


ಮಳೆರಾಯ ಕಾಣೆಯಾಗಿದ್ದಾನೆ ಈ ವರ್ಷ! ಮಾರ್ಚ್ ನಿಂದಲೇ ಆಗಾಗ ಸುರಿಯುತ್ತಿದ್ದ ಮಳೆ ಒಮ್ಮೆ ಬಂದು ಮುಖ ತೋರಿಸಿ ಇನ್ನಿಲ್ಲವೆಂಬಂತೆ ತಲೆ ಮರೆಸಿಕೊಂಡಿದೆ. ಬಾವಿ ಬರಿದಾಗಿದೆ. ಬೋರು ಬೋರಾಗಿದೆ. ಪ್ರಾಣಿ, ಪಕ್ಷಿ, ಪಶುಗಳ ಬದುಕು ಬಾಯಾರಿ ಬಳಲಿದೆ. ವಿದ್ಯುತ್ ಕೈ ಕೊಟ್ಟಿದೆ.
ಮೊನ್ನೆಯಷ್ಟೆ ಊಟಿಗೆ ಪ್ರವಾಸ ಮುಗಿಸಿ ಬಂದಾಗ ನನಗೆ ಹೀಗೂ ಉಂಟೇ ಅನ್ನಿಸಿಬಿಟ್ಟಿತು. ಅಲ್ಲೀಗ ತುಟಿ ಸಮೇತ ಗಡಗಡ ನಡುಗುವ 13-15 ಡಿಗ್ರಿಗಳ ಚಳಿ! ನನ್ನ ಗಂಟಲುನೋವು, ಶೀತ ಇನ್ನೂ ಕಡಿಮೆ ಆಗಿಲ್ಲ! ಇಲ್ಲೂ, ತಮಿಳು ನಾಡಿನ ಇತರೆಡೆಗಳಲ್ಲೂ ಅಸಾಧ್ಯ ಸೆಕೆ! ಊಟಿಗೆ ಮಾತ್ರ ಊಟಿಯೇ ಸಾಕ್ಷಿ!
ಕಳೆದ ವರುಷ ದುಪ್ಪಟ್ಟು ಸುರಿದು ಬರಬೇಡಪ್ಪಾ ಮಳೆಯೇ ಇಷ್ಟೊಂದು! ಅಂದದ್ದೇ ತಪ್ಪಾಗಿರಬೇಕು ಜನ! ಈ ವರುಷ ವರುಣ ಅಡಿಯಿಡಲೇ ಇಲ್ಲ! ಬಂದರೆ ಜೋರಾಗಿ ಒಮ್ಮೆ ನಮಗೆ ತಿಳಿಯುವುದು ಜೆಸಿಬಿ ಎಂಬ ಮಾನವನೇ ಕಂಡು ಹಿಡಿದ ಬ್ರಹ್ಮ ರಾಕ್ಷಸನ ಅವತಾರದ ಪರಿ!
ಅಲ್ಲಲ್ಲಿ ರಸ್ತೆ ಅಗಲೀಕರಣಕ್ಕೆ ಇದ್ದ ಮರಗಳನ್ನೆಲ್ಲ ಉರುಳಿಸಿ, ಗುಡ್ಡವನ್ನೆಲ್ಲ ಜರಿದು, ಆ ತಲೆಯಿಲ್ಲದ ಎತ್ತಿನ ಹೊಳೆ ತಿರುವು ಯೋಜನೆಗೆ ಕಡಿಯುವಷ್ಟು ಅರಣ್ಯ ಕಡಿದು ನಾಶ ಮಾಡಿ, ಯಾರು ಹೇಳಿದ್ದೂ ಕೇಳದೇ ತಾನೇ ಜೈ ಎಂದ ಸರಕಾರದ ಕೆಲಸದಿಂದ ಬೇರಿನ ಹಿಡಿತ ಕಳೆದುಕೊಂಡ ಮಣ್ಣು ಸವಕಳಿಗಾಗಿ ಕಾದು ಕುಳಿತಿವೆ.
ಈ ಸಲದ ಮಳೆಗಾಲದಲ್ಲಿ ನೀವು ಶಿರಾಡಿ ಕೆಸರು ಸಹಿತ ಘಾಟಿಯ ಅಂದವನ್ನೂ, ಅರ್ಧಂಬರ್ಧ ರಿಪೇರಿಯಾಗಿ ವಾಹನ ಓಡುತ್ತಿರುವ ಮಡಿಕೇರಿ ರಸ್ತೆಯ ಸ್ಥಿತಿಯನ್ನೂ, ಸಾವಿರಾರು ಗುಂಡಿಗಳ ಹೊಂದಿ ನೀರು ಕುಡಿದು ತೇಗಿ, ತುಂಬಿಸಿಕೊಂಡು ಎರಚಾಡುವ ಚಾರ್ಮಾಡಿ ಘಾಟಿಯ ಸೌಂದರ್ಯವನ್ನೂ ಸವಿಯಲೇ ಬೇಕಿದೆ!
ಏನಾದರಾಗಲಿ, ಟೆನ್ಷನ್ ಘಟ್ಟದ ಮೇಲಿನವರಿಗೆ, ನಮಗೇನು!? ಅಂತಾ ಸುಮ್ಮನಿರುತ್ತೀರೋ..ನಿಮ್ಮ ಪ್ರತಿಯೊಬ್ಬ ಮನೆಯವರ ಸಂಬಂಧಿ ಬೆಂಗಳೂರಿನಲ್ಲಿರುವರು! ನಿಮಗೆ ನಿತ್ಯ ಅಡಿಗೆಗೆ ಹಾಸನ, ಚಿಕ್ಕಮಗಳೂರು, ಬ್ಯಾಡಗಿ, ದಾವಣಗೆರೆ, ಮೈಸೂರಿನಿಂದ ಬರಬೇಕು ತರಕಾರಿ, ಬೇಳೆ, ಕಾಳು, ನೀರುಳ್ಳಿ, ಬೆಳ್ಳುಳ್ಳಿ, ಮೆಣಸು!
ಮನುಜ ಸಂಘ ಜೀವಿ.ಒಂಟಿ ಜೀವಿಯಾಗಿ ಬದುಕಲಾರ. ಪರಸ್ಪರ ಕೊಡು ಕೊಳ್ಳುವಿಕೆ, ಪ್ರೀತಿ, ವಿಶ್ವಾಸಗಳಿಲ್ಲದೆ ಬದುಕಲಾರ! ಜಗಳವೂ ಬದುಕಿನ ಒಂದಂಶವೆಂದು ಅದನ್ನೂ ಬಿಡಲಾರ!
ವರುಣನೂ ಜನರ ಕುಕೃತ್ಯಕ್ಕೆ ಮುನಿದು ಬುದ್ಧಿ ಕಲಿಸಲು ಹೊರಟಿರಬೇಕು! ಏನಾಗಲಿ, ಕೊನೆಗೆ ದೇವರಿಗೆ ಮೊರೆಯಿಡುವುದಷ್ಟೆ ಕೈಲಾಗದ ಮಾನವನ ಕಾರ್ಯ! ಇನ್ನೆರಡು ವಾರ ಮಳೆ ಬರದಿದ್ದರೆ ಅದನ್ನೆ ಮಾಡಬೇಕಷ್ಟೆ! ನೀವೇನಂತೀರಾ?
@ಪ್ರೇಮ್@


