ಅಸಮತೋಲನ, ಜಾತಿ ವ್ಯತ್ಯಾಸ, ಕಂದಾಚಾರದ ಕಾಲಘಟ್ಟದಲ್ಲಿ ಹುಟ್ಟಿಬಂದ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ ಭವಿಷ್ಯದಲ್ಲಿ ಸದೃಢ, ಸಂಘಟಿತ ಸಮಾಜ ನಿರ್‍ಮಾಣ ಮಾಡಿದ್ದು, ಪ್ರತಿಯೊಬ್ಬನ ಉನ್ನತ ಜೀವನದ ಪಥಕ್ಕೆ ಕಾರಣವಾಗಿದೆ. ರಾಗ, ದ್ವೇಷ, ಸಂಕುಚಿತ ಮನೋಭಾವನೆಯನ್ನು ಬಿಟ್ಟು, ಸಮಾಜ ಸೇವೆಯನ್ನು ಮಾಡಬೇಕು. ಬಡ ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆಯನ್ನು ಮಾಡಬೇಕು. ಸಂಘಟನೆಯನ್ನು ಬಲಪಡಿಸಬೇಕು ಎಂದು ಕಾರ್ಕಳ ಬಲ್ಯೊಟ್ಟು ಹೊಸ್ಮಾರು ಶ್ರೀ ಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನುಡಿದರು.
ಅವರು ಭಾನುವಾರ ವಿಟ್ಲ ಬಿಲ್ಲವ ಸಂಘ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ಪೊನ್ನೊಟ್ಟು ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ವಾರ್ಷಿಕ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್‍ಯದರ್ಶಿ ಜಯಪ್ರಕಾಶ್ ಮಾತನಾಡಿ ಯುವಕಯುವತಿಯರಿಗೆ ಉತ್ತಮ ಜೀವನದ ಬಗ್ಗೆ ಮಾರ್ಗದರ್ಶನದ ಅವಶ್ಯಕತೆಯಿದೆ. ಸಮಾಜದ ಪ್ರತಿಭಾವಂತರನ್ನು ಗುರುತಿಸಿ ಮಾರ್ಗದರ್ಶನ ನೀಡಿ ಬೆಳೆಸುವ ಕಾರ್‍ಯ ಸಂಘಸಂಸ್ಥೆಗಳಿಂದ ನಡೆಯಬೇಕು ಎಂದರು.
ಬಿಲ್ಲವ ಸಂಘದ ಅಧ್ಯಕ್ಷ ಜಗದೀಶ ಪಾಣೆಮಜಲು ಅಧ್ಯಕ್ಷತೆ ವಹಿಸಿದ್ದರು. ಎ., ವಿಟ್ಲ ಅಶ್ವಿನಿ ಡೆಂಟಲ್ ಕ್ಲಿನಿಕ್‌ನ ಡಾ.ಕಿಶೋರ್ ಬಂಗೇರ, ವಿಟ್ಲ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಲತಾ ಸೋಮಶೇಖರ್ ಭಾಗವಹಿಸಿದರು.
ಬಿಲ್ಲವ ಸಂಘದ ಗೌರವಾಧ್ಯಕ್ಷ ಸತ್ಯನಾರಾಯಣ ಎಸ್., ಪ್ರಮುಖರಾದ ಬಾಬು ಕೆ.ವಿ., ಚಂದ್ರಹಾಸ ಸುವರ್ಣ, ಡಾ.ಗೀತಪ್ರಕಾಶ್ ಎ., ರಮೇಶ್ ಆರ್.ಎಸ್., ಮಾಧವ ಪೂಜಾರಿ ಪಟ್ಲ, ಹರೀಶ್ ಪೂಜಾರಿ, ಜಯಪ್ರಕಾಶ್, ಮಹಿಳಾ ಸಂಘದ ಗೌರವಾಧ್ಯಕ್ಷೆ ಪುಷ್ಪಾ ಸುಂದರ ಪೂಜಾರಿ, ಸುಜಾತಾ ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ:
ಇದೇ ಸಂದರ್ಭ ರೋಟರಿ ಜಿಲ್ಲೆ 3181ರ ಗವರ್ನರ್ ರೋಹಿನಾಥ ಪಾದೆ, ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್, ಪುತ್ತೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಸಿ.ಎಚ್. ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಟ್ಲ ಬಿಲ್ಲವ ಸಂಘದ ಕಾರ್‍ಯದರ್ಶಿ ಜಯಂತ್ ಪಿ. ಸ್ವಾಗತಿಸಿದರು. ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಎನ್. ಪ್ರಸ್ತಾವಿಸಿದರು. ಪ್ರವೀಣ್ ಅಳಿಕೆ ವಂದಿಸಿದರು. ಲಕ್ಷ್ಮೀಶ್ ಸುವರ್ಣ ಮಂಗಳೂರು ನಿರೂಪಿಸಿದರು.
ಸೋನಾಲಿ, ಧನುಶ್ರೀ, ಪ್ರಣಮ್ಯಾ ಆಶಯಗೀತೆ ಹಾಡಿದರು. ಸಂಜೀವ ಪೂಜಾರಿ ಎಂ., ಸಂದೀಪ್, ವನಿತಾ ಚಂದ್ರಹಾಸ ಸುವರ್ಣ ಸಮ್ಮಾನಪತ್ರ ವಾಚಿಸಿದರು. ತುಷಾರಾ ದಾಮೋದರ್, ಹರೀಶ್ ಸಿ.ಎಚ್. ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಬೆಳಗ್ಗೆ ಹರೀಶ್ ಶಾಂತಿ ಬಲ್ನಾಡು ನೇತೃತ್ವದಲ್ಲಿ ವಾರ್ಷಿಕ ಶ್ರೀಸತ್ಯನಾರಾಯಣ ಪೂಜೆ ನೆರವೇರಿತು. ಬಳಿಕ ಮಂಜನಾಡಿ ಶ್ರೀವಿಷ್ಣುಮೂರ್ತಿ ಯಕ್ಷಗಾನ ಅಧ್ಯಯನ ಕೇಂದ್ರದ ಬಾಲಕಲಾವಿದರಿಂದ ’ಬಿರ್ದ್‌ದ ಬೀರೆ ಅಭಿಮನ್ಯು’ ತುಳು ಯಕ್ಷಗಾನ ಪ್ರದರ್ಶನಗೊಂಡಿತು.

More articles

Latest article