ಬಂಟ್ವಾಳ: ಕರಾವಳಿಯ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ವರ್ಷ ತೀವ್ರ ತರವಾದ ಕುಡಿಯುವ ನೀರಿನ ಬವಣೆ ಉದ್ಭವಿಸಿದ್ದು, ಸರಕಾರಿ ಪಿಯುಸಿ ತರಗತಿಗಳ ಆರಂಭವನ್ನು ಜೂನ್ ಮೊದಲವಾರ ತನಕ ಮುಂದೂಡಿಕೆಗೆ ಬಂಟ್ವಾಳ ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಅವರು ಪದವಿ ಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ನೀರಿನ ಸಮಸ್ಯೆಯಿಂದ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದೆ. ಪಿಯು ಕಾಲೇಜುಗಳಲ್ಲಿನ ಬಹುತೇಕ ಕುಡಿಯುವ ನೀರಿಗೆ ಸಂಬಂಽಸಿದ ಕೊಳವೆ ಬಾವಿಗಳು ಈಗಾಗಲೇ ಬತ್ತಿ ಹೋಗಿದ್ದು, ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಗಾಗಿ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳ ಆಡಳಿತಗಳು ನೀರಿನ ಅಭಾವದಿಂದ ತತ್ತರಿಸಿ ಹೋಗಿವೆ. ಬೇಸಿಗೆ ಕಾಲದ ಇತ್ತೀಚಿನ ತಾಪಮಾನ ಕೂಡಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹವಾಮಾನ ಇಲಾಖೆಯ ಪ್ರಕಾರ ಜೂನ್ ಮೊದಲ ವಾರ ತನಕ ಕರಾವಳಿ ಜಿಲ್ಲೆಗೆ ಮುಂಗಾರು ಪ್ರಾರಂಭವಾಗುವ ಲಕ್ಷಣ ಕಡಿಮೆ ಎಂದು ತಿಳಿಸಿದೆ.
ಕೆಲವೊಂದು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಬಳಕೆಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರುಸುತ್ತಿವೆ.
ಈ ಎಲ್ಲಾ ಅಂಶಗಳನ್ನು ಮನಗಂಡು ಉಭಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸಭೆ ಸೇರಿ ಈಗಾಗಲೇ ಆರಂಭವಾಗಬೇಕಿದ್ದ ತರಗತಿಗಳನ್ನು ಸ್ವಲ್ಪ ಸಮಯಕ್ಕೆ ಮುಂದೂಡಿ ಪ್ರಕಟನೆ ಹೊರಡಿಸಿವೆ. ಪ್ರಸ್ತುತ ನೀರಿನ ಅಭಾವ ಪರಿಸ್ಥಿತಿಯನ್ನು ಅವಲೋಕಿಸಿ ಸರಕಾರಿ ಪಿಯುಸಿ ಕಾಲೇಜುಗಳ ಪ್ರಾಂಶುಪಾಲರ ಸಂಘ ಕೂಡಾ ಸ್ವಲ್ಪ ಸಮಯ ತರಗತಿ ಆರಂಭಿಸುವುದನ್ನು ಮುಂದೂಡಲು ನಿರ್ದೇಶಕರಲ್ಲಿ ಮನವಿ ಸಲ್ಲಿಸಿರುವುದು ತಿಳಿದು ಬಂದಿದೆ.
ಆದುದರಿಂದ ಈಗಾಗಲೇ ಆರಂಭವಾಗಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳ ಪಿಯುಸಿ ತರಗತಿಗಳನ್ನು ತತ್‌ಕ್ಷಣದಿಂದ ಸ್ವಲ್ಪ ಮಟ್ಟಿಗೆ ಸ್ಥಗಿತಗೊಳಿಸಿ ಕನಿಷ್ಠ ಜೂನ್ ತಿಂಗಳ ಮೊದಲ ವಾರದವರೆಗೆ ಮುಂದೂಡಲು ಅವರು ವಿನಂತಿಸಿದ್ದಾರೆ.

 

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here