Wednesday, October 18, 2023

ಚೆಂಬೂರು ಕರ್ನಾಟಕ ಸಂಘದ ಸಂಕುಲದಲ್ಲಿ ‘ಹಕ್ಕಿ ಹಾಡು’ ಕನ್ನಡ ನಾಟಕ ಪ್ರದರ್ಶನ

Must read

ಮುಂಬಯಿ: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಕನ್ನಡ ಕಲಾ ಕೇಂದ್ರ ಮುಂಬಯಿ ಸಂಸ್ಥೆಗಳ ಸಹಕಾರದಲ್ಲಿ ಚೆಂಬೂರು ಕರ್ನಾಟಕ ಸಂಘವು ತನ್ನ ಸಂಚಾಲಕತ್ವದಲ್ಲಿ ನಾಡಿನ ಪ್ರಸಿದ್ಧ ನಿರ್ದೇಶಕಿ ಬೆಂಗಳೂರುನ ದಾಕ್ಷಾಯಿಣಿ ಭಟ್ ತಮ್ಮ ನಿರ್ದೇಶನದಲ್ಲಿ ಚೆಂಬೂರು ಕರ್ನಾಟಕ ಸಂಘದ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನಾಟಕ ತರಬೇತಿ ಶಿಬಿರವು ಇಂದಿಲ್ಲಿ ಸಮಾಪನ ಕಂಡಿತು.

ಆ ಪ್ರಯುಕ್ತ ನಾಟಕ ಶಿಬಿರದ ಸಮಾರೋಪ ಕಳೆದ ಶುಕ್ರವಾರ ಸಂಜೆ ಚೆಂಬೂರು ಘಾಟ್ಲಾ ಅಲ್ಲಿನ ಸಂಸ್ಥೆಯ ಸಂಕುಲದಲ್ಲಿ ನಡೆಸಲಾಗಿದ್ದು ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ಅರಾಟೆ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿ ತಮ್ಮ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಸಿದರು. ಸಂಘದ ಗೌರವ ಕಾರ್ಯದರ್ಶಿ ದೇವದಾಸ್ ಶೆಟ್ಟಿಗಾರ್, ಗೌರವ ಕೋಶಾಧಿಕಾರಿ ಟಿ.ಆರ್ ಶೆಟ್ಟಿ, ಸಹ ಕೋಶಾಧಿಕಾರಿ ಸುಂದರ್ ಎನ್. ಕೋಟ್ಯಾನ್, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾಸಾಗರ್ ಚೌಟ, ಕನ್ನಡ ಕಲಾಕೇಂದ್ರ ಮುಂಬಯಿ ಅಧ್ಯಕ್ಷ ಬಿ.ಬಾಲಚಂದ್ರ ರಾವ್ ವೇದಿಕೆಯಲ್ಲಿದ್ದು ಮಕ್ಕಳಿಗೆ ನಾಟಕ ತರಬೇತಿ ನೀಡಿದ್ದ ನಾಡಿನ ಪ್ರಸಿದ್ಧ ನಿರ್ದೇಶಕಿ ದಾಕ್ಷಾಯಿಣಿ ಭಟ್ ಬೆಂಗಳೂರು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ತರಬೇತಿ ಪಡೆದ ವಿದ್ಯಾರ್ಥಿಗಳೂ ಗುರುಗೌರವ ಸಲ್ಲಿಸಿ ಅಭಿವಂದಿಸಿದರು.

ನಾಟಕದ ಇಂತಹ ಅನುಭವ ಪಡೆದ ನಾವು ಇನ್ನು ಮುಂದೆ ಯಾವುದೇ ಕಾರ್ಯಕ್ರಮವನ್ನು ತಮ್ಮ ಶಾಲಾ ವಿದ್ಯಾಥಿಗಳಿಂದಲೇ ಮಾಡಿಸುತ್ತೇವೆ. ಶಿಬಿರವನ್ನು ಯಶಸ್ವಿಯಾಗಿ ನಡೆಸಿದ ಎಲ್ಲಾ ಪದಾಧಿಕಾರಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ ಹಾಗೂ ತುಂಬಾ ಆಸಕ್ತಿಯಿಂದ ಅಭಿನಯಿಸಿದ ಎಲ್ಲಾ ಬಾಲ ಕಲಾಕಾರರಿಗೆ ಸಂಘದ ಕೃತಜ್ಞತೆ ಸಲ್ಲಿಸುವೆ ಎಂದು ನ್ಯಾಯವಾದಿ ಅರಾಟೆ ನುಡಿದರು.

ರಂಗ ಭೂಮಿ ನಮಗೆ ಕಲಿಸುವುದು ಕಟ್ಟುವ ಕಲೆಯನ್ನು ಒಡೆಯುವ ಕಲೆಯನ್ನಲ್ಲ. ವ್ಯಕ್ತಿತ್ವ ವಿಕಸನ ಎಂದರೆ ನಾಟಕವನ್ನು ಮಾಡುವುದು. ಚೆಂಬೂರು ಕರ್ನಾಟಕ ಸಂಘದಲ್ಲಿ ನನಗೆ ಸರಳ ಮನಸಿನ ವ್ಯಕ್ತಿಗಳು ಸಿಕ್ಕಿದ್ದಾರೆ. ಸರ್ವ ರೀತಿಯಲ್ಲಿ ಸಹಕಾರ ನೀಡಿದ ಸಂಘದ ಎಲ್ಲಾ ಸದಸ್ಯರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು ಎಂದು ನುಡಿದರು. ನಾಟಕ ಅಭಿನಯಕ್ಕೆ ಮಕ್ಕಳಿಗೆ ಬೆಂಬಲ ನೀಡಿ ಎಂದು ಪಾಲಕರಲ್ಲಿ ವಿನಂತಿಸಿ ದಾಕ್ಷಾಯಿಣಿ ಭಟ್ ಗೌರವಕ್ಕೆ ಅಭಿವಂದಿಸಿದರು.

ಬಾಲಚಂದ್ರ ರಾವ್ ಅವರು ಸಂಘದ ಅಧ್ಯಕ್ಷರಿಗೆ ಸ್ಮರಣಿಕೆಯನ್ನು ನೀಡಿ ಈ ನಾಟಕ ಪ್ರದರ್ಶನಕ್ಕೆ ಮೂಲ ಕಾರಣ ಸಂಘದ ಅಧ್ಯಕ್ಷರು ಎಂದು ನುಡಿದರು. ತುಂಬಾ ವರ್ಷದ ಮೊದಲು ಹಾಕಿದ ಬೀಜ ಇಂದು ವೃಕ್ಷವಾಗಿ ಬೆಳೆದಿದೆ ಎಂದರು.
ದಯಾಸಾಗರ್ ಮಾತನಾಡಿ ತುಂಬಾ ಹೆಮ್ಮೆಯ ವಿಷಯ ಎಂದರೆ ನಮ್ಮ ಸಂಘದ ಅಧ್ಯಕ್ಷರು ತಾವು ಕುಳಿತ ಕುರ್ಚಿಯ ಬೆಲೆಯನ್ನು ತುಂಬಾ ಎತ್ತರಕ್ಕೆ ಏರಿಸುತ್ತಾರೆ. ಕಾರ್ಯಕ್ರಮದ ಯಶಸ್ಸಿಗೆ ಒಳ್ಳೆಯ ಮನಸ್ಸು ಹಾಗೂ ಒಳ್ಳೆಯ ಸ್ಪಂದನ ಇರಬೇಕು ಎಂದರು. ರಂಗ ವೇದಿಕೆಗೆ ಬೇಕಾದ ಸಕಲ ಸೌಕರ್ಯಗಳನ್ನು ಒದಗಿಸಿದ ಟಿ.ಆರ್ ಶೆಟ್ಟಿ ಹಾಗೂ ದೇವದಾಸ್ ಶೆಟ್ಟಿಗಾರ್ ಅವರಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಹಾಡು ಹಕ್ಕಿ ನಾಟಕವನ್ನು ಪ್ರದರ್ಶಿಸಿ ಸಭಿಕರ ಮನ ಗೆದ್ದ ವಿದ್ಯಾಥಿಗಳ ಬಗ್ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇಂಪಾದ ಹಾಡು ಮೈನಾ ಹಕ್ಕಿಯ ಅಭಿನಯ, ಮೈನಾ ಹಕ್ಕಿ ಗೆಳತಿಯ ಮಾತಿನ ವೈಖರಿ ಮತ್ತು ರಾಜನ ವಾಕ್ಚಾತುರ್ಯ ಸದಾ ಸ್ಮರಣೆಯಲ್ಲಿ ಇರುವಂತೆ ಮಾಡಿತು ಎಂದರು.

ಪ್ರತಿಷ್ಠಿತ ರಂಗತಜ್ಞ ಡಾ| ಭರತ್ ಕುಮಾರ್ ಪೊಲಿಪು ವಿದ್ಯಾಥಿಗಳ ಅಭಿನಯಕ್ಕೆ ಬೆರಗಾಗಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾ ಮಕ್ಕಳು ತುಂಬಾ ಅಂದವಾಗಿ ತಮ್ಮ ಪಾತ್ರವನ್ನು ತಾವೇ ಅನುಭವಿಸಿ ಮಾಡಿದ್ದಾರೆ ಎಂದರು. ಚೆಂಬೂರು ಕರ್ನಾಟಕ ಸಂಘದ ಸಾಂಸ್ಕತಿಕ ಕಾಳಜಿಗೆ ನಾನು ತುಂಬಾ ಇಷ್ಟ ಪಡುತ್ತೇನೆ, ಇದಕ್ಕೆ ಮಾಡಿದ ಖರ್ಚು ಅದು ಖರ್ಚು ಅಲ್ಲ ಬದುಕಿನ ಬಂಡವಾಳ ಎಂದರು.

ಪ್ರಸಿದ್ಧ ರಂಗ ನಿರ್ದೇಶಕ ಮೋಹನ್ ಮಾರ್ನಾಡ್ ಮಾತನಾಡುತ್ತ ವಿದ್ಯಾರ್ಥಿಗಳನ್ನು ಕಲಾವಿದರನ್ನಾಗಿ ಮಾಡುವುದು ತುಂಬಾ ಪುಣ್ಯದ ಕೆಲಸ ನಾವು ಮಾನವರಾಗಿ ಒಬ್ಬರಿಗೊಬ್ಬರು ಪ್ರೀತಿಸಬೇಕು ಎಂದು ನುಡಿದರು.

ಪ್ರಶಸ್ತಿ ಪುರಸ್ಕೃತ ಕವಿ ಗೋಪಾಲ ತ್ರಾಸಿ ಮಾತನಾಡಿ ಇದೊಂದು ಬಂಡವಾಳ. ಈ ರಂಗ ವೇದಿಕೆಯಿಂದ 10, 20 ಕಲಾವಿದರು ಮುಂಬಯಿ ರಂಗಭೂಮಿಗೆ ಬರಬೇಕು ಎಂದರು. ಸುಮಾರು ಹದಿನೈದು ದಿನಗಳ ರಂಗ ತರಬೇತಿ ಶಿಬಿರದ ಅನುಭವದ ಬಗ್ಗೆ ವಿದ್ಯಾಥಿಗಳಾದ ಯಶಸ್ವಿನಿ ಶೆಟ್ಟಿ, ಶಿವರುದ್ರ ರಾಜಕುಮಾರ್, ಪೋಲ್ ಲಕ್ಷಿ ಮತ್ತು ಪಲ್ಲವಿ ಕಟ್ಟಿಮಣಿ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ನಾಟಕಕ್ಕೆ ಸಹಕರಿಸಿದ ಕನ್ನಡ ಕಲಾಕೇಂದ್ರ ಮುಂಬಯಿಯ ಕಾರ್ಯದರ್ಶಿ ಮಧುಸೂದನ್, ಹಳೆ ವಿದ್ಯಾರ್ಥಿ ಗಾಯಕರಾದ ಭರತ್ ಶೆಟ್ಟಿ ಮತ್ತು ಮನೋಜ್ ಗೌಡ, ಆನಂದ್, ಜೀವನ್ ಬೋರ್ಡಿಂಗ್‌ನ ಮಾಲಕ ನರೇಶ್ ಶೆಟ್ಟಿ, ಮೇಕಪ್ ಮ್ಯಾನ್ ರಾಜ್‌ದೀಪ್ ಮತ್ತು ಮನೋಜ್, ಅನ್ನ ಪೂರ್ಣ ಗೃಹಾಲಂಕಾರಕ ನಾರಾಯಣ ಕರಿ, ಕಲಾಶಿಕ್ಷಕ ಪ್ರಮೋದ್ ಕುರ್ನೆ ಇವರಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.

ಶಿಕ್ಷಕಿ ವಿಜೇತಾ ಎಂ.ಸುವರ್ಣ ದಾಕ್ಷಾಯಿಣಿ ಅವರನ್ನು ಪರಿಚಯಿಸಿದರು. ಶಿಕ್ಷಕಿ ಅನಿತಾ ಶೆಟ್ಟಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶೈಲೇಶ್ ಸಾಲ್ಯಾನ್ ಧನ್ಯವಾದಗೈದರು. ಕಾರ್ಯಕ್ರಮದ ಅಂಗವಾಗಿ ತರಬೇತಿ ಪಡೆದ ಸಂಘದ ಶಾಲಾ ವಿದ್ಯಾರ್ಥಿಗಳು ದಾಕ್ಷಾಯಿಣಿ ಭಟ್ ನಿರ್ದೇಶನದಲ್ಲಿ ‘ಹಕ್ಕಿ ಹಾಡು’ ಎಂಬ ಕನ್ನಡ ನಾಟಕ ಪ್ರದರ್ಶಿಸಿದರು.

More articles

Latest article