Friday, October 27, 2023

ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ವಚ್ಛತಾ ಅಭಿಯಾನ

Must read

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಶುಕ್ರವಾರ ದೇವಸ್ಥಾನದ ನೌಕರರು, ವಾಹನ ಚಾಲಕರು ಮತ್ತು ಮಾಲಕರು, ಊರಿನವರು, ಗ್ರಾಮ ಪಂಚಾಯಿತಿ, ಕೆ.ಎಸ್.ಆರ್.ಟಿ.ಸಿ. ಹಾಗೂ ವಿವಿಧ ಸಂಘಟನೆಗಳ ಜನರು ನೇತ್ರಾವತಿ ನದಿ ಮತ್ತು ಸ್ನಾನ ಘಟ್ಟದಲ್ಲಿ ಬೆಳಿಗ್ಗೆ ಗಂಟೆ 6.30 ರಿಂದ 9 ರ ವರೆಗೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.

 

ನದಿಯಲ್ಲಿ ಪ್ರವಾಸಿಗರು ಬಿಸಾಡಿದ ಬಟ್ಟೆ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಲಾರಿಗಳಲ್ಲಿ ಸಾಗಿಸಲಾಯಿತು.

ಮಾಧ್ಯಮದವರೊಂದಿಗೆ ಮಾತನಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಸ್ವಚ್ಛತೆ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆ ಪರಿಣಾಮಕಾರಿಯಾಗಿದ್ದು ದೇಶದಲ್ಲಿ ಶೇ. 50 ರಷ್ಟು ಯಶಸ್ವಿಯಾಗಿದೆ. ಪ್ರತಿ ಮನೆಯಲ್ಲಿಯೂ ಈ ಭಾವನೆ ಮೂಡಿ ಬರಬೇಕು ಎಂದು ಅವರು ಹಾರೈಸಿದರು.

ಹೊರ ರಾಜ್ಯಗಳಿಂದ ಧರ್ಮಸ್ಥಳಕ್ಕೆ ಬರುವವರಿಗೆ ಸ್ವಚ್ಛತೆ ಬಗ್ಯೆ ಪ್ರಜ್ಞೆ ಕಡಿಮೆ ಇದೆ. ಈಗಾಗಲೇ ಕೊಂಚ ಬದಲಾವಣೆಯಾಗಿದೆ. ಸತತ ಪ್ರಯತ್ನದಿಂದ ಜನ ಜೀವನದಲ್ಲಿ ಇನ್ನಷ್ಟು ಬದಲಾವಣೆಯಾಗಬೇಕಾಗಿದೆ ಎಂದು ಅವರು ಆಶಿಸಿದರು.

ಊರಿನವರು ಮತ್ತು ಧರ್ಮಸ್ಥಳದ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಸಂತೋಷವಾಗಿದೆ. ಎಲ್ಲರಿಗೂ ದೇವರ ಆಶೀರ್ವಾದ ಇರಲಿ ಎಂದು ಹೆಗ್ಗಡೆಯವರು ಹಾರೈಸಿದರು.

ಸಿರಿಧಾನ್ಯ ಕೆಫೆ ಶುಭಾರಂಭ ನಾಳೆ
ಉಜಿರೆ: ಸಿರಿ ಧಾನ್ಯಗಳ ಬಳಕೆಯನ್ನು ಜಿಲ್ಲೆಯ ಜನರಿಗೆ ಪರಿಚಯಿಸಿ, ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೇತೃತ್ವದಲ್ಲಿ ಲಾಲದಲ್ಲಿರುವ ತರಬೇತಿ ಕೇಂದ್ರದ ಆವರಣದಲ್ಲಿ ಇದೇ ೨೬ ರಂದು ಭಾನುವಾರ ಸಿರಿ ಧಾನ್ಯ ಕೆಫೆ ಶುಭಾರಂಭಗೊಳ್ಳಲಿದೆ ಎಂದು ಸಿರಿ ಘಟಕದ ನಿರ್ದೇಶಕಿ ಮನೋರಮಾ ಭಟ್ ತಿಳಿಸಿದ್ದಾರೆ.
ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಧರ್ಮಸ್ಥಳದ ಶ್ರದ್ಧಾ ಅಮಿತ್ ಸಿರಿ ಧಾನ್ಯ ಕೆಫೆಯನ್ನು ಉದ್ಘಾಟಿಸುವರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್. ಮಂಜುನಾಥ್ ಅಧ್ಯಕ್ಷತೆ ವಹಿಸುವರು.
ಧಾರವಾಡದ ಸಿರಿ ಧಾನ್ಯ ಆಹಾರ ಧಾನ್ಯ ತಜ್ಞೆ ಡಾ. ಶಕುಂತಳಾ ಸವದತ್ತಿ ಮತ್ತು ಭದ್ರಾವತಿಯ ಸಾವಯವ ಕೃಷಿಕ ಈಶ್ವರನ್ ಪಿ. ತೀರ್ಥ ಶುಭಾಶಂಸನೆ ಮಾಡುವರು.
ನಿರ್ದೇಶಕ ಬೂದಪ್ಪ ಗೌಡ, ಯೋಜನಾಧಿಕಾರಿ ರೋಹಿತಾಕ್ಷ ಮತ್ತು ಹಿರಿಯ ಮಾರುಕಟ್ಟೆ ಅಧಿಕಾರಿ ಸುಧಾಕರ್ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.

More articles

Latest article