ಬಂಟ್ವಾಳ: ತಾಲೂಕಿನ ಉಳಿ ಗ್ರಾಮದ ಕಕ್ಕೆಪದವು ಗರೋಡಿ ಕ್ಷೇತ್ರದ ನೂತನ ಶಿಲಾಮಯ ಆಲಯದಲ್ಲಿ ಶ್ರೀ ಕಡಂಬಿಲ್ತಾಯ,ಕೊಡಮಣಿತ್ತಾಯಿ,ದೈವೊಂಕುಳು,ಬ್ರಹ್ಮಬೈದರ್ಕಳ,ಮಾಯಾಂದಲ್ ದೈವಗಳ ಪುನರ್ ಪ್ರತಿಷ್ಠೆ,ಬ್ರಹ್ಮಕಲಶೋತ್ಸವವು  ಮೇ.17-19  ರವರೆಗೆ ನಡೆಯಲಿದೆ ಎಂದು ಕಕ್ಕೆಪದವು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರದ ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ,ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

 ಶನಿವಾರ ಸಂಜೆ ಶ್ರೀ ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಟಿ-ಚನ್ನಯ್ಯರೇ ಸ್ಥಾಪಿಸಿದ ಜಿಲ್ಲೆಯ 66 ಗರೋಡಿಗಳ ಪೈಕಿ ಕಕ್ಕೆಪದವು ಶ್ರೀ ಬ್ರಹ್ಮಬೈದರ್ಕಳ ಗರೋಡಿಯು ಒಂದಾಗಿದೆ. ವಿಶಿಷ್ಠವಾದ  ತೌಳವ ದ್ರಾವಿಡ ಶೈಲಿಯಲ್ಲಿ ಕಕ್ಕೆಪದವು ಗರೋಡಿಯನ್ನು ಶಿಲಾಮಯವಾಗಿ ಸುಮಾರು 3 ಕೋಟಿ ರೂ.ವೆಚ್ಚದಲ್ಲಿ  ಪುನರ್ ನಿರ್ಮಿಸಲಾಗುತ್ತಿದೆ,ಕಕ್ಕೆಪದವು ಗರೋಡಿಯ ಎರಡೂವರೆ ಎಕ್ರೆ ಜಮೀನನ್ನು ಸರಕಾರ ಕಳೆದ ಸಂಪುಟಸಭೆಯಲ್ಲಿ ಗರೋಡಿಯ ಹೆಸರಿಗೆ ಮಂಜೂರಾತಿ ನೀಡಿದೆ ಎಂದರು.ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯರವರ ಮಾರ್ಗದರ್ಶನ,ಕಕ್ಯ ಶ್ರೀನಿವಾಸ ಅರ್ಮುಡ್ತಾಯರವರ ಉಪಸ್ಥಿತಿಯಲ್ಲಿ ಕ್ಷೇತ್ರದ ಅಸ್ರಣ್ಣರಾದ ರಾಜೇಂದ್ರ ಅರ್ಮುಡ್ತಾಯರವರ ನೇತೃತ್ವದಲ್ಲಿ ವಿವಿಧ ವೈಧಿಕವಿಧಿವಿಧಾನಗಳು ನಡೆಯಲಿದ್ದು,ಮೇ.17ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಸರ್ವ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಎಂದರು.ಮೇ.19 ರಂದು ಶಿಖರ,ಧ್ವಜಸ್ತಂಭ,ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ನಡೆಯಲಿದೆ.ಬ್ರಹ್ಮಕಲಶದ ಪ್ರತಿದಿನ ನಿರಂತರವಾಗಿ ಸಾರ್ವಜನಿಕ ಅನ್ನಸಂತರ್ಪಣೆ,ಸಂಜೆಯ ವೇಳೆ ನಡೆಯುವ ಧಾರ್ಮಿಕ ಸಭೆಯಲ್ಲಿ ವಿವಿಧ ಕ್ಷೇತ್ರದ ಮಠಾಧೀಶರು ಆರ್ಶೀವಚನ ನೀಡಲಿದ್ದಾರೆ.ಸಾಮಾಜಿಕ,ರಾಜಕೀಯ,ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ರಮಾನಾಥ ರೈ ವಿವರಿಸಿದರಲ್ಲದೆ ಬ್ರಹ್ಮಕಲಶದ ಯಶಸ್ವಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ.ಹಾಗೆಯೇ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ ಎಂದರು.    ವಾರ್ಷಿಕ ಜಾತ್ರೆ: ಮೇ.19 ರಿಂದ 22 ರವರೆಗೆ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆಯು ನಡೆಯಲಿದೆ ಎಂದು ಅವರು ತಿಳಿಸಿದರು.21 ರಂದು ಬೈದರ್ ಗಳು ಗರಡಿ ಇಳಿದು,ಮಾಯಾಂದಲೇ ನೇಮ ಜರಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಪದ್ಮಶೇಖರಜೈನ್,ಜೀರ್ಣೋದ್ದಾರ ಸಮಿತಿ ಅಧ್ಉಕ್ಷ ಮಾಯಿಲಪ್ಪ ಸಾಲಿಯಾನ್ ಕೆ.,ವಿವಿಧ ಸಮಿತಿ ಪದಾಧಿಕಾರಿಗಳಾದ ಎ. ಚೆನ್ನಪ್ಪ ಸಾಲಿಯಾನ್,ಚಂದ್ರಶೇಖರ.ಕೆ,ವಾಸುದೇವ ಮಯ್ಯ,ಬೇಬಿಕುಂದರ್,ವಿಜಯಕುಮಾರ್ , ವೀರೇಂದ್ರಕುಮಾರ್ ಜೈನ್,ಬಾಲಕೃಷ್ಣ ಅಂಚನ್,ದಿನೇಶ್ ಬಂಗೇರ,ಧರ್ಣಪ್ಪ ಪೂಜಾರಿ,ರಾಜೀವ ಕೆ.,ವಿಶ್ವನಾಥ ಸಾಲ್ಯಾನ್ ಬಿತ್ತ,ಡೀಕಯ್ಯ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here