Wednesday, October 18, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-44

Must read

ಬರಸಿಡಿಲಿನಂತೆ ಬಿಸಿಲ ಬೇಗೆ, ನೀರಿಗಾಗಿ, ಮಳೆಗಾಗಿ ಕಾತರಿಸುವ ಪರಿ ನಮ್ಮದಾಗಿದೆ. ಇದರ ನಡುವೆ ರಸ್ತೆ ಅಗಲೀಕರಣ ನಡೆದಿದೆ. ನೂರಾರು ವರುಷಗಳಿಂದ ಬಾಳಿ, ಬದುರಿ ಉಸಿರಿಗೆ ಗಾಳಿ ನೀಡಿ, ನೆರಳು, ಆಶ್ರಯ, ಹಣ್ಣು ನೀಡುತ್ತಿದ್ದ ಬೃಹತ್ ಗಾತ್ರದ ಸಾವಿರಾರು ಮರಗಳು ತಮ್ಮ ಜೀವಕಳೆದುಕೊಂಡು ಅನಾಥ ಶವಗಳಂತೆ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು ನೋಡಿದರೆ ಕರುಳು ಹಿಂಡುತ್ತದೆ. ಮರಗಳಿಗೂ ಜೀವವಿದೆ, ಅದು ನಮಗೆ ಉಪಕಾರಿ ತಾನೇ? ಹೊರದೇಶಗಳಲ್ಲಿ ಬೆಳೆದ ಮರಗಳನ್ನು ತೆಗೆಯಬೇಕೆಂದರೆ ಬೇರು ಸಹಿತ ಕಿತ್ತು ಬೇರೆಡೆ ನೆಡುತ್ತಾರೆ. ನಮ್ಮಲ್ಲಿ ಮರ ಕಡಿದು ಮಾರಿ ಅದರಲ್ಲಿ ಎಷ್ಟು ದುಡ್ಡು ಬರಬಹುದೆಂದು ಅಂದಾಜಿಸಿ ಹರಾಜು ಹಾಕಿ ಒಬ್ಬನಿಗೆ ವಹಿಸಿ ಬಿಡುತ್ತಾರೇನೋ. ಅವರು ಬೇರನ್ನೊಂದು ಬಿಟ್ಟು ಉಳಿದ ಭಾಗ ಮಾರಾಟ ಮಾಡಿ ಬಿಡುತ್ತಾರೆ! ತಾನು ಬಳಸಿದ ಪಬ್ಲಿಕ್ ಟಾಯ್ಲೆಟ್ ನಲ್ಲಿ ನೀರು ಹಾಕದೆಯೂ, ಹಾಳು ಮಾಡಿಯೂ, ಅಲ್ಲಿ ಬಂದು ಶರಾಬು ಕುಡಿದು ಹೋಗುವವರು ಇರುವ ವರೆಗೆ ಭಾರತ ಉದ್ಧಾರವಾಗದು! ಸಿವಿಕ್ ಸೆನ್ಸ್ ಎನ್ನುವ ಕಾಮನ್ ಸೆನ್ಸ್ ನಮಗಿರಬೇಕು! ನಾವು ಹೊರಗೆ ತಿಂದು ಅದರ ಪ್ಲಾಸ್ಟಿಕನ್ನು ಬಸ್ಸು, ಕಾರುಗಳ ಕಿಟಕಿ ಗಾಜಿನಿಂದ ಸಿಕ್ಕ ಸಿಕ್ಕಲ್ಲಿ ಹೊರಗೆ ಬಿಸಾಕುವುದನ್ನೆ ನಮ್ಮ ಮಕ್ಕಳು ಕಲಿಯುತ್ತಾರೆ. ಬದಲಾಗಿ ಅದನ್ನು ಬ್ಯಾಗಿನಲ್ಲೋ ಕವರ್ ನಲ್ಲೋ ಮನೆಗೇ ತಂದು ಡಿಸ್ ಪೋಸ್ ಮಾಡಿದರಾಗದೇ!? ತುಂಡು ತುಂಡು ಬಟ್ಟೆ ತೊಟ್ಟು ಪಿಜ್ಝಾ ಬರ್ಗರ್ ತಿನ್ನುವುದು ಮಾತ್ರವಲ್ಲ, ಇದನ್ನು ಕೂಡಾ ಹೊರದೇಶದವರಿಂದ ನಾವು ಕಲಿಯಬೇಕಿದೆ!
ಯಾಕೆ ಹೊಸದನ್ನು ಕಂಡು ಹಿಡಿಯುವ ಭಾರತೀಯರು ಕಡಿಮೆ ಎಂದರೆ ಮೊದಲನೆಯ ಉತ್ತರ ಯಾರಾದರೂ ಏನಾದರೂ ತಂದು ಕೊಟ್ಟರೆ ನಾವು ಆರಾಮದಲ್ಲಿ ಉಪಯೋಗಿಸಿಕೊಂಡು ಇರುತ್ತೇವೆ. ಹೊಸದನ್ನು ಹುಡುಕಲು ಕಷ್ಟಪಡುವ ಕಾರ್ಯ ನಮಗೆ ಬೇಡ!
ನಾವು ಆರಾಮ ಪ್ರಿಯರು. ಯಾರಾದರೂ ಕಷ್ಟಪಟ್ಟು ಸಾಧನೆ ಮಾಡಲು ಹೊರಟರೆ “ಅವನಿಗೆ ಬೇರೇನು ಕೆಲಸವಿಲ್ಲ, ಅದೇನೋ ಮಾಡ್ತಾನಂತೆ, ಮಾಡ್ಲಿ ನೋಡುವ” ಎಂದು ಚೀಪ್ ಆಗಿ ಮಾತನಾಡುವವರು. ಬೇರೆಯವರ ಕೆಲಸಕ್ಕೆ ಗೌರವ ಕೊಡದವರು! ಅದಕ್ಕೆ ಹಲವಾರು ಜನ ವಿದೇಶಕ್ಕೆ ಹೋಗಿ, ಯಾರೂ ಪರಿಚಯ ಇಲ್ಲದ ಬೇರೆ ಊರಿಗೆ ಹೋಗಿ ತಮ್ಮ ಸಾಧನೆ ಮಾಡುತ್ತಾರೆ!
ಅದೇನೇ ಇರಲಿ, ನಮ್ಮ ಸಾಧನೆ ಗಿಡಮರಗಳನ್ನು ಬೆಳೆಸುವುದಿರಲಿ. ಸಾಲುಮರದ ತಿಮ್ಮಕ್ಕನಂಥ ಸಾವಿರಾರು ಮಂದಿಯನ್ನು ನೋಡುವಂತಾಗಲಿ. ಕಾಲಕಾಲಕ್ಕೆ ಸರಿಯಾಗಿ ಮಳೆಬರಲಿ, ಪ್ರಕೃತಿಗೆ ಪ್ಲಾಸ್ಟಿಕ್ ಸೇರದಂತಾಗಲಿ, ಮಣ್ಣಿಗೆ ರಾಸಾಯನಿಕ ಸುರಿಯದ ಸಾವಯವ ರೈತರು ಹುಟ್ಟಲಿ. ಮರಗಳನ್ನು ಸಾಯಿಸದೆ, ಕಡಿಯದೆ ಬೇರೆ ವಿಧಾನಗಳಲ್ಲಿ ರಸ್ತೆಯ ಅಗಲೀಕರಣವಾಗಲಿ. ನೀವೇನಂತೀರಿ?

 

@ಪ್ರೇಮ್@

More articles

Latest article