ನನ್ನದು ಅವನದು
ಮನೆಯ ಅಂತರ ಕಡಿಮೆ ಆದಂತೆ
ಮನಸ್ಸು ದೂರವಾಗಿತ್ತು..!

ಅವತ್ತು ನಮ್ಮದು ಹುಲ್ಲಿನ ಮನೆ
ನಾಲ್ಕು ಮಣ್ಣಿನ ಗೋಡೆಗೆ
ಹುಲ್ಲ ಹಾಸಲು
ಅವನಿಗೆ ನಾನು
ನನಗೆ ಅವನು
ಸಹಾಯ ಮಾಡಿದ್ವಿ
ಅವನ ಮನೆ ಒಂದಷ್ಟು ದೂರ
ಒಂದ್ಹತ್ತು ಹೆಜ್ಜೆ ದೂರದಲ್ಲಿ
ಆದರೂ ನಾವು ಹತ್ತಿರದ ಗೆಳೆಯರು
ನಾನು ಹಂಚಿನ ಮನೆ ಕಟ್ಟಿದೆ
ಅವನಿಗೂ ಸಲಹೆ ಕೊಟ್ಟೆ
ವರ್ಷ ವರ್ಷ ಬದಲಾಯಿಸಬೇಕಿಲ್ಲ
ಹತ್ತು ವರ್ಷಕೊಮ್ಮೆ ರಿಪೇರಿ ಮಾಡಿದರೆ ಸಾಕು
ಅವನು ಕಟ್ಟಿದ ಸ್ವಲ್ಪ ಹತ್ತಿರದಲ್ಲಿ
ಕೂಗಿ ಕರೆಯುವಷ್ಟು ದೂರದಲ್ಲಿ
ಈಗಲೂ ನಾವು ಗೆಳೆಯರು..
ಅವನು ಟೆರೇಸ್ ಮನೆ ಮಾಡಿದ
ನನ್ನ ಮನೆ ಪಕ್ಕದಲ್ಲೇ
ಅವನ ಮನೆಯ ಪಾತ್ರೆ ಸದ್ದು
ನಮ್ಮನೆಗೆ ಕೇಳುವಷ್ಟು..!
ನಾನು ಕಟ್ಟಿದೆ
ಸ್ವಲ್ಪ ಡಿಸೈನ್ ಆಗಿ, ಎತ್ತರವಾಗಿ..!
ಈಗಲೂ ಗೆಳೆಯರು…!
ಹುಲ್ಲು ಹಾಸಿದ ಮನೆಯಿದ್ದಾಗ
ಗಾಳಿ ಮಳೆ ಬಂದರೆ ಇಬ್ಬರಲ್ಲಿ
ಒಂದು ಮನೆಗೆ ಸೇರುತ್ತಿದ್ದೆವು
ಧೈರ್ಯ ಹೇಳಿ ಸಮಾಧಾನಿಸುತ್ತಿದ್ದೆವು
ಹಂಚು ಮನೆಯಿದ್ದಾಗ
ಒಬ್ಬರಿಗೊಬ್ಬರ ಹಂಚುತ್ತಿದ್ದೆವು
ಸುಖ ಕಷ್ಟಗಳ
ಆಗೊಮ್ಮೆ ಈಗೊಮ್ಮೆ ಹೋಗಿ ಬಂದು..
ಟೆರೇಸ್ ಮನೆ ಆದಾಗ
ಎದುರು ಸಿಕ್ಕಾಗ ನಗೆ ಬೀರುತ್ತಿದ್ದೆವು
ಕಷ್ಟ ಸುಖ ಮಾತಾಡಲು ಪ್ರೆಸ್ಟಿಜ್ ಅಡ್ಡ ಬರುತ್ತಿತ್ತು
ಜೀವನ ಕ್ರಮದಲ್ಲಿ ಬದಲಾವಣೆ
ಆದಂತೆ
ಸಂಬಂಧದಲ್ಲೂ ಬದಲಾವಣೆಯಾಗುತ್ತಿದೆ..
ಬಿರುಕು ಬಿಡುವ
ಮಣ್ಣ ಗೋಡೆಯ ಮಧ್ಯೆ
ಸಂಬಂಧಗಳು ಗಟ್ಟಿಯಾಗಿತ್ತು
ಕಾಂಕ್ರೀಟ್ ಮನೆಗಳಲ್ಲಿ
ಸಂಬಂಧಗಳು
ಬಿರುಕು ಬಿಡುತ್ತಿತ್ತು….!
ಎಲ್ಲಾ ಇದೆ ಎಂದಾಗಲೇ
ಅಹಂ
ಎದೆಯ ಆವರಿಸಿತು…!
✍ಯತೀಶ್ ಕಾಮಾಜೆ