ಬಂಟ್ವಾಳ : ಸುಮಾರು 3 ಕೋಟಿ ರೂ. ವೆಚ್ಚದಲ್ಲಿ, ತೌಳವ ದ್ರಾವಿಡ ಶೈಲಿಯಲ್ಲಿ, ಸಂಪೂರ್ಣ ಶಿಲಾಮಯವಾಗಿ ಪುನರ್ನಿರ್ಮಾಣಗೊಂಡಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬದರ್ಕಳ ಗರಡಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಮೂರನೇ ದಿವಾದ ರವಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಜರಗಿತು.
ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಮತ್ತು ಕಕ್ಯ ಶ್ರೀನಿವಾಸ ಅರ್ಮುಡ್ತಾಯರ ಮಾರ್ಗದರ್ಶನದಲ್ಲಿ, ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮುಡ್ತಾಯ, ಪೆಜಕಕ್ಲ ಗಂಗಾದರ ಕಕೃಣ್ಣಾಯ ಅವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬೆಳಗ್ಗೆ ಬ್ರಹ್ಮಕಲಶ ಆರಾಧನೆ, ಪ್ರಧಾನ ಹೋಮಗಳು ನಡೆಯಿತು. ಬಳಿಕ ಕರ್ಕಾಟಕ ಲಗ್ನ ಸುಮೂಹೂರ್ತದಲ್ಲಿ ಶಿಖರ ಪ್ರತಿಷ್ಠೆ, ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬದರ್ಕಳ, ದೈವೊಂಕುಳು, ಮಾಯಂದಾಲ್ ದೈವಗಳ ಪ್ರತಿಷ್ಠೆ, ಧ್ವಜಸ್ತಂಭ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪರ್ವಗಳು, ಮಹಾಪೂಜೆ, ಧ್ವಜಾರೋಹಣ, ಪಲ್ಲಪೂಜೆ, ಕೋಟಿ-ಚೆನ್ನಯ್ಯರ ದರ್ಶನ ಮೊದಲಾದ ವೈದಿಕ, ಧಾರ್ಮಿಕ ವಿಧಿ ವಿಧಾನಗಳು ನಡೆದವು. ಸಂಜೆ ಕಕ್ಯಗುತ್ತು ಬೋಂಟ್ರರ ಮನೆಯಿಂದ ದೈವೋಂಕುಳು ಭಂಡಾರ ಬಂದು ರಾತ್ರಿ ನೇಮೋತ್ಸವ, ಸಂಕ್ರಾತಿ ಸೇವೆಗಳು ನಡೆಯಿತು.

ರಾತ್ರಿ ಧಾರ್ಮಿಕ ಸಭೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಧ್ಯಾಹ್ನ ಜಿಲ್ಲೆಯ ಖ್ಯಾತ ಕಲಾವಿದರಿಂದ ಯಕಷಗಾನ ತಾಳಮದ್ದಲೆ, ರಾತ್ರಿ ರಾಷ್ಟ್ರ ಪ್ರಶಸಸ್ತಿ ವಿಜೇತೆ ಜ್ಞಾನ ಐತಾಳ್ ಮತ್ತು ಬಳಗದವರಿಂದ ಹೆಜ್ಜೆನಾದ ನೃತ್ಯ ಸಂಗೀತ ವೈಭವ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವ, ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಮೋಕ್ತೇಸರ ಕುಟುಂಬಸ್ಥರಾದ ರಾಜವೀರ್ ಜೈನ್, ಸಂಚಾಲಕರಾದ ಚಿತ್ತರಂಜನ್ ಕಂಕನಾಡಿ, ರೋಹಿನಾಥ ಪಾದೆ, ಕಾರ್ಯಾಧ್ಯಕ್ಷ ಬಿ. ಪದ್ಮಶೇಖರ ಜೈನ್, ಶ್ರೀ ಕ್ಷೇತ್ರ ಪಡ್ಯಾರಬೆಟ್ಟುವಿನ ಅನುವಂಶಿಕ ಆಡಳಿತ ಮೋಕ್ತೇಸರ ಜೀವಂದರ್ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ವಾಸ್ತು ಶಿಲ್ಪಿ ಪ್ರಮಲ್ ಕುಮಾರ್,ಪುನರ್ ನಿರ್ಮಾಣ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್ ಆಜೋಡಿ, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ ಮತ್ತಿತರ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಮಧ್ಯಾಹ್ನ, ರಾತ್ರಿ ಮಹಾ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಂದರ, ವಿಶಿಷ್ಠ ಗರಡಿಯನ್ನು ವೀಕ್ಷಿಸಿ ಕಣ್ತುಂಬಿಕೊಂಡರು.
ಇಂದಿನ ಕಾರ್ಯಕ್ರಮ:
ಮೇ 20ರಂದು ಸಂಜೆ ಗಂಟೆ 6 ರಿಂದ ಶ್ರೀ ಕಡಂಬಿಲ್ತಾಯ ಮತ್ತು ಕೊಡಮಣಿತ್ತಾಯಿ ದೈವಗಳ ನೇಮೋತ್ಸವ ನಡೆಯಲಿದೆ. ಸಂಜೆ 7ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಶ್ರೀ ಕ್ಷೇತ್ರ ಬಲ್ಯೊಟ್ಟುವಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿರುವರು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಕೆ. ವಸಂತ ಬಂಗೇರ, ಉದ್ಯಮಿ ಜಗದೀಪ್ ಸುವರ್ಣ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬಾರ್‍ದಡ್ಡು ಕುಟುಂಬಸ್ಥರಾದ ರಾಜವೀರ ಜೈನ್, ಜಿ. ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉದ್ಯಮಿ ರಘು ಸೋiಯಾಜಿ ಮೊದಲಾದವರು ಭಾಗವಹಿಸಲಿದ್ದಾರೆ. ರಾತ್ರಿ ಬಲೇ ತೆಲಿಪಾಲೆ ಖ್ಯಾತಿಯ ತಂಡದವರಿಂದ ತೆಲಿಕೆದ ಗೊಂಚಿಲ್, ತೆಲಿಕೆದ ಬರ್ಸ, ಕುಸಲ್ದ ಕುರ್ಲರಿ ಕಾರ್ಯಕ್ರಮ ನಡೆಯಲಿದೆ.