Wednesday, October 18, 2023

*ಮಳೆಯಲ್ಲಿ ಮಿನುಗಿ ನಗು*

Must read

ತಂದಿರುವೆಯಾ ಕೊಡೆಯನ್ನಾ
ಮತ್ತೆ ಮೋಡವಾಗಿದೆ ಈಗ|
ಹೆಪ್ಪುಗಟ್ಟಿದ ಪ್ರೀತಿಯ ಭಾವವು
ಶುರುವಾಗಿದೆ ಜಿನುಗಲು ಈಗೀಗ…||
ದೀಪವ ಬೆಳಗಿ ಮಿಂಚು
ಡಂಗುರ ಸಾರಿತೇ ಗುಡುಗು|
ನೀ ಬಂದ ಈ ಹೊತ್ತಲ್ಲಿ
ಬದಲಾದ ಬಗೆಯು ಬೆರಗು||
ತಿಳಿಯಾಗಿ ಸುಳಿದು ತಂಗಾಳಿ
ಮುಂಗುರುಳ ಜಾರಿ ತೂಗು|
ಅಬ್ಬರ ಮಳೆಯ ಗುನುಗು
ನೀ ಆವರಿಸಿ ಮಿನುಗಿ ನಗು…||

ಹನಿ ಹನಿಗಳ ನಡುವೆ
ಎಂತಹ ಮೋಹ ಕಣ್ಣಂಚಲ್ಲಿ|
ನಿಂತ ನಿಲುವಾ ನಡೆಯಲ್ಲೂ
ಪರವಶ ಪ್ರಸಂಗ ಆ ನೋಟದಲ್ಲಿ||
ಕೆಂಪೇರಿ ಕಂಗೊಳಿಸಿದ ಕ್ಷಣ
ಹುಬ್ಬೇರಿಸಿತು ಮಲೆನಾಡ ಬಣ್ಣ|
ನೋಟ ಕದಲುವ ಮುನ್ನ
ಮೈ ನೆವರುವ ಮೌನ||
ಹಸಿ ಹಸಿರ ನಡುವಿನಲ್ಲಿಯೂ
ನಿನ್ನ ಭಾವ ಪುಳಕದ ನಡುಗು|
ಕನವರಿಕೆಯ ಯಾಗ ಜರುಗಿದೊಡನೆ
ಮುದವೆನಿಸಿ ಹಿತ ಜಿನುಗು…||

ಎಲೆ ಎಲೆಯ ಮೇಲೂ
ಸ್ಪರ್ಶಿಸಿ ಪುಟಿದೇಳುವ ಬಿಂದು|
ತೆರೆದ ಕೊಡೆಯ ಮತ್ತೆ ತೂರಿ
ಮಿಂದೇಳುವ ಸಡಗರ ನೀ ಕುಣಿದು||
ಎಲ್ಲಾ ಬಾಧೆಯ ಭಯವೂ ದೂರ
ರೋಮಾಂಚನ ನಿನ್ನೊಂದಿಗೆ ನೆನೆದು|
ಪಿಸುಗುಡುವ ತುಂಟಾಟಗಳ
ಕದ್ದಾಲಿಸದವು ಹಿಂಜರಿದರಿದು
ಮುತ್ತುಗಳೇ ಖುದ್ದು…||
ಮಳೆ ಬಂದು ಹೋದ ಮೇಲೂ
ನಿನ್ನದೇ ಕಲರವ ಆಗೂ ಈಗೂ|
ತಂಪಾದ ಛಾಯೆಯ ಬಿಸಿಯುಸಿರು
ನನ್ನಲ್ಲಿ ಚಿಲಿಪಿಲಿ ಹಾಗೂ ಹೀಗೂ…||

 

*ಬಸವರಾಜ ಕಾಸೆ*

More articles

Latest article