ಅವಳ
ಅಂತರಾಳದೊಳಗಿನ ಮಾತು
ಅವಳ ಬಾಯಿಂದಲೇ ಕೇಳಿ…!

‘ನಾನು ಸಾವಿರಾರು ಕೋಟಿ ಜೀವಗಳಿಗೆ
ಜೀವ ಕೊಟ್ಟವಳು..
ಯಾರನ್ನು ಮೇಲಾಗಿ ಕೀಳಾಗಿ ಕಂಡವಳಲ್ಲ.,
ಮೇಲು ಕೀಳು ಸೃಷ್ಟಿಸಿದವನು ನೀನೇ..!
ಯಾವತ್ತೂ ಯಾರನ್ನು ದ್ವೇಷಿಸಲಿಲ್ಲ
ಯಾರ ಮೇಲೂ ಸಿಟ್ಟು ಮಾಡಿಲ್ಲ..
ನಾ ಸಿಟ್ಟಾಗಿ ಭೂಕಂಪ,
ನೆರೆ ಬಂತು ,ಸುಡು ಬಿಸಿಲು,
ಚಂಡಮಾರುತ,ಭೂ ಕುಸಿತ
ಹಾಗಾಯಿತು ಹೀಗಾಯಿತು..
ಇದೆಲ್ಲ ನೀನೇ ಕಟ್ಟಿದ ಕಥೆ..!
ನನಗೂ ನಿನ್ನ ಹಾಗೆ ಜ್ವರ
ನೆಗಡಿ, ಕೆಮ್ಮು ಹೀಗೆ
ಸಣ್ಣ ಪುಟ್ಟ ರೋಗಗಳು
ಅವು ಬಂದಾಗ ಅನಾಹುತಗಳಾಗುತ್ತೆ
ಅದು ಸಿಟ್ಟಿನಿಂದಲ್ಲ..!
ಆದರೂ ಈಗೀಗ ಹೊಸ ರೋಗಗಳು
ದೇಹದ ಕೆಲವು ಭಾಗಗಳು ಸತ್ತಂತಾಗುತ್ತಿದೆ
ನಾನು ಬಂಜೆಯಾಗುತ್ತ ಬಂದಂತಿದೆ
ಮೊಲೆಯು ಬತ್ತುತ್ತಿದೆ
ಒಮ್ಮೊಮ್ಮೆ ನಂಗೆ ಉಸಿರು ಬಿಡಲಾಗುತ್ತಿಲ್ಲ
ಒಮ್ಮೊಮ್ಮೆ ಮೈ ಬಿಸಿ ಏರುತ್ತಿದೆ
ತಡೆಯಲಾಗದಷ್ಟು ನೆಗಡಿಯಾಗುತ್ತಿದೆ
ಇದ್ದಕ್ಕಿದ್ದಂತೆ ಕುಸಿದಂತ್ತಾಗುತ್ತಿದೆ
ಸಾವಿನ ಮುನ್ಸೂಚನೆ ಕಂಡಂತಾಗುತ್ತದೆ..!
ನನಗೊತ್ತು ಇದಕ್ಕೆಲ್ಲ ಕಾರಣ ನೀನೇ
ಬುದ್ದಿವಂತರೆನಿಸಿಕೊಂಡ ನಿನಗೆ
ಕಣ್ಣೆಲ್ಲ ಪೊರೆತುಂಬಿದೆ
ನನ್ನ ಪ್ರೀತಿ ಕಾಣದಷ್ಟು..!
ನಾನೆಂದು ದ್ವೇಷಿಸುವವಳಲ್ಲ
ನನ್ನ ಪ್ರೀತಿ ಅರ್ಥವಾಗುವಷ್ಟು
ಪ್ರೀತಿಸುವೆ..
ನಿನಗೆ ಅರ್ಥವಾಗದಿದ್ದರೆ
ನನ್ನುಸಿರು
ನಿಲ್ಲುವುದಷ್ಟೆ..!
ಈಗಲೂ ಹೇಳುವೆ
ನನಗೆ ದ್ವೇಷಿಸಲು ಬರುವುದಿಲ್ಲ
ಯಾಕೆಂದರೆ ನಾನು ನಿನ್ನ ಭೂತಾಯಿ
✍ಯತೀಶ್ ಕಾಮಾಜೆ