ಬಂಟ್ವಾಳ: ದ.ಕ.ಜಿಲ್ಲಾ ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು,ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಿರೀಕ್ಷೆಗೂ ಮೀರಿ 2,74,621 ಮತಗಳ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಹ್ಯಾಟ್ರಿಕ್  ಸಾಧನೆಗೈದಿದ್ದಾರೆ. ಸುರತ್ಕಲ್ ನ ಎನ್ ಐಟಿಕೆಯಲ್ಲಿ ಮತೆಣಿಕೆ ಕಾರ್ಯ ನಡೆದಿದ್ದು,18 ಸುತ್ತುಗಳಲ್ಲಿ ಮತ ಎಣಿಕೆ ನಡೆದಿತ್ತು. ಜಿಲ್ಲಾಧಿಕಾರಿ ಶಸಿಕಾಂತ್ ನೇತೃತ್ವದಲ್ಲಿ ಮತೆಣಿಕೆ ಕಾರ್ಯ ಅತ್ಯಂತ ಯಶಸ್ವಿ ಹಾಗೂ ಸಾಂಗವಾಗಿ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಮತ ಎಣಿಕಾ ಕಾರ್ಯ ಆರಂಭಗೊಂಡಿದ್ದು, ಸಂಜೆಯ ವೇಳೆಗೆ ನಳಿನ್ ಕುಮಾರ್ ಕಟೀಲ್ ಅವರ ಅಧಿಕೃತ ಗೆಲುವನ್ನು ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಅವರು ಪ್ರಮಾಣಪತ್ರ ವಿತರಿಸುವ ಮೂಲಕ ಘೋಷಿಸಿದರು. ನಳಿನ್ ಅವರು ಮತ ಎಣಿಕೆ ಆರಂಭದಿಂದಲೂ ಮುನ್ನಡೆಯನ್ನು ಕಾಯ್ದು ಕೊಂಡು ಬಂದಿದ್ದರು.

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 11 ಸಾವಿರ ಮತಗಳ ಹಿನ್ನಡೆ ಹೊರತುಪಡಿಸಿದರೆ ಉಳಿದ ಏಳು ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆಯನ್ನು ದಾಖಲಿಸಿತ್ತು. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 30 ಸಾವಿರ ಮತಗಳ ಮುನ್ನಡೆ ದಾಖಲಿಸಿದರ, ಬೆಳ್ತಂಗಡಿಯಲ್ಲಿ 40 ಸಾವಿಕ್ಕೂ ಅಧಿಕ ಮತಗಳ ಮುನ್ನಡೆ ದಾಖಲಿಸಿದೆ. ಉಳಿದಂತೆ ಇತರ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.ನಳಿನ್ ಕುಮಾರ್ ಕಟೀಲ್ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಯುವ ನಾಯಕ ಮಿಥುನ್ ರೈ ಅವರು 4,99,664 ಮತಗಳನ್ನು ಪಡೆದಿದ್ದು, ಬಿಎಸ್ಪಿಯ ಸತೀಶ್ ಪೂಜಾರಿ 4713, ಎಸ್ ಡಿಪಿಐಯ ಮಹಮ್ಮದ್ ಇಲ್ಯಾಸ್ 48839,ಮತಗಳನ್ನು ಪಡೆದಿದ್ದಾರೆ.ಹಾಗೆಯೇ ಯುಪಿಜೆಪಿಯ ವಿಜಯಶ್ರೀನಿವಾಸ್ 1629,ಎಚ್ಜೆಪಿಯ ಸುಪ್ರೀತ್ ಪೂಜಾರಿ 948, ಪಕ್ಷೇತರ ಅಭ್ಯರ್ಥಿಗಳಾದ ಅಬ್ದುಲ್ ಹಮೀದ್554, ಅಲೆಕ್ಸಾಂಡರ್2752, ದೀಪಕ್ ಕುಹೆಲ್ಲೊ 748, ಮಹಮ್ಮದ್ ಖಾಲಿದ್ 602, ಮ್ಯಾಕ್ಸಿಂಪಿಂಟೋ 908, ವೆಂಕಟೇಶ್ ಬೆಂಡೆ 1702, ಸುರೇಶ್ ಪೂಜಾರಿ 2315 ಪಡೆದುಕೊಂಡಿದ್ದರೆ ನೋಟಾ7380 ಮತಗಳು ಚಲಾವಣೆಯಾಗಿದೆ.

ಸಂಭ್ರಮಾಚರಣೆ: ಬಿ.ಸಿ.ರೋಡಿನ ಬಿ.ಜೆ.ಪಿ. ಕಚೇರಿಯಲ್ಲಿ ಹಾಕಲಾದ ಬೃಹತ್ ಪರದೆಯಲ್ಲಿ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ವೀಕ್ಷಿಸುತ್ತಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರು  ಸುದ್ದಿಗಾರರೊಂದಿಗೆ ಮಾತನಾಡಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಿದ್ದಾರೆ ಎಂಬ ಖುಷಿಯಲ್ಲಿ ಇಡೀ ದೇಶದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಈಗಾಗಲೇ 350ಕ್ಕೂ ಮಿಕ್ಕಿ ಲೋಕಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ. ಬಂಟ್ವಾಳದಲ್ಲಿ ನಾನು ಸ್ಪರ್ಧಿಸಿದ್ದ ಸಂದರ್ಭ ವಿಧಾನಸಭೆ ಚುನಾವಣೆಯಲ್ಲಿ 16 ಸಾವಿರ ಲೀಡ್ ಬಂದಿತ್ತು. ಈ ಬಾರಿ ಅದರ ದುಪ್ಪಟ್ಟು ಅಂದರೆ 30 ಸಾವಿರದಷ್ಟು ಲೀಡ್ ನಳಿನ್ ಕುಮಾರ್ ಕಟೀಲ್ ಅವರಿಗೆ ದೊರಕಿದ್ದು, ಇದು ಬಂಟ್ವಾಳದಲ್ಲೂ ಬಿಜೆಪಿಯ ಪರವಾಗಿ ಜನರಿದ್ದಾರೆ ಎಂಬುದರ ದ್ಯೋತಕ ಎಂದರು.

ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಪ್ರಮುಖರಾದ ಪುರಸಭಾ ಸದಸ್ಯ ಗೋವಿಂದ ಪ್ರಭು, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಜಿಪಂ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಪಕ್ಷ ಪ್ರಮುಖರಾದ ರಮಾನಾಥ ರಾಯಿ ಮೊದಲಾದವರು ಉಪಸ್ಥಿತರಿದ್ದರು.

ದೇಶ, ರಾಜ್ಯ, ದ.ಕ.ದಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಂತೆ ಶಾಸಕ ರಾಜೇಶ್ ನಾಯ್ಕ್ ಅವರು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಾಚರಣೆಗೈದರು. ಯುವ ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆ ಡಿಜೆ ಹಾಕಿ ಕುಣಿದು ಕುಪ್ಪಳಿಸಿದರು. ಪ್ರಧಾನಿ ನರೇಂದ್ರ ಮೋದಿ, ಸಂಸದ ನಳಿನ್ ಕುಮಾರ್ ಜೈಕಾರ ಹಾಕಿದರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು,ಪಕ್ಷದ ಸ್ಥಳೀಯ ನಾಯಕರು ಉಪಸ್ಥಿತರಿದ್ದರು. ಶಾಸಕ ರಾಜೇಶ್  ನಾಯ್ಕ, ಬಿಜೆಪಿ  ವಕ್ತಾರ ಹರಿಕೃಷ್ಣ ಬಂಟ್ವಾಳ ಮೊದಲಾದವರು ನೂತನ ಸಂಸದರನ್ನು ಅಭಿನಂದಿಸಿದರು.

ಸಿದ್ದಕಟ್ಟೆ: ದೇಶದಲ್ಲಿ ಬಿಜೆಪಿ ಭರ್ಜರಿಗೆಲುವು ದಾಖಲಿಸಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಿರುವ ಮತ್ತು ದ.ಕ.ಜಿಲ್ಲೆಯಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ತಾಪಂ ಸದಸ್ಯ ಪ್ರಭಾಕರ ಪ್ರಭು ನೇತೃತ್ವದಲ್ಲಿ ಸಿದ್ದಕಟ್ಟೆ ಪೇಟೆಯಲ್ಲಿ ಮೆರವಣಿಗೆ ನಡೆಸಿ, ಸಿಹಿಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆಗೈದರು.    ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರಾದ ರತ್ನಕುಮಾರ್ ಚೌಟ,ಸತೀಶ್ ಪೂಜಾರಿ,ಉಮೇಶ್ ಗೌಡ,ಮಾಧವ ಶೆಟ್ಟಿಗಾರ್,ರಾಮಕೃಷ್ಣ ನಾಯಕ್ ಕರ್ಪೆ, ಸುರೇಶ್ ಕುಲಾಲ್, ಸಂಜೀವ ಕರ್ಕೇರಾ, ಸಂದೇಶ್ ಆಚಾರ್ಯ, ನವೀನಕರ್ಪೆ, ಪ್ರಭಾಕರ ನಾಯಕ್ ಮುಗೇರು ಮೊದಲಾದವರಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು  ಕಳೆದ 5 ವರ್ಷಗಳ ಅವಧಿಯಲ್ಲಿ” ನವ ಭಾರತದ ನಿರ್ಮಾಣ ಕ್ಕೆ ಘೋಷಿಸಿದ ಜಾಗತಿಕವಾದ ಐತಿಹಾಸಿಕ ತೀರ್ಮಾನಗಳೇ ಬಿ.ಜೆ.ಪಿ.ಯ ಭರ್ಜರಿ ಗೆಲುವಿಗೆ ಕಾರಣ ಎಂದು ಬಂಟ್ವಾಳ ತಾಪಂ ಸದಸ್ಯ,ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಅಭಿಪ್ರಾಯಪಟ್ಟಿದ್ದಾರೆ. ತ್ರತೀಯ ರಂಗ ಸಹಿತ ವಿರೋಧ   ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಪ್ರರ್ಜಾವಂತ ಸಮಾಜಕ್ಕೆ  ಅವಮಾನಿಸ್ಸುವ ರೀತಿಯಲ್ಲಿ ನೀಡಿದ  ತಪ್ಪು  ಸಂದೇಶಗಳೆ ಆ ಪಕ್ಷಗಳಿಗೆ ಮುಳುವಾಗಿ ಬಿ.ಜೆ.ಪಿ. ಹೆಮ್ಮರವಾಗಿ ಬೆಳೆಯಲು ಕಾರಣವಾಯಿತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ದಲ್ಲೂ ಅಪವಿತ್ರ ಮೈತ್ರಿಯ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಜನವಿರೋಧಿ ಧೋರಣೆಗೆ ಜನತೆ ತಕ್ಕ ಶಾಸ್ತಿ ನೀಡಿದ್ದಾರೆಎಂದು ಅವರು ತಿಳಿಸಿದ್ದಾರೆ.

ಪುಂಜಾಲಕಟ್ಟೆ: ದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿರುವುದು ಮತ್ತು ದ.ಕ.ಜುಲ್ಲೆಯಲ್ಲೂ ಬಿಜೆಪಿಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಭೂತಪೂರ್ವಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಜಿಪಂಸದಸ್ಯ ತುಂಗಪ್ಪ ಬಂಗೇರ ನೇತೃತ್ವದಲ್ಲಿ ಪುಂಜಾಲಕಟ್ಟೆಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆಗೈದರು. ಈ ಸಂದರ್ಭ ಸದಾನಂದಗೌಡ ನಾವೂರು ಮೊದಲಾದವರಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ತುಂಗಪ್ಪ ಬಂಗೇರ ಅವರು, ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಿರುವುದು ಸಂತಸ ತಂದಿದೆ. ಇವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗಿ ಮೂಡಿಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ನಡೆಸಿ  ಕ್ಷೇತ್ರದ ಗ್ರಾಮೀಣ ಭಾಗದಲ್ಲೂ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿರುವುದು ಮತ್ತು ದ.ಕ.ಜಿಲ್ಲೆಯಲ್ಲು ನಳಿನ್ ಕುಮಾರ್ ಕಟೀಲ್ ಅವರು ಭರ್ಜರಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here