ಬಂಟ್ವಾಳ : ನೇತ್ರಾವತಿ ನದಿ ತುಂಬೆ ಡ್ಯಾಂ ವಠಾರದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿತವಾಗಿದ್ದು ನದಿಯಲ್ಲಿ ಸೇರಿರುವ ಹೂಳೆತ್ತುವ ಪ್ರಾಯೋಗಿಕ ಕೆಲಸಕ್ಕೆ ವ್ಯವಸ್ಥೆ ಸಿದ್ದವಾಗಿದ್ದು ಮೇ 27ರಂದು ಸಂಜೆ ಡ್ರಜ್ಜಿಂಗ್ ಯಂತ್ರವನ್ನು ನೀರಿಗೆ ಇಳಿಸಲಾಗಿದೆ.
ದೆಹಲಿಯ ನೆಲ್ಕೊ ಕಂಪೆನಿ ಹೂಳೆತ್ತುವ ಗುತ್ತಿಗೆ ಪಡೆದಿದ್ದು ಉಪಗುತ್ತಿಗೆಯನ್ನು ಮಂಗಳೂರಿನ ಖಾಸಗಿ ವ್ಯಕ್ತಿಗಳ ಗುಂಪು ಆಸೀಪ್ ನೇತೃತ್ವದಲ್ಲಿ ವಹಿಸಿಕೊಂಡಿದೆ.
ಹೂಳೆತ್ತುವುದಕ್ಕೆ ಈಗಾಗಲೇ 25 ಟನ್ ಭಾರವನ್ನು ಹೊರುವ ಸಾಮರ್ಥ್ಯದ ಪಂಟೂನ್ ತೇಲುವ ಗೋಲಗಳನ್ನು ನೀರಲ್ಲಿ ಸ್ಥಾಪಿಸಲಾಗಿದೆ. ಡ್ರಜ್ಜಿಂಗ್ ಪಂಪನ್ನು ಅಳವಡಿಸಿ, ಪೈಪ್‌ಲೈನ್‌ಗಳ ಮೂಲಕ ನದಿಯಲ್ಲಿ ತುಂಬಿರುವ ಮರಳು ಮಣ್ಣು ಕಸವನ್ನು ಮೇಲೆತ್ತುವುದಕ್ಕೆ ಸಿದ್ದತೆಗಳು ನಡೆದಿದೆ.


ಯಂತ್ರಗಳ ಚಾಲನೆಗೆ ವಿದ್ಯುತ್ ಸಂಪರ್ಕವನ್ನು ಬಳಸಿಕೊಂಡಿದ್ದು ಅಲ್ಲದೆ 125 ಕೆ.ವಿ. ಅಶ್ವಶಕ್ತಿಯ ಜನರೇಟರನ್ನು ಸ್ಥಳದಲ್ಲಿ ಇರಿಸಿಕೊಂಡಿದ್ದು ಯಾವುದೇ ಸಂದರ್ಭ ವಿದ್ಯುತ್ ನಿಲುಗಡೆ ಆದರೂ ಯಂತ್ರಗಳು ನಿಲ್ಲದಂತೆ ವ್ಯವಸ್ಥೆಗಳನ್ನು ಹೊಂದಿರುವುದು.
ಇಲ್ಲಿ ಅಳವಡಿಸಿರುವ ಡ್ರಜ್ಜಿಂಗ್ ಯಂತ್ರವು ಗಂಟೆಗೆ 100 ಎಂ.ಕ್ಯೂ.( ಕ್ಯುಬಿಕ್ ಮೀಟರ್) ಹೂಳನ್ನು ಮೇಲೆತ್ತಿ ಹಾಕುವುದು. ಹೂಳನ್ನು ಸಂಗ್ರಹಿಸುವುದಕ್ಕಾಗಿ ನಾಲ್ಕು ಎಕ್ರೆ ವಿಶಾಲ ಪ್ರದೇಶವನ್ನು ವ್ಯವಸ್ಥೆಯ ನಿರ್ವಾಹಕರು ಕಾದಿರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.
ಹೂಳು ತೆಗೆಯುವ ಕೆಲಸ ನಿರ್ವಹಣೆ ತಂತ್ರಜ್ಞರು ವಿವಿಧ ಬಂದರುಗಳಲ್ಲಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು ಒರಿಸ್ಸಾ ಮತ್ತು ಕೊಚ್ಚಿನ್‌ನಲ್ಲಿ ಸತತವಾಗಿ ಕೆಲಸ ನಿರ್ವಹಿಸಿದ ಅನುಭವಸ್ಥರೆಂದು ವಿವರಿಸಿದ್ದಾರೆ. ಈಗಾಗಲೇ ಪಣಂಬೂರು ಬಂದರಿನಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದು ಅಲ್ಲಿಂದ ತುಂಬೆ ಡ್ಯಾಂಗೆ ಶಿಪ್ಟಾಗಿದ್ದಾರೆ.
ಪ್ರಥಮವಾಗಿ ಹೂಳೆತ್ತುವ ಡೆಮೋವನ್ನು ಚಿತ್ರೀಕರಿಸಿ ಜಿಲ್ಲಾಧಿಕಾರಿ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗುತ್ತದೆ. ಅವರು ವೀಕ್ಷಿಸಿ ಬಳಿಕ ಅನುಮತಿ ನೀಡಿದ ನಂತರ ಅಧಿಕೃತವಾಗಿ ಕೆಲಸ ಆರಂಭಿಸಲಾಗುತ್ತದೆ. ವಾರದ ಹಿಂದೆ ಗಣಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಇ ಟೆಂಡರ್ ಮೂಲಕ ಕೆಲಸದ ಗುತ್ತಿಗೆಯನ್ನು ವಹಿಸಿದೆ.
ಡೆಮೋ ವೀಕ್ಷಣೆ ಬಳಿಕ ಅಂತಿಮ ಆದೇಶ ಸಿಕ್ಕಿದ ನಂತರ ಕೆಲಸ ನಡೆಯುವುದಾಗಿ ತಿಳಿಸಿದ್ದಾರೆ.

ನೇತ್ರಾವತಿ ನದಿಯಲ್ಲಿ ನಿರ್ದಿಷ್ಟ ಸೂಚಿತ ಸ್ಥಳದಲ್ಲಿ ಹೂಳೆತ್ತುವ ಕೆಲಸ ಸುಮಾರು ಮೂರು ತಿಂಗಳ ಕಾಲ ನಡೆಯುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಡ್ಯಾಂ ವಠಾರ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲಾಗುತ್ತದೆ. ಮಳೆ ನೆರೆ ಬಂದರೂ ಕೆಲಸ ಮಾಡಲಾಗುತ್ತದೆ. ಡ್ರಜ್ಜಿಂಗ್ ಎಂದರೆ ಕೇವಲ ಮರಳು ಮಾತ್ರವಲ್ಲ ಕೆಲಸ ಮಾಡುವಾಗ ಮಣ್ಣು ಕಸ ಕೆಸರು ಸಹಿತ ಎಲ್ಲವನ್ನು ತೆಗೆದು ಹಾಕಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಯಂತ್ರಗಳ ಜೋಡಣೆ ನಡೆದಿದೆ.
-ಧರ್ಮೇಶ್
ತಾಂತ್ರಿಕ ವ್ಯವಸ್ಥೆ ನಿರ್ವಾಹಕ

ಸ್ಥಳೀಯವಾಗಿ ಇಲ್ಲಿನ ಕೆಲಸ ನಿರ್ವಹಣೆಗೆ ಬೇಕಾಗುವ ವ್ಯವಸ್ಥೆಗಳನ್ನು ಹೊಂದಿಸಿಕೊಡುವ, ಅವಶ್ಯ ಸಾಮಾಗ್ರಿಗಳನ್ನು ಒದಗಿಸುವ ಕೆಲಸವನ್ನು ನಾವು ಮಾಡುತ್ತಿದ್ದು ಜಿಲ್ಲಾಽಕಾರಿಗಳಿಂದ ಅಂತಿಮ ಸೂಚನೆ ಬಳಿಕ ಭರದಿಂದ ಕೆಲಸ ನಡೆಯುವುದು.
-ಶಂಸೀರ್
ಸ್ಥಳೀಯ ಗುತ್ತಿಗೆ ನಿರ್ವಾಹಕರು
( ಚಿತ್ರ: ಡ್ರಜ್ಜಿಂಗ್ ಮಾಡಲು ಪಂಟೂನ್ ತೇಲುವ ಗೋಲಗಳನ್ನು ನೀರಿಗೆ ಇಳಿಸಿರುವುದು)

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here