Sunday, October 22, 2023

*ಸತ್ತ ಕಾರಣ*

Must read

ಸಾವು ? ಸಾವು
ಬರಬಾರದಿತ್ತು ಅವನಿಗೆ
ಹೀಗೆ ಎಲ್ಲ ಕಳಚಿ ಬೆತ್ತಲೆ
ಮಾಡಿ ಹೋಗಬಾರದಿತ್ತು
ಅದೂ ಎಲ್ಲರೆದುರು ಝಗ
ಮಗಿಸುವ ಸುಡು ಹಗಲಿನಲಿ!

ಪಾ…ಪ!
ಬೆತ್ತಲೆಯಾಟಕೆ ಸೋತು
ಅದಕೆ ಗೂಟ ಜಡಿದೇ
ಮಠದಂಗಳದಿ ಆಳವಾಗಿ
ಬೇರು ಬಿಟ್ಟು ಗರ್ಭ ಗುಡಿಯ
ಒಳಗಡೆ ನಿರ್ಭಾವದಿ ಕುಳಿತ!

ದೇವರ ದಿಟ್ಟಿಸುತ
ತನ್ನಾಸೆಯ ಹೂ
ಹಣ್ಣು ಕಾಯಿಗಳನೆಲ್ಲ
ಬಂದವರ ನೊಂದವರ
ಉಡಿಯಲಿ ಮಡಿಲಲಿ
ಹಾಕಿ ಪುನೀತನಾದ !

ಇಂಥ ಜೀವಕೆ
ಸಾವು ಬರಬಾರದಿತ್ತು!
ಯಾರ್ಯಾರನ್ನೋ ಹೇಗ್ಹೇಗೋ
ಹೊತ್ತೊಯ್ಯುವ ಯಮ
ಸುಮ್ಮನಿದ್ದರೂ ಕಿತಾಪತಿ
ಚಿತ್ರಗುಪ್ತನ ಕಾರುಬಾರಿಗೆ
ಲಗಾಮು ಹಾಕಲಿಲ್ಲ ಅಂತೀರಾ ?

ಇಲ್ಲ ಇಲ್ಲ ..
ಯಮ ಹಾಕಿದ ಲಗಾಮು
ಚಿತ್ರಗುಪ್ತ ಅವನ ಕೋಣನಿಗೆ
ಹಾಕಿ ಯಮನನ್ನೇ ಯಾಮಾರಿಸಿ
ಇವನ ಕೋಮಲ ಕೊರಳಿಗೆ
ಕಳಚದ ನೇಣು ಬಿಗಿದ!

ಬಿಳಿ ಹಾಳೆಯಲಿ ಕರಿಯ
ಅಕ್ಷರಗಳ ಬರೆದ ಯಮನ
ಹೆಸರಿನ ಚೀಟಿಯನು ಅವನ
ಮೇಜಿನ ಮೇಲಿಟ್ಟು ಓಡಿದ
ಮೋಜು ನೋಡಿದ !

ಅಂತೂ ಇಂತೂ
ತಲೆ ಕೆರೆವವರ ಕೈಗೆ ಬೆಣಚು
ಗಲ್ಲನಿಟ್ಟು ಸತ್ತವನಿಗೊಂದು
ದಾರಿ ತೋರಿ ಮಾಯವಾದ !
ಮುಂದಿನ ಕರ್ಮ-ಕ್ರಮ
(ಆ)ರಕ್ಷಕರಿಗೇ ಬಿಟ್ಟ!

 

#ನೀ.ಶ್ರೀ ಶೈಲ ಹುಲ್ಲೂರು

More articles

Latest article