(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)



ಮುಂಬಯಿ: ಶಿವಸೇನೆ ಮತ್ತು ಆರ್‌ಪಿಐ ಪಕ್ಷಗಳ ಮೈತ್ರಿಕೂಟದ ಭಾರತೀಯ ಜನತಾ ಪಕ್ಷದಿಂದ ಮುಂಬಯಿ ನಗರ ಉತ್ತರ ಲೋಕಸಭಾ ಕ್ಷೇತ್ರದಿಂದ (ಬೋರಿವಿಲಿ) ದ್ವಿತೀಯ ಬಾರಿಗೆ ಕಣಕ್ಕಿಳಿದ ಬೃಹನ್ಮುಂಬಯಿಯಲ್ಲಿನ ಏಕೈಕ ತುಳು-ಕನ್ನಡಿಗ ಉಮೇದುವಾರ ಗೋಪಾಲ್ ಸಿ.ಶೆಟ್ಟಿ ಅವರು 6,88,395 ಮತಗಳಿಂದ ಅಭೂತಪೂರ್ವ ಜಯ ಗಳಿಸಿದ್ದಾರೆ. ಎದುರಾಳಿ ಸ್ಪರ್ಧಿ, ಬಾಲಿವುಡ್ ನಟಿ, ಕಾಂಗ್ರೇಸ್ (ಐ) ಪಕ್ಷದ ಉರ್ಮಿಳಾ ಮಾತೋಂಡ್ಕರ್ 2,35,201 ಮತಗಳನ್ನು ಪಡೆದು ಪರಾಭವ ಗೊಂಡಿದ್ದಾರೆ.
ಮತದಾನ ಎಣಿಕಾ ಕಾರ್ಯವು ಗೋರೆಗಾಂ ಪೂರ್ವದ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ ಸನಿಹದ ಎನ್‌ಎಸ್‌ಇ ಗ್ರೌಂಡ್‌ನ (ಬೋಂಬೆ ಎಕ್ಸಿಬಿಶನ್ ಸೆಂಟರ್) ನೆಸ್ಕೋ ಸೆಂಟರ್‌ನಲ್ಲಿ ನಡೆಸಲ್ಪಟ್ಟಿದ್ದು, ಬೆಳಿಗ್ಗಿನಿಂದಲೇ ಭಾರೀ ಜನಸ್ತೋಮದಲ್ಲಿ ನೆರೆದ ಮುಂಬಯಿ ಜನತೆ ಕುತೂಹಲದಿಂದಲೇ ಮುಖತಃ ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಮತ ಎಣಿಕೆ ಇನ್ನೂ ಬಾಕಿಇದ್ದು ಇದು ((Till 8.25 p.m)) ಈ ತನಕದ ಎಣಿಕಾ ಫಲಿತಾಂಶವಾಗಿದೆ. ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಕೆಟ್ಟ ಪರಿಣಾಮ ಮತ್ತು ವೋಟರ್ ವೆರಿಫಿಬಲ್ ಪೇಪರ್ ಆಡಿಟ್ ಟ್ರೈಲ್ (ವಿವಿಪಾಟ್) ಬಳಿಕವಷ್ಟೇ ಮತದಾನದ ಅಂತಿಮ ಲೆಕ್ಕಾಚಾರ ಬಹಿರಂಗ ಪಡಿಸುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ಮತ ಎಣಿಕೆ ವಿಳಂಬವಾಗಿದ್ದು ತಡ ರಾತ್ರಿ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ದೊರೆಯಲಿದೆ.
ಫಲಿತಾಂಶ ಘೋಷಣೆಯ ಬಳಿಕ ನೆರೆದ ಅಸಂಖ್ಯಾತ ಮತದಾರರು, ಬಿಜೆಪಿ, ಶಿವಸೇನೆ ಮತ್ತು ಆರ್‌ಪಿಐ ಪಕ್ಷಗಳ ಭಾರೀ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸದೊಂದಿಗೆ ಗೋಪಾಲ್ ಶೆಟ್ಟಿ ತನ್ನ ಬೋರಿವಿಲಿ ಕ್ಷೇತ್ರದತ್ತ ಸಾಗುತ್ತಿದ್ದಂತೆಯೇ ಅಸಂಖ್ಯಾತ ಮತದಾರರು ಅವರನ್ನು ಶುಭಾರೈಸಿದರು. ಪುತ್ರ ಅವರನ್ನು ಮಾತೃಶ್ರೀ ಗುಲಾಬಿ ಚಿನ್ನಯ್ಯ ಶೆಟ್ಟಿ, ಪತ್ನಿ ಉಷಾ ಜಿ.ಶೆಟ್ಟಿ ಮತ್ತು ಪರಿವಾರ, ಸಂಸದರ ಆಪ್ತ ಹಾಗೂ ಪ್ರತಿಭಾನ್ವಿತ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ, ಬಂಧುಮಿತ್ರರು, ಮಹಾರಾಷ್ಟ್ರದ ಶಿಕ್ಷಣ ಸಚಿವ ವಿನೋದ್ ತಾವ್ಡೆ, ದಹಿಸರ್ ವಿಧಾನಸಭಾ ಕ್ಷೇತ್ರದ (ಬಿಜೆಪಿ) ಶಾಸಕಿ ಮನೀಷಾ ಚೌಧರಿ, ಶಾಸಕರಾದ ಪ್ರಕಾಶ್ ಸುರ್ವೆ (ಶಿವಸೇನೆ), ಅತುಲ್ ಭಟ್‌ಖಳ್ಕರ್ (ಬಿಜೆಪಿ), ಬಿಜೆಪಿ ಮುಂಬಯಿ ಸಮಿತಿ ಎಕ್ಸಿಕ್ಯೂಟಿವ್ ಕಮಿಟಿ ಸದಸ್ಯ ಎಲ್.ವಿ ಅವಿನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಅಭಿನಂದಿಸಿದರು.
ಈ ಕ್ಷೇತ್ರದಿಂದ 1991ರಿಂದ ನಾಲ್ಕು ಬಾರಿ ಸ್ಪರ್ಧಿಸಿದ್ದ ಹಾಲಿ ಉತ್ತರ ಪ್ರದೇಶದ ಹಾಲಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ ರಾಮ್ ನಾಯ್ಕ್ (ಗೋಪಾಲ ಶೆಟ್ಟಿ ಅವರ ರಾಜಕೀಯ ಗುರು) ಬದಲಾಗಿ ೨೦೧೪ರಲ್ಲಿ ಬಿಜೆಪಿ ಪಕ್ಷವು ಗೋಪಾಲ ಶೆಟ್ಟಿ (ಶಿಷ್ಯನನ್ನೇ) ಅವರನ್ನು ಕಣಕ್ಕಿಳಿಸಿತ್ತು. ಅಂದು ಸುಮಾರು ಹನ್ನೆರಡು ಮತ್ತು ೮-ಪಕ್ಷೇತರರು ಸ್ಪರ್ಧಿಸಿ ಒಟ್ಟಾರೆ ಶೆಟ್ಟಿ ಅವರನ್ನು ಸೋಲಿಸಿಯೇ ಸಿದ್ಧ ಎಂದು ಪಣತೊಟ್ಟರೂ ಬಹುಭಾಷಿ, ಸಾಮರಸ್ಯದ ಧ್ಯೋತಕರಾದ ಶಿಸ್ತಿನ ಶಿಪಾಯಿ ಗೋಪಾಲ ಶೆಟ್ಟಿ ಅವರನ್ನೇ ಕ್ಷೇತ್ರದ ಮತದಾರರು ಜನನಾಯಕರನ್ನಾಗಿಸಿ ತಮ್ಮ ಪ್ರತಿನಿಧಿಯನ್ನಾಗಿಸಿ ಲೋಕಸಭೆಗೆ ಕಳುಹಿಸಿದ್ದರು. ಸುಮಾರು 6,64,004 ಮತಗಳನ್ನು ಪಡೆದ ಗೋಪಾಲ ಶೆಟ್ಟಿ ಎದುರಾಳಿ ಕಾಂಗ್ರೇಸ್‌ನ ಸಂಜಯ್ ನಿರೂಪಮ್ ಅವರಕ್ಕಿಂತ 4,46,562 ಹೆಚ್ಚುವರಿ ಮತಗಳೊಂದಿಗೆ ಭರ್ಜರಿ ಜಯಭೇರಿ ಪಡೆದಿದ್ದರು. ಆ ಮೂಲಕ ರಾಷ್ಟ್ರಕ್ಕೆ ರಾಷ್ಟ್ರವೇ ಈ ಕ್ಷೇತ್ರದತ್ತ ಚಿತ್ತಹರಿಸುವಂತೆ ಮಾಡಿದ್ದರು. ಮಾತ್ರವಲ್ಲದೆ ಅತ್ಯಾಧಿಕ ಮತಗಳನ್ನು ಪಡೆದು ರಾಷ್ಟ್ರದಲ್ಲೇ ದ್ವಿತೀಯ ಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯದಲ್ಲೇ ಪ್ರಥಮ ಸ್ಥ್ಥಾನದ ಕೀರ್ತಿಗೆ ಗೋಪಾಲಣ್ಣ ಪಾತ್ರರಾಗಿದ್ದರು.
ಈ ಬಾರಿಯೂ ಹನ್ನೆರಡು ಪಕ್ಷಗಳು ಮತ್ತು ಆರು ಪಕ್ಷೇತರರು…. ಗೆದ್ದವರೊಬ್ಬರೇ ಶೆಟ್ರು…!
2014ರಲ್ಲಿ ಈ ಕ್ಷೇತ್ರದಿಂದ ಒಟ್ಟು ಅಭ್ಯಥಿಗಳು ಕಣದಲ್ಲಿದ್ದರೆ, 2019ರ ಈ ಬಾರಿ ಬಿಜೆಪಿ (ಶಿವಸೇನೆ ಬಿಂಬಲಿತ), ಕಾಂಗ್ರೇಸ್ (ಐ), ಆಮ್ ಆದ್ಮಿ ಪಾರ್ಟಿ, ಸಮಾಜವದಿ ಪಕ್ಷ, ಬಹುಜನ ಸಮಾಜವದಿ ಪಕ್ಷ, ಎಐಪಿ, ಬಿಬಿಎಂ, ಎಂಪಿಎಸ್ (ಟಿ), ಬಿಎಂಪಿ, ಫಾರ್ವರ್ಡ್ ಬ್ಲಾಕ್ (ಎಫ್‌ಬಿ), ಪ್ರಬುದ್ಧನ್ ರಿಪಬ್ಲಿಕನ್ ಪಾರ್ಟಿ, ಎಸ್‌ವಿಪಿಪಿ, ಪಿಪಿಐ (ಎಸ್) ಸುಮಾರು ಹನ್ನೆರಡು ಮತ್ತು ೮-ಪಕ್ಷೇತರರು ಸ್ಪರ್ಧಿಸಿದ್ದರು. ೨೦೧೯ರ ಈ ಬಾರಿಯ ಚುನಾವಣೆಯಲ್ಲೂ ಮನೋಜ್‌ಕುಮಾರ್ ಜಯಪ್ರಕಾಶ್ ಸಿಂಗ್ (ಬಹುಜನ್ ಸಮಾಜ್ ಪಾರ್ಟಿ), ಆಂಡ್ರೂ ಜೋನ್ ಫೆರ್ನಾಂಡಿಸಿ (ಹಮ್ ಭಾರತೀಯ ಪಾರ್ಟಿ), ಅಂಕುಶ್‌ರಾವ್ ಶಿವಾಜಿರಾವ್ ಪಾಟೀಲ್ (ರಾಷ್ಟ್ರೀಯ ಮರಾಠ ಪಾರ್ಟಿ), ಚಂದಲಿಯ ಸಮಯ್‌ಸಿಂಗ್ ಆನಂದ್ (ಬಹುಜನ ಮುಕ್ತಿ ಪಾರ್ಟಿ), ಛನ್ನು ಸಹದೇವ್‌ರಾವ್ ಸೊಂಟಕ್ಕೇ (ಭಾರತ್ ಪ್ರಭಾತ್ ಪಾರ್ಟಿ), ಥೊರಟ್ ಸುನೀಲ್ ಉತ್ತಮ್‌ರಾವ್ (ವಂಚಿತ್ ಬಹುಜನ್ ಅಗಾಡಿ), ಡಾ| ಪವನ್ ಕುಮಾರ್ ಪಾಂಡೇ (ಸರ್ವೋದಯ ಭಾರತ್ ಪಾರ್ಟಿ), ಫತ್‌ಹೇಮೊಹ್ಮದ್ ಮನ್ಸುರಿ ಶೇಖ್ (ಭಾರತೀಯ ಲೋಕಮತ್ ರಾಷ್ಟ್ರವಾದಿ ಪಾರ್ಟಿ), ರಂಜಿತ್ ಬಜರಂಗಿ ತಿವಾರಿ (ನೈತಿಕ್ ಪಾರ್ಟಿ), ಕಾಮ್ರೇಡ್ ವಿಲಾಸ್ ಹಿವಾಲೆ (ಮಾರ್ಕಿಸ್ಟ್ ಲೆನಿನಿಸ್ಟ್ ಪಾರ್ಟಿ ಆಫ್ ಇಂಡಿಯಾ-ರೆಡ್ ಫ್ಲಾಗ್) ಸೇರಿದಂತೆ ಒಟ್ಟು ಹನ್ನೆರಡು ಪಕ್ಷಗಳ ಮತ್ತು ಅಖ್ತಾರ್ ಮುನ್ಶಿ ಪೇಪರ್‌ವಾಲಾ, ಡಾ| ರೈಇಸ್ ಖಾನ್, ಅಮೊಲ್ ಅಶೋಕ್‌ರಾವ್ ಜಾಧವ್, ಬಿ.ಕೆ ಗಧವಿ, ಮಿಲಿಂದ್ ಶಂಕರ್ ರೆಪೆ,ಅನ್ಸಾರಿ ಮೊಹ್ಮದ್ ಅಜಾದ್ ಹೀಗೆ ಆರು ಪಕ್ಷೇತರರು ಸ್ಪರ್ಧಿಸಿದ್ದರು.
ಶುಭಾರೈಸಿದ ಗಣ್ಯರು:
ಜನ್ಮಭೂಮಿ ಕರ್ನಾಟಕದ ಉಡುಪಿ ಆದರೂ ಸೇವೆಯೊಂದಿಗೆ ಮುಂಬಯಿನಲ್ಲಿ ಎಂಪಿ ಆಗಿ ಆರಿಸಿ ಬಂದಿರುವ
ಗೋಪಾಲ್ ಶೆಟ್ಟಿ ಲೋಕ ಸಭೆಯಲ್ಲಿ ಕರ್ಮಭೂಮಿ ಮುಂಬಯಿಯಲ್ಲಿನ ತುಳು-ಕನ್ನಡಿಗರ ಧ್ವನಿಯಾಗುವ ಆಶಯ ಮುಂಬಯಿ ಕನ್ನಡಿಗರದ್ದು. ಕನ್ನಡಿಗರ ಜನಪ್ರತಿನಿಧಿಯಾಗಿ ಪ್ರತಿನಿಧಿಸಲು ಮುಂಬಯಿ ನೆಲೆಯ ಸಂಸದನೋರ್ವನ ಅಗತ್ಯವಿದ್ದು, ದೆಹಲಿಯಲ್ಲಿ ಗೋಪಾಲ್ ಶೆಟ್ಟಿ ಅವರ ಪ್ರತಿನಿಧಿತ್ವ ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೆ ವರದಾನವಾಗಲಿದೆ ಎನ್ನುವ ಅಭಿಮತ ಗಣ್ಯರನೇಕರು ವ್ಯಕ್ತ ಪಡಿಸಿದ್ದಾರೆ. ಮಹಾನಗರದಲ್ಲಿ ಅನೇಕ ವರ್ಷಗಳ ಅವಿರತ ಸೇವೆಗೈದು, ಮಹಾನಗರದಲ್ಲಿನ ನೂರಾರು ತುಳು-ಕನ್ನಡಿಗ ಸಂಘಟನೆಗಳ ಹಿತೈಷಿಯಾಗಿ ಜನಮಾನಸದಲ್ಲಿ ಜನಾನುರಾಗಿರುವ ಗೋಪಾಲ್ ಶೆಟ್ಟಿ ಅವರ ಈ ವಿಜಯ ಅವರ ನಿಷ್ಠೆಗೆ ಧಕ್ಕಿದ ಫಲ ಎಂದಿದ್ದಾರೆ.
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ.ಎಲ್ ಬಂಗೇರ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಜಿಎಸ್‌ಬಿ ಸಭಾ ದಹಿಸರ್-ಬೋರಿವಿಲಿ ಉಪಾಧ್ಯಕ್ಷ ಸಾಣೂರು ಮನೋಹರ್ ವಿ.ಕಾಮತ್, ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ, ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಶ್ರೀ ರಜಕ ಸಂಘ ಮುಂಬಯಿ ಅಧ್ಯಕ್ಷ ಡಿ.ಸಿ ಸಾಲ್ಯಾನ್, ಮಾಜಿ ಅಧ್ಯಕ್ಷ ಸತೀಶ್ ಆರ್.ಸಾಲ್ಯಾನ್, ರಾಮರಾಜ ಕ್ಷತೀಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್, ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ದಡ್ದಂಗಡಿ ಚೆಲ್ಲಡ್ಕ ಕೆ.ಡಿ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ರೈಲ್ವೇ ಯಾತ್ರಿ ಸಂಘ (ಬೊರಿವಲಿ) ಮುಂಬಯಿ ಇದರ ಗೌರವಾಧ್ಯಕ್ಷ ಡಾ| ಶಂಕರ್ ಬಿ.ಶೆಟ್ಟಿ ವಿರಾರ್ ಸೇರಿದಂತೆ ಮಹಾನಗರ ಮುಂಬಯಿಯಲ್ಲಿನ ತುಳು-ಕನ್ನಡಿಗರ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು, ಮುಂದಾಳುಗಳು ಗೋಪಾಲ್ ಶೆಟ್ಟಿ ಅವರನ್ನು ಅಭಿನಂದಿಸಿ ಶುಭಕೋರಿದ್ದಾರೆ.
ಅಭಾರ ಮನ್ನಿಸಿದ ಗೋಪಾಲ್ ಶೆಟ್ಟಿ:
ಕ್ಷೇತ್ರದ ಜನತೆಯ ಅಪಾರ ಶ್ರಮ ಮತ್ತು ತ್ಯಾಗದಿಂದ ನನ್ನ ಎಂಪಿ ಗೆಲುವು ಸಾಧ್ಯವಾಗಿದೆ. ಕ್ಷೇತ್ರದಲ್ಲಿನ ಮುಂಬಯಿವಾಸಿ ಮತದಾರರ ಸಹಯೋಗ, ಮಿತ್ರ ಪಕ್ಷಗಳ ಕಾರ್ಯಕರ್ತರ ಅಪಾರ ಶ್ರಮ, ಹಿತೈಷಿಗಳ ಸಹಕಾರದಿಂದ ನನಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ ಬಿಜೆಪಿ ಪಕ್ಷದ ಹಿರಿಕಿರಿಯ ನಾಯಕರಿಗೆ ಮತ್ತು ನನ್ನ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಗೋಪಾಲ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.
ಗೋಪಾಲ್ ಶೆಟ್ಟಿ ಅವರಿಗೆ ಈ ಬಾರಿ ಒಲಿಯಲಿದೆಯೇ ಸಚಿವ ಸ್ಥಾನ..?
ರಾಷ್ಟ್ರದ ಆಥಿಕ ರಾಜಧಾನಿ ಮುಂಬಯಿನಿಂದ ದ್ವಿತೀಯ ಬಾರಿ ಸಂಸದನಾಗಿ ಆಯ್ಕೆಯಾಗಿರುವ ಬಹುಭಾಷಿ, ಗೋಪಾಲ್ ಶೆಟ್ಟಿ ಅವರಿಗೆ ಎನ್‌ಡಿಎ ಸರಕಾರದ ನೂತನ ಸಂಪುಟದಲ್ಲಿ ಮಂತ್ರಿಸ್ಥಾನ ಪ್ರಾಪ್ತಿಯಾಗಲಿದೆ ಎಂಬ ಆಶಯ ಕ್ಷೇತ್ರದ ಮತದಾರರದ್ದಾಗಿದೆ.