ಬಂಟ್ವಾಳ: ಬೆಳ್ತಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದ ಘಟನೆ ಐಟಿಐ ಉಪನ್ಯಾಸಕ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಸ್ಥಳೀಯ ನಿವಾಸಿಗಳಾದ ನಾಗೇಶ್ ಪೂಜಾರಿ(32) ಹಾಗೂ ಡೀಕಯ್ಯ ನಲ್ಕೆ(39) ಎಂದು ಗುರುತಿಸಲಾಗಿದೆ. ಆರೋಪಿಗಳು ರೈಲಿನಲ್ಲಿ ಮುಂಬೈಗೆ ಪರಾರಿಯಾಗುತ್ತಿರುವ ವೇಳೆ ಬೈಂದೂರು ರೈಲ್ವೇ ನಿಲ್ದಾನದಲ್ಲಿ ವಶಕ್ಕೆ ಪಡೆಯಲಾಯಿತು ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಮಾಲಾಡಿ ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕನ ವಿಕ್ರಮ್ ಜೈನ್ (45) ಅವರನ್ನು ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಕೊಲೆ ಆರೋಪಿಗಳ ಪೈಕಿ ಒಬ್ಬನಿಗೆ ಆತನ ಹತ್ತಿರದ ಸಂಬಂಧಿ ಮಹಿಳೆಯೊಬ್ಬರ ವಿಚಾರವಾಗಿ ವಿಕ್ರಂ ಅವರೊಂದಿಗೆ ದ್ವೇಷವಿತ್ತು ಎನ್ನಲಾಗಿದೆ. ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿಗೆ ವಿಕ್ರಮ್ ಜೈನ್ ರವರನ್ನು ಕರೆಸಿಕೊಂಡು ಕೊಲೆ ಮಾಡಲಾಗಿದೆ. ಆರೋಪಿಗಳು ಅವರಿಗೆ ಪರಿಚಿತರಾಗಿದ್ದರಿಂದ ಸ್ಥಳಕ್ಕೆ ತೆರಳಿದ್ದರು. ಆ ಸಂದರ್ಭ ಆರೋಪಿಗಳಿಬ್ಬರು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದೆ.