ಬಂಟ್ವಾಳ: ಮಳೆಗಾಲದಲ್ಲಿ ಶಾಲಾ ಮಕ್ಕಳು ಸರಿಯಾದ ಸೇತುವೆ ಇಲ್ಲದ ಕಾರಣಕ್ಕೆ ಶಾಲೆಗೆ ಹೋಗಲು ಅನನುಕೂಲವಾಗದಿರಲು, ಶಾಲಾ ಮಕ್ಕಳ ಸುರಕ್ಷತೆಗಾಗಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಕನಸಿನ ಶಾಲಾ ಸಂಪರ್ಕ ಸೇತು ಯೋಜನೆ ಪ್ರಕಾರ ಬಂಟ್ವಾಳ ತಾಲೂಕಿನಲ್ಲಿ 28 ಕಿರು ಸೇತುವೆಗಳು ನಿರ್ಮಾಣಗೊಳ್ಳುತ್ತಿದೆ.
ಮಳೆಗಾಲದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನತೆ, ಮುಖ್ಯವಾಗಿ ಶಾಲಾ ಮಕ್ಕಳು ಅಪಾಯಕಾರಿ ಹಳ್ಳ ಕೊಳ್ಳಗಳನ್ನು ದಾಟುವ ತೊಂದರೆ ಅನುಭವಿಸುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿ 37 ಸೇತುವೆಗಳನ್ನು ಗುರುತಿಸಲಾಗಿದ್ದು, 191.27 ಲಕ್ಷ ರೂ ವೆಚ್ಚದಲ್ಲಿ 28 ಸೇತುವೆಗಳ ನಿರ್ಮಾಣ ಕಾರ್ಯ ನಡೆದಿದೆ.
ಕಳೆದ ಮಳೆಗಾಲದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶಾಲಾ ವಿದ್ಯಾರ್ಥಿನಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರಿಂದ ಎರಡು ದಿನಗಳ ಕಾಲ ಆ ಭಾಗದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ಶಾಲಾ ಸಂಪರ್ಕ ಸೇತು ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದರು.



ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಶಾಲೆಗೆ ತೆರಳಲು ಗದ್ದೆ, ತೋಟಗಳ ರಸ್ತೆಯಲ್ಲಿ ಸುತ್ತು ಬಳಸಿ ಸಾಗಬೇಕಾಗುತ್ತದೆ. ಇದರ ಜತೆ ಹಳ್ಳ-ಕೊಳ್ಳಗಳನ್ನು ದಾಟಿ ಹೋಗುವ ಪರಿಸ್ಥಿತಿ ಇರುತ್ತದೆ. ಆದರೆ ಈ ಹಳ್ಳ-ಕೊಳ್ಳಗಳಿಗೆ ಸರಿಯಾದ ಸೇತುವೆ ಇರುವುದಿಲ್ಲ. ಬದಲಾಗಿ ಅಡಿಕೆ ಮರ ಅಥವಾ ಇತರ ಮರಗಳಿಂದ ನಿರ್ಮಿಸಿದ ತಾತ್ಕಾಲಿಕ ಸೇತುವೆಗಳ ಮೇಲೆ ಸಾಗಬೇಕು. ಇದು ಬಹಳ ಅಪಾಯಕಾರಿಯೂ ಹೌದು. ಇದನ್ನು ಮನಗಂಡ ರಾಜ್ಯ ಸರಕಾರ ಕಳೆದ ನವಂಬರ್ ತಿಂಗಳಲ್ಲಿ ಶಾಲಾ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆದೇಶಿಸಿ, ಅನುದಾನ ನೀಡಿದೆ. ಲೋಕೋಪಯೋಗಿ ಇಲಾಖೆ ಮೂಲಕ ಸೇತುವೆ ನಿರ್ಮಿಸಲಾಗುತ್ತಿದೆ.
ಮಾರ್ಗಸೂಚಿ: ಸೇತುವೆ ನಿರ್ಮಾಣಕ್ಕೆ ಆಯಾ ಭಾಗದ ಶಾಲಾ ಮುಖ್ಯಸ್ಥರು ಸ್ಥಳೀಯ ಜನರು ಹಾಗೂ ಪ್ರಮುಖರೊಟ್ಟಿಗೆ ಚರ್ಚಿಸಿ ಬೇಡಿಕೆ ನೀಡಿದ್ದಾರೆ. ತಾಲೂಕಿನ ಕ್ಷೇತ್ರ ಶಿಕ್ಷಣಾಽಕಾರಿ ಅವರು ಸೇತುವೆಗಳ ಪಟ್ಟಿ ತಯಾರಿಸಿ ಲೋಕೋಪಯೋಗಿ ಇಲಾಖೆಗೆ ಸಲ್ಲಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಕಟ್ಟಡ ಮತ್ತು ಸಂಪರ್ಕ ವಿಭಾಗದ ಎಂಜಿನಿಯರ್ ಕಿರುಸೇತುವೆಗಳ ವಿನ್ಯಾಸ ಹಾಗೂ ಅಂದಾಜುಪಟ್ಟಿ ಸಿದ್ದಪಡಿಸಿದ್ದಾರೆ. ಇಲಾಖೆಯ ಮಾರ್ಗಸೂಚಿ ಪ್ರಕಾರ ಸೇತುವೆಗಳ ಸ್ಥಳ ಗುರುತಿಸುವಿಕೆ, ವಿನ್ಯಾಸ, ಯೋಜನಾ ವರದಿ ತಯಾರಿಸಿ, ತಾಂತ್ರಿಕ ಮಂಜೂರು ಪ್ರಕ್ರಿಯೆ ನಡೆಸಲಾಗಿದ್ದು, ತಲಾ 15 ಲಕ್ಷ ರೂ. ವೆಚ್ಚದಲ್ಲಿ 1 ರಿಂದ 3 ಮೀ.ಅಗಲದ ಕಿರು ಸೇತುವೆ ನಿರ್ಮಿಸಲಾಗುತ್ತಿದೆ.
ಇದು ಶಾಶ್ವತ ಯೋಜನೆಯಾಗಿದ್ದು, ಬೇಡಿಕೆಯನ್ವಯ ಪರಿಶೀಲಿಸಿ ನಿರಂತರ ಸೇತುವೆ ನಿರ್ಮಾಣ ಪ್ರಕ್ರಿಯೆ ನಡೆಯಲಿದೆ ಎಂದು ಲೋಕೋಪಯೋಗಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.