ಮನುಷ್ಯನಿಲ್ಲದೆ
ಭೂಮಿಗೆ ಅಂತು ಇಂತು
ಇಪ್ಪತ್ತು ದಾಟಿತು..
ಈಗ ಭೂಮಿಯಲ್ಲಿ ಮಾನವನ ಕುರುಹುಗಳಷ್ಟೇ…!

ನದಿದಡದಲ್ಲಿ ಪ್ಲಾಸ್ಟಿಕ್ ಈಗಲೂ ಇದೆ
ಅತ್ತಿತ್ತ ಹಾರಾಡುತ್ತಿದೆ
ಕೆಲವು ನದಿದಡದ ಒಣ ಮರಗಳಲ್ಲಿ
ಸಿಕ್ಕಿಕೊಂಡಿವೆ
ಇನ್ನೂ ಕೆಲವು ನದಿಗಳ ಸಮುದ್ರ ಸೇರಿದ
ಗುರುತಿನಂತೆ
ನದಿ ಹರಿದು ಬಂದ ಜಾಗದಲ್ಲೇ
ಉದ್ದಕ್ಕೂ ಸಾಗುತ್ತ ಬಂದಿದೆ..!

ಕಾಂಕ್ರೀಟ್ ನೆಲಗಳು ಒಡೆದು
ಕಟ್ಟಡಗಳ ಗೋಡೆಗಳು
ಬಿರುಕು ಬಿಟ್ಟಿವೆ
ಬಿರುಕಲ್ಲಿ ಸೂರ್ಯನ ಪ್ರಖರತೆ ಇಣುಕುವುದ ಕಾಣಬಹುದು
ಆ ಬಿಸಿಯೇ ಅದೆಷ್ಟೋ ಮನೆಗಳು ಕಾರ್ಖಾನೆಗಳ ಸುಟ್ಟಿದೆ
ವಲ್ಡ್ ಟ್ರೇಡ್ ಸೆಂಟರ್, ಬುರ್ಜ್‌ ಖಲೀಫ್ನಂತಹ ಸಾವಿರ ಕಟ್ಟಡಗಳು
ನಿರ್ಮಾಣವಾಗಿದ್ದವು
ಅನ್ನುವುದಕ್ಕೆ ಅಳಿದುಳಿದ
ಅವಶೇಷಗಳೇ ಸಾಕ್ಷಿ..!

ಕೋಟಿ ಗಟ್ಟಲೇ ವಾಹನಗಳು
ತುಕ್ಕು ಹಿಡಿದಿವೆ
ಅದರಲ್ಲಿ ಕೆಲವು ನೀರ ಮೇಲೆಯೂ
ಹೋಗಬಹುದು
ಬಾನಲ್ಲೂ ಆರಬಹುದು
ಈಗ ನೆಲದ ಮೇಲೆ ಬಿದ್ದಿದೆ
ಪೆಟ್ರೋಲ್,ಎಲೆಕ್ಟ್ರಿಕಲ್
ವಿಥ್ ಡ್ರೈವರ್, ವಿಥೌಟ್ ಡ್ರೈವರ್
ಏನೇನೋ ವಾಹನಗಳು
ಎಲ್ಲ ಅಲ್ಲಲ್ಲಿ ಬಿದ್ದಿದೆ..!
ಸಮುದ್ರ ಇದ್ದ ಜಾಗದಲ್ಲಿ
ಬಿದ್ದ ಹಡಗುಗಳ ರಾಶಿಗಳ ನೋಡಿಯೇ
ಹೇಳಬಹುದು ಸಮುದ್ರದ ವಿಸ್ತೀರ್ಣ..!

ಇಷ್ಟೇ ಯಾಕೆ
ಭೂಮಿ ಸುತ್ತ ಭೂಮಿ ಒಳಗಿಂದ
ಬಿಟ್ಟ ಉಪಗ್ರಹಗಳು ಈಗಲೂ
ಸುತ್ತುತ್ತಲೇ ಇದೆ
ಯಾರ ಹಿಡಿತಕ್ಕೂ ಒಳಗಾಗದೆ
ಭೂಮಿಯ ಕಕ್ಷೆಯ ಬಿಡಲಾಗದೆ..!
ಒಮ್ಮೊಮ್ಮೆ ಒಂದಕ್ಕೊಂದು ಡಿಕ್ಕಿಯಾಗಿ
ಭೂಮಿಯ ಆಕರ್ಷಣೆಗೆ ಒಳಗಾಗಿ
ಬೆಂಕಿಯಾಗಿ
ಭೂಮಿಯ ಅಪ್ಪಳಿಸುತ್ತಿತ್ತು..!

ಸತ್ತ ಮಾನವನ ದೇಹಗಳು
ಅವನ ಕೊನೆಯ ಕ್ಷಣಗಳ ಹೇಳುವಂತಿತ್ತು
ಅವನು ಭೂಮಿಯಲ್ಲಿ ಅನ್ಯಗ್ರಹದಲ್ಲಿ
ಇದ್ದಂತೆ ಬದುಕುತ್ತಿದ್ದ
ಆಮ್ಲಜನಕವ ಕ್ರಿಯೇಟ್ ಮಾಡಿ
ಬ್ಯಾಗ್ ತುಂಬಿಸಿ
ಬೆನ್ನಿಗಂಟಿಸಿ
ಮೂಗಿಗೆ ಪೈಪ್ ಕನೆಕ್ಷನ್ ಕೊಟ್ಟಿದ್ದ
ಅಲ್ಲಲ್ಲಿ ಬಿದ್ದ ಮೂಳೆಗಳ ಬೆನ್ನಲ್ಲಿದ
ಆ “ಆಕ್ಸಿಜನ್ ಬ್ಯಾಗ್” ನಾಮಫಲಕ
ಹೊಂದಿದ್ದ ಬ್ಯಾಗುಗಳೇ ಸಾಕ್ಷಿ..!
ನೀರಿಗಾಗಿ ಹಾತೊರೆದದ್ದು
ದುಡ್ಡು ಕೊಟ್ಟದ್ದು
ಬಾಟಲಿಗಳಲ್ಲಿ ಮಾಸದಂತೆ ಬರೆದ
ಬೆಲೆಗಳೇ ಸಾಕ್ಷಿ..!

ಕೊನೆಗೆ ತಾನು ಸತ್ತ ಭೂಮಿಯ ಕೊಂದು
ಈಗ ಭೂಮಿಯೊಂದು
ಸೂರ್ಯನ ಸುತ್ತ ತಿರುಗುವ ಗ್ರಹವಷ್ಟೇ…!

 

✍ಯತೀಶ್ ಕಾಮಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here