Tuesday, October 31, 2023

ಡಾ| ಬಿ.ಆರ್ ಅಂಬೇಡ್ಕರ್ ಅವರ 128ನೇ ಜನ್ಮದಿನಾಚರಣೆ

Must read

ವಿಟ್ಲ: ಅಂಬೇಡ್ಕರ್ ಅವರ ಜೀವನ ಆದರ್ಶ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದಾಗ ಅದು ಯಶಸ್ಸಿಯಾಗುತ್ತದೆ. ವಿದ್ಯಾರ್ಥಿಗಳು ಚಿಕ್ಕಂದಿನಿಂದಲೆ ಶಿಕ್ಷಣಕ್ಕೆ ಒತ್ತು ನೀಡಿದಾಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ದಲಿತ್ ಸಂಘಟನೆ ಪುಸ್ತಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ವಿಟ್ಲ ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪೈ ಹೇಳಿದರು.
ಅವರು ಭಾನುವಾರ ವಿಟ್ಲದ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಹಾಗೂ ದಲಿತ್ ಸೇವಾ ಸಮಿತಿ ವಿದ್ಯಾರ್ಥಿ ಸಂಘಟನೆ ವತಿಯಿಂದ 12 ನೇ ವರ್ಷದ ಡಾ. ಬಿ.ಆರ್ ಅಂಬೇಡ್ಕರ್ ಅವರ 128ನೇ ಜನ್ಮದಿನಾಚರಣೆ ಮತ್ತು ದಲಿತ್ ಸೇವಾ ಸಮಿತಿ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಅಂಬೇಡ್ಕರ್ ಅವರು ಕೇವಲ ಭಾರತಿಯರಲ್ಲಿ ಮಾತ್ರವಲ್ಲದೇ ಹೊರ ದೇಶದವರ ಹೃದಯದಲ್ಲಿದ್ದಾರೆ. ಅವರ ಆದರ್ಶ ಮೈಗೂಡಿಸಿಕೊಂಡಾಗ ಆದರ್ಶ ಸಮಾಜ ನಿರ್‍ಮಾಣಗೊಳ್ಳುತ್ತದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಮಕ್ಕಳಲ್ಲಿ ಪುಸ್ತಕ ಮೇಲೆ ಗೌರವ ಇಲ್ಲದಂತಾಗಿದೆ. ಅಂಬೇಡ್ಕರ್ ಅವರ ವಿಚಾರ ತಿಳಿದುಕೊಂಡಾಗ ಪುಸ್ತಕದ ಮಹತ್ವ ತಿಳಿಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡೊಂಬಯ್ಯ ಪಂಡಿತ್ ಏಮಾಜೆ, ದಿವ್ಯಶ್ರೀ ಕಲ್ಲಜೇರ, ನಂದಿತಾ, ಪೂರ್ಣಶ್ರೀ ಅವರನ್ನು ಸನ್ಮಾನಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಅವರ ತಾಯಿ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಕೊಕ್ಕೋ ಸಸಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಆದಿದ್ರಾವಿಡ ಸಮಾಜ ಸೇವಾ ಸಂಘದ ಮಾಜಿ ಜಿಲ್ಲಾಧ್ಯಕ್ಷ ಮೋಹನ್ ನೆಲ್ಲಿಗುಂಡಿ, ವಿಟ್ಲ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ನಾಯ್ಕ, ಕೆದಿಲ ಬಿಲ್ಲವ ಸಂಘದ ಅಧ್ಯಕ್ಷ ಮಾರಪ್ಪ ಸುವರ್ಣ, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷೆ ಪ್ರೇಮ ನಾಯ್ಕ ದಡ್ಡಲತ್ತಡ್ಕ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಿವ್ಯಶ್ರೀ ಕಲ್ಲಜೇರ ಮೊದಲಾದವರು ಉಪಸ್ಥಿತರಿದ್ದರು.

ಪ್ರಸಾದ್ ಅನಂತಾಡಿ ಸ್ವಾಗತಿಸಿದರು. ಚಂದ್ರಶೇಖರ ಯು. ನಿರೂಪಿಸಿ, ವಂದಿಸಿದರು.

More articles

Latest article