ವಿಟ್ಲ: ಚುಟುಕು ಎಂಬುದು ಸಾಹಿತ್ಯದ ಒಂದು ಗುಟುಕಿನಂತೆ. ಸಂಕ್ಷಿಪ್ತವಾದರೂ ಚುಟುಕುಗಳು ಸಮಗ್ರತೆಯನ್ನು ಹೊಂದಿರುತ್ತವೆ.
ಕವಿಯು ಸ್ವತಂತ್ರವಾಗಿ ಮತ್ತು ಸ್ವೋಪಜ್ಞತೆಯಿಂದ ಕಟ್ಟಿದ ಚುಟುಕುಗಳು ಹೊಸ ಪ್ರಯೋಗಗಳಾಗಿ ಖ್ಯಾತಿ ಪಡೆದು ಓದುಗರನ್ನು
ಸೆಳೆದು ಉಳಿದುಬಿಡುತ್ತವೆ. ಜಂಜಡದ ನಡುವೆ ಅವಸರದಲ್ಲೂ ಓದಬಲ್ಲ ಚುಟುಕು ಆಧುನಿಕ ಸಾಹಿತ್ಯದಲ್ಲಿ ಮಹತ್ವದ ಪ್ರಕಾರವಾಗಿ
ಜನಪ್ರಿಯವಾಗಿದೆ ಎಂದು ಸಾಹಿತಿ, ಅಧ್ಯಾಪಕ ಶಿವಕುಮಾರ ಸಾಯ ಹೇಳಿದರು.
ಮೇ 5ರಂದು ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ವಿಟ್ಲದ ವಿಠಲ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ
ಚುಟುಕು ಚುಟುಕು ಕವಿಗೋಷ್ಠಿ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕವಿಗೋಷ್ಠಿಯಲ್ಲಿ ಕವಿಗಳಾದ ಮಹೇಶ್ ನೆಟ್ಲ, ಮೈತ್ರಿ ಭಟ್, ರಾಧಾಕೃಷ್ಣ ವರ್ಮ, ವಿಷ್ಣುಗುಪ್ತ ಪುಣಚ, ನಾರಾಯಣ ಕುಂಬ್ರ,
ಜಯಾನಂದ ಪೆರಾಜೆ, ವಿಶ್ವನಾಥ ಕುಲಾಲ್ ಮಿತ್ತೂರು, ಕೃಷ್ಣಕುಮಾರ್ ಕಮ್ಮಜೆ, ರೋಹಿತ್ ಕೇಪು, ರೇಖಾ ನಾಗೇಶ್, ಉಮಾಶಂಕರಿ,
ನಂದಿತಾ, ಶಾಂತಾ, ಸೌಮ್ಯಶ್ರೀ, ಬಶೀರ್ ಬುಡೋಳಿ, ಸ್ಫೂರ್ತಿ ಇವರು ಚುಟುಕು ಮತ್ತು ಕವಿತೆಗಳನ್ನು ವಾಚಿಸಿದರು.
ಇದಕ್ಕೂ ಮುನ್ನ ಬಂಟ್ವಾಳ ತಾಲೂಕಿನ ಚುಟುಕು ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿ ಸಾಹಿತಿ ಮತ್ತು ಸಂಘಟಕ ರಾಜಾರಾಮ
ವರ್ಮ ವಿಟ್ಲ, ಗೌರವಾಧ್ಯಕ್ಷರಾಗಿ ಸಾಹಿತಿ ವಿ. ಸುಬ್ರಹ್ಮಣ್ಯ ಭಟ್ ಹಾಗೂ ಕಾರ್ಯದರ್ಶಿಯಾಗಿ ಸುರೇಖಾ ಎಳವಾರ, ಸದಸ್ಯರಾಗಿ
ಮಹೇಶ್‌ ನೆಟ್ಲ, ಜ್ಯೋತಿ ರವಿರಾಜ್ ಹಾಗೂ ಸೀತಾಲಕ್ಷ್ಮೀ ವರ್ಮ ವಿಟ್ಲ ಅವರು ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಉದ್ಘಾಟಿಸಿದರು. ದ.ಕ.ಜಿಲ್ಲಾ
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ, ವಿಶ್ರಾಂತ ಯೋಧ ಮತ್ತು ಚಲನಚಿತ್ರ ನಟ ತಾರಾನಾಥ ಬೋಳಾರ್ ಅಧ್ಯಕ್ಷತೆ ವಹಿಸಿದ್ದು,
ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹರೀಶ್ ಸುಲಾಯ ಒಡ್ಡಂಬೆಟ್ಟು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ವೀಣಾ ನರಸಿಂಹ ವರ್ಮ ಆಶಯ ಗೀತೆ ಹಾಡಿದರು. ಅಧ್ಯಾಪಕ ರಾಜಶೇಖರ ವಿಟ್ಲ ಸ್ವಾಗತಿಸಿ, ಕಾರ್ಯದರ್ಶಿ ಸುರೇಖಾ ಎಳವಾರ ವಂದಿಸಿದರು. ಸೀತಾಲಕ್ಷ್ಮೀ ವರ್ಮ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here