1996-97, ನಾನಾಗ ಇಲಾಖೆಯಲ್ಲಿ ಅಂಬೆಗಾಲಿಡುತ್ತಿದ್ದ ಕಾಲ, ನಾನು ಆಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದೆ. ಮಾನ್ಯ ಮೇಘರಿಕ್ ಸಾರ್ ರವರು ದಕ ಜಿಲ್ಲೆಯ ಎಸ್ಪಿ, ಬಿಪಿನ್ ಗೋಪಾಲಕೃಷ್ಣ DIG ಆಗಿದ್ದರು, ಆಗ ಮಂಗಳೂರು ಜಿಲ್ಲೆ ಎಂದರೆ ಮಂಗಳೂರು, ಪಣಂಬೂರು, ಪುತ್ತೂರು, ಉಡುಪಿ, ಕಾರ್ಕಳ ಉಪ ವಿಭಾಗಗಳ ಒಂದು ಸಂಘಟಿತ ಜಿಲ್ಲೆ ಆಗಿತ್ತು, ಕ್ರೈಂ ಮೀಟಿಂಗ್ ಎಂದು ಎಲ್ಲಾ ಅಧಿಕಾರಿಗಳು ಒಂದು ಕಡೆ ಸೇರಿದರೆ ಸುಮಾರು 75 ರಿಂದ 80 ಜನ ಬರೀ ಅಧಿಕಾರಿಗಳೇ ಸೇರುತ್ತಿದ್ದರು, ಅಷ್ಟು ವಿಸ್ತಾರವಾಗಿತ್ತು ನಮ್ಮ ಹೆಮ್ಮೆಯ ದಕ್ಷಿಣ ಕನ್ನಡ ಜಿಲ್ಲೆ, ನಂತರ ಆಗಸ್ಟ್ 25, 1997 ರಲ್ಲಿ ಜಿಲ್ಲೆ ವಿಭಜನೆಗೊಂಡು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಎಂದು ವಿಭಾಗವಾದವು,

ನನಗೆ ಇಲಾಖೆಯ ಕಾರ್ಯ ವೈಖರಿ, ಇಲಾಖೆಯ ಎಲ್ಲಾ ವ್ಯವಸ್ಥೆಗಳೂ ದಹ ಹೊಸದು, ಹೇಳಿ ಕೇಳಿ ದಕ ಜಿಲ್ಲೆ ಎಂದರೆ ತುಳು ಭಾಷೆ ಮಾತನಾಡುವ ಜಿಲ್ಲೆ, ನಾನೋ ಘಟ್ಟದಿಂದ ಬಂದ ಒಬ್ಬ ಹಳ್ಳಿಯ ಹುಡುಗ, ತುಳು ಬರುತ್ತಿರಲಿಲ್ಲ, ನನಗೆ ಆಗ CPI ಆಗಿದ್ದವರು ಜೆ ಪಾಪಯ್ಯ, ಡಿವೈಎಸ್ಪಿ ಆಗಿದ್ದವರು ಪಿಸಿ ಗಣಪತಿಯವರು, ಇದರಲ್ಲಿ ಉಪ್ಪಿನಂಗಡಿ ಪಿಎಸ್ಐ ಆಗಿದ್ದವರು ನಮ್ಮ ಗುರುಗಳಾದ ಶೇಖರಪ್ಪನವರು, ಇರಲಿ, ಪುತ್ತೂರು, ಹಸಿರ ಸಿರಿಯನ್ನು ಹೊದ್ದು ಮಿಂದ ಊರು, ಮಹತೋಬಾರ ಮಹಲಿಂಗೇಶ್ವರ ದೇವರ ಆವಾಸ ಸ್ಥಾನ, ಈ ದೇವರ ಜಾತ್ರೆ, ಬೆಡಿ, ಅವಭೃತ ಸ್ನಾನದ ಮೆರವಣಿಗೆ, ಬಿರುಮಲೆ ಗುಡ್ಡ, ಬೇಂದ್ರ್ ತೀರ್ಥ, ಅಡಿಗಡಿಗೆ ಸಿಗುವ ದೇವಾಲಯಗಳು, ಮಸೀದಿಗಳು, ಚರ್ಚ್ಗಳು, ಸಹಕಾರಿ ತತ್ವದಡಿಯ ಕ್ಯಾಂಪ್ಕೋ, ಆ ಸಂಸ್ಥೆಗೆ ಸೇರಿದ ಚಾಕೋಲೇಟ್ ಫ್ಯಾಕ್ಟರಿ, ಸುಂದರ ಪರಿಸರ, ಕಂಗು ತೆಂಗು ಬೆಳೆಗಳ ನಾಡು, ಅಲ್ಲಲ್ಲಿ ನಡೆಯುವ ಕೋಳಿ ಅಂಕ, ಭೂತದ ಕೋಲ, ಹೀಗೆ ನಿಜವಾಗಿಯೂ *ಹತ್ತೂರನ್ನು ಬಿಟ್ಟರೂ ಪುತ್ತೂರನ್ನು ಬಿಡ* ಎಂಬ ನಾಣ್ಣುಡಿಯಂತೆ ಇಂದಿಗೂ ಪುತ್ತೂರು ಎಂಬ ಊರು ನನ್ನನ್ನು ಬಿಡದೆ ಹೃದಯದಲ್ಲಿಯೇ ಆವರಿಸಿರುವ ನಾನಿಷ್ಟ ಪಡುವ ಊರು ಇದಾಗಿತ್ತು, ಆದರೆ ಈ ಮೇಲ್ಕಂಡವಕ್ಕೆಲ್ಲಾ ಕಪ್ಪು ಚುಕ್ಕೆ ಎನ್ನುವಂತೆ *ಹಿಂದೂ ಮುಸ್ಲಿಂ ನಡುವೆ ಅಲ್ಪ ಮಟ್ಟಿನ ಕೋಮುವಾದವೂ ಜೊತೆಗಿತ್ತು*
7 August 1997 ಪುತ್ತೂರಿಗೆ ಕಪ್ಪು ಚುಕ್ಕೆ ಇಟ್ಟಂತೆ ಒಂದು ಅನೀರಿಕ್ಷಿತ ಘಟನೆ ನಡೆದು ಹೋಯಿತು, ಸೌಮ್ಯ ಭಟ್ ಎಂಬ ವಿವೇಕಾನಂದ ಕಾಲೇಜು ವಿದ್ಯಾರ್ಥಿನಿಯನ್ನು ಕಬಕದ ಬಳಿ ಮಿಲಿಟ್ರೀ ಅಶ್ರಫ್ ಎಂಬುವನು ಕೊಂದು ಬಿಟ್ಟ, ಈ ಘಟನೆಯಿಂದ ಪುತ್ತೂರು ಅಲ್ಲೋಲಕಲ್ಲೋಲವಾಯಿತು, ಅಲ್ಲಿಯವರೆಗೂ ತಣ್ಣಗಿದ್ದ ಕೋಮುವಾದ ಎಂಬ ರಾಕ್ಷಸ ಚೀತ್ಕಾರ ನಡೆಸಿ ಕಾಲಿಗೆ ಬಿದ್ದವರನ್ನು ತುಳಿಯಲು ಪ್ರಾರಂಭಿಸಿ ದೊಡ್ಡ ಗಲಾಟೆಯೇ ನಡೆದು ಕಾನೂನು ಸುವ್ಯವಸ್ಥೆಗೆ ಭಂಗವೂ ಆಯ್ತು, ನಂತರ ನಮ್ಮ ಪಿಐ ಪಾಪಯ್ಯ, ಡಿವೈಎಸ್ಪಿ ಗಣಪತಿ ಇವರುಗಳ ತಲೆದಂಡವೂ ಆಯ್ತು ಬಿಡಿ ಅದು ಒತ್ತಟ್ಟಿಗಿರಲಿ,
ಬಿ. ದಯಾನಂದ್, IPS, ಬಲು ಕಡಕ್ ಅಧಿಕಾರಿ, ಹುಟ್ಟುವಾಗಲೇ ತನ್ನ ರಕ್ತದಲ್ಲಿಯೇ ಪೊಲೀಸ್ ಕೆಲಸವನ್ನ, ಆ ಗತ್ತನ್ನ ಗಳಿಸಿಕೊಂಡೇ ಹುಟ್ಟಿ ಬೆಳೆದವರು, ಅವರು ಎಷ್ಟೆಂದರೆ ಎಲ್ಲ ನಡೆಯಲ್ಲೂ, ನುಡಿಯಲ್ಲಿಯೂ ಪ್ರೊಫೇಷನಲಿಸಂ ಎದ್ದು ಕಾಣುತ್ತಿತ್ತು, ಅವರೊಬ್ಬ ನಾ ಕಂಡ ಉತ್ತಮೋತ್ತಮ ಅಧಿಕಾರಿ, ನಮ್ಮ ದಯಾನಂದ್ ಸಾಹೇಬರಿಗೊಂದು ಪುತ್ತೂರು ASP ಆದ ನಂತರ ಒಂದು ಚಟ ಇತ್ತು, ನಾವು ಅಧೀನಾಧಿಕಾರಿಗಳು ಒಂದು ವಾರದೊಳಗೆ ಏನಾದರೂ ಒಂದು ಸಮಾಜ ವಿದ್ರೋಹಿ ಪ್ರಕರಣವನ್ನು ಕಂಡು ಹಿಡಿದು ಪ್ರಕರಣ ದಾಖಲಿಸಿ ಒಫಿಸಬೇಕಿತ್ತು, ಇಲ್ಲದಿದ್ದರೆ ನಮಗೆ ಉಳಿಗಾಲ ಎಂಬುದು ಮರೀಚಿಕೆ ಆಗಿರುತ್ತಿತ್ತು,, ಅಷ್ಟು ಕಡಕ್ ವಾರ್ನಿಂಗ್, ಒಂಥರ ಚೇಳಿನ ಕೊಂಡಿಯಂಗಿದ್ದರು ಅವರು,
ನಮಗಾಗ ಸಿಗುತ್ತಿದ್ದದ್ದು ಒಂದೋ ಉಳಾಯಿ – ಪಿದಾಯಿ ಮತ್ತೊಂದು ಕೋಳಿ ಅಂಕ, ಕೋಳಿ ಅಂಕ ರೈಡ್ ಮಾಡಿ ರೈಡ್ ಮಾಡಿ ಅದೂ ಕಡಿಮೆ ಆಗುತ್ತಿತ್ತು, ಆದರೂ ಸಾಹೇಬರಿಗೆ ನಾವು ವರದಿ ಕೊಡಬೇಕಿತ್ತಲ್ವಾ ? ಹಾಗಾಗಿ ಸಮಾಜಿಕ ಪಿಡುಗುಗಳ ಬಗ್ಗೆ ಆಗ ಯುದ್ದವನ್ನೇ ಸಾರಿದ್ದರೂ ಕೇಸು ಸಿಗದಾಗ ತಿಪ್ಪೆ ಸಾರಿಸಲು ಸಾಧ್ಯವಾಗದೆ ಯಾವುದನ್ನು ಹಿಡಿಯೋದು ? ಹೇಗೆ ಹಿಡಿಯೋದು ಎಂದು ತಲೆಗೆ ಹುಳ ಬಿಟ್ಟುಕೊಂಡದ್ದೇ ಬಂತು ಭಾಗ್ಯ,
ನನ್ನಲ್ಲಿ ಆಗ ವಸಂತ ಎಂಬ ಕಾನ್ಸ್ಟೇಬಲ್ ಇದ್ದರು, ಅವರ ನಂ 962, ಅಬ್ಬಬ್ಬಾ ಎಂಥಹ ಕೆಲಸಗಾರ ಅಂತೀರಿ, ಅಂತಹ ಸಿಬ್ಬಂಧಿಗಳಿಂದಲೇ ಇಲಾಖೆಗೆ ಒಂದಿಷ್ಟು ಹೆಸರು ಬರುತ್ತಿದೆ ಎಂದರೂ ತಪ್ಪಾಗಲಾರದು, ಅಷ್ಟು ನಿಷ್ಟೆ, ಬದ್ದತೆ ಅವರಲ್ಲಿತ್ತು,
ಏನಪ್ಪ ವಸಂತ ಏನು ಮಾಡೋದು ಸಾಹೇಬ್ರು ಈ ವಾರ ಮೀಟಿಂಗ್ ನಲ್ಲಿ ರುಬ್ತಾರೆ ಕಣಪ್ಪ, ಏನಾದ್ರೂ ಕೇಸ್ ಹಿಡಿಬೇಕು ಕಣೊ ವಸಂತ,
ಅಯ್ಯೋ ಬಿಡಿ ಸಾರ್ ಪಕ್ಕದಲ್ಲಿಯೇ ದೊಡ್ಡವರಿದ್ದಾರೆ ಬಿಡಿ ಎಂದು ಮಹಾಲಿಂಗೇಶ್ವರ ದೇವರ ದೇವಾಲಯ ತೋರಿಸುವುದೇ ?
ಆಯ್ತು ಏನಾದ್ರೂ ಮಾಡಪ್ಪ, ಈಗ ಸದ್ಯಕ್ಕೆ ಗಣೇಶ ಪ್ರಸಾದ್ ಹೋಟೇಲ್ ನಿಂದ ಒಂದು ರವಾ ದೋಸೆ ಹಾಗೂ ಕಾಶಿ ಹಲ್ವಾ ಹೇಳಿ ಬಿಡು ಎಂದೆ, ಅದರಂತೆ ಅವುಗಳೂ ಬಂದವು ಬಾಯಿ ಚಪ್ಪರಿಸಿದೆ, ಅಷ್ಟೊತ್ತಿಗೆ ಪುತ್ತೂರು ಠಾಣಾ ವ್ಯಾಪ್ತಿಯ ಪಡ್ನೂರು ಎಂಬಲ್ಲಿಂದ ಒಬ್ಬ ವ್ಯಕ್ತಿ ಬಂದು, ಸಾರ್ ನಮ್ಮ ಊರಲ್ಲಿ ಇದ್ದ ತಾಯಿ ಗುಲಾಬಿ ಮತ್ತು ಮಗಳು ಕುಸುಮಾವತಿ ಹೀಗೊಂದು ನಾಲ್ಕೈದು ದಿನದಿಂದ ಕಾಣುತ್ತಿಲ್ಲ ಸಾರ್, ಅವರು ಎಲ್ಲಿಗೋ ಹೋಗಿದ್ದಾರೋ ? ಅಥವಾ ಏನಾದರೂ ಅನಾಹುತ ಆಗಿದೆಯೋ ಏನೋ ಗೊತ್ತಿಲ್ಲ ಎಂದು ಕಂಪ್ಲೇಂಟ್ ಕೊಟ್ಟರು, ಅದರಂತೆ ನಾನೊಂದು ಮಿಸ್ಸಿಂಗ್ ಪ್ರಕರಣ ದಾಖಲಿಸಿದೆ, ನಂತರ ಏನೇನು ಕ್ರಮ ಕೈ ಗೊಳ್ಳಬೇಕೋ ಅಷ್ಟನ್ನು ಸಹ ಕೈಗೊಂಡೆ, ಒಙದೆರಡು ದಿನ ಕಳೆದಿರಬಹುದು, ವಸಂತ ನನ್ನ ಬಳಿ ಬಂದರು, ಸಾರ್ ಗೋಪಿ ಇದ್ದನಲ್ವಾ ಅವನ ಬಗ್ಗೆ ಒಂದು ಡೌಟು ಇದೆ ಸಾರ್, ಈಗ್ಗ್ಯೆ ಒಂದು ವಾರದಲ್ಲಿ ಎರಡು ಹೆಂಗಸರನ್ನು ಕರೆದುಕೊಂಡು ಬಂದು ಬಸ್ಟಾಂಡ್ ಬಳಿ ಇದ್ನಂತೆ ಸಾರ್ ಎಂದ,
ಹೇ ಗೋಪಿನಾ ! ಏನು ಹೇಳ್ತೀಯಪ್ಪ, ಅವನು ಯಾವಾಗಲೂ ಸ್ಟೇಷನ್ ಬಳಿಯೇ ಇರ್ತಾನೆ, ಸಣ್ಣ ಪುಟ್ಟ ಮಾಹಿತಿ ಕಾಲ ಡ್ತಾನೆ, ಒಂಥರಾ ಪೊಲೀಸ್ ಫ್ರೇಂಡ್ ಆಗಿದ್ದಾನೆ, ಪೊಲೀಸ್ ಇಲಾಖೆಗೆ ಸಹಾಯ ಮಾಡ್ತಾನೆ, ಅವನ ಬಗ್ಗೆ ಹೇಗೆ ಅನುಮಾನ ಪಡೋದು ವಸಂತ ಎಂದೆ,
ಇಲ್ಲ ಸಾರ್, ಅವನ ಬಗ್ಗೆ ಮಾಹಿತಿ ಪಡೆದಿರುವೆ, ಅವನು ಜೂಜಾಟಕ್ಕೆ ಸಿಲುಕಿ ಸಾಲ ಮಾಡಿಕೊಂಡಿದ್ದಾನೆ ಸಾರ್, ಮತ್ತೆ ನಮ್ಮಲ್ಲಿಯೇ ಪಡ್ನೂರಿನ ಇಬ್ಬರು ಹೆಂಗಸರೂ ಸಹ ಕಾಣೆಯಾಗಿದ್ದಾರೆ, ಆ ಕೇಸಿಗೂ ಇವನಿಗೂ ಏನಾದರೂ ಲಿಂಕ್ ಇರಬಹುದಾ ಸಾರ್, ಅವನು ನನಗೆ ಗೊತ್ತು ಸಾರ್, ಆದರೂ ನಾವು ಒಮ್ಮೆ ಕರೆಸಿ ಕೇಳೋಣ ಸಾರ್ ಎಂದ,
ಆಯ್ತಪ್ಪ ಹಾಗೆ ಮಾಡೋಣ, ಒಮ್ಮೆ ಕರೆದುಕೊಂಡು ಬಾ ಎಂದು ಆಜ್ಞಾಪಿಸಿದೆ,
ಹೌದು ಯಾರನ್ನು ಹೇಗೆ ನಂಬುವುದು, ನಂಬಿಕೆ ಮಾಡುವುದರಲ್ಲಿಯೂ ಒಂದು ಲಿಮಿಟ್ ಇರಲೇಬೇಕಲ್ವೇ ? ಯಾವ ಹುತ್ತದಲ್ಲಿ ಯಾವ ಹಾವು ಆವಾಸದಲ್ಲಿರುತ್ತೋ ಬಲ್ಲವರಾರು ?
ಅಂತೂ ಇಂತೂ ನಮ್ಮ ವಸಂತ ಹುಡುಕಾಡಿ, ತಡಕಾಡಿ ಆ ಗೋಪಿಯನ್ನು ಕರೆತಂದ, ಗೋಪಿ ಬಂದವನೇ
ಸಾರ್ ನಮಸ್ಕಾರ, ಹೇಗಿದ್ದೀರಿ ಎಂದು ನಗು ನಗುತ್ತಲೇ ಮಾತನಾಡಿದ,
ಗುಡ್ ಗೋಪಿ, ನೀವೇಗಿದ್ದೀರಿ ?
ಸಾರ್ ನಾನು ಚೆನ್ನಾಗಿದ್ದೇನೆ ಸಾರ್, ಬರಲಿಕ್ಕೆ ಹೇಳಿದರಂತೆ ತಾವು, ಏನು ಸಾರ್ ವಿಶೇಷ ? ಏನು ಮಾಹಿತಿ ತಗೆಯ ಬೇಕು ಸಾರ್ ಎಂದು ನನ್ನನ್ನೇ ಕೇಳುವುದೇ ?
ಏನಿಲ್ಲ ಗೋಪಿ, ನಿನ್ನ ನೋಡಿ ಬಹಳ ದಿನ ಆಗಿತ್ತಲ್ವಾ ಹಾಗಾಗಿ ಮಾತನಾಡಿಸೋಣ ಎಂದು ಕರೆದೆ ಅಷ್ಟೆ, ಮತ್ತೇನು ವಿಶೇಷ ?
ಏನಿಲ್ಲ ಸಾರ್ ಎಂದ, ಅವನಿಗೋಂದು ಚಹಾ ತರಿಸಲು ಕಳಿಸಿದೆ,
ನಾನು ಹಾಗೂ ವಸಂತ ಮೊದಲೇ ಮಾತನಾಡಿಕೊಂಡಂತೆ ಆ ಮಿಸ್ಸಿಂಗ ಆಗಿದ್ದ ಪಡ್ನೂರು ಗ್ರಾಮದ ಗುಲಾಬಿ ಹಾಗೂ ಕುಸುಮಾವತಿ ಬಗ್ಗೆ ಗೋಪಿಯ ಎದುರಲ್ಲಿ ಮಾತನಾಡಲು ಪ್ರಾರಂಭಿಸಿದೆವು, ಹಾಗೇ ಮಾತನಾಡುತ್ತಾ, ಮಾತನಾಡುತ್ತಾ ಗೋಪಿಯ ಮುಖದ ಚಹರೆಯಲ್ಲಿ ಏನಾದರೂ ಬದಲಾವಣೆ ಆಗುತ್ತದೆಯೇ ಎಂಬುದನ್ನು ನಾವು ಗಮನಿಸಬೇಕಾಗಿತ್ತು, ಅಂದುಕೊಂಡಂತೆ ನಮ್ಮ ಪ್ಲಾನ್ ಇಂಪ್ಲಿಮೆಂಟ್ ಮಾಡಿದೆವು, ನಾನು ಮತ್ತು ವಸಂತ ಆ ಕೇಸಿನ ಬಗ್ಗೆ ಮಾತನಾಡಲು ಶುರು ಮಾಡಿದ ಮೇಲೆ ಅವನ ಮುಖದಲ್ಲಿ ಅಂತಹ ಬದಲಾವಣೆ ಏನೂ ಕಾಣಲಿಲ್ಲ, ಆದರೂ ಆಗ ನಮ್ಮ ವಸಂತ ಸಾರ್ ಆ ಹೆಂಗಸರಿಬ್ಬರು ಮಿಸ್ಸ್ ಆಗಿದ್ದಾರಲ್ವಾ ಅವರ ಜೊತೆ ಒಬ್ಬ ಗಂಡಸೂ ಇದ್ದ ಸಾರ್, ಅವನು ಯಾರು , ಏನು ಎಂದು ಎಲ್ಲವೂ ನನಗೆ ಗೊತ್ತು ಸಾರ್ ಎಂದರು,
ಕೂಡಲೇ ಗೋಪಿಯು ಯಾರು ವಸಂತಣ್ಣ ಅವರೊಂದಿಗೆ ಇದ್ದವರು ? ಏನಾಯ್ತು ? ಹೇಗೆಲ್ಲ ಆಯ್ತು ? ಎಂಬ ಹಲವಾರು ಪ್ರಶ್ನೆ ಕೇಳಿದ,
ನಮ್ಮ ವಸಂತ ಬಹಳ ಬುದ್ದಿವಂತ, ಈ ಗೋಪಿಯನ್ನು ಕರೆತರುವ ಮುನ್ನವೇ ಈ ಗೋಪಿಯ ಇಡೀ ಜಾತಕವನ್ನೇ ಜಾಲಾಡಿದ್ದ, ಅವನಿಗಿರುವ ಸಾಲ, ಅವನ ಆದಾಯ, ಇವನು ಬ್ಯಾಂಕ್ ನಲ್ಲಿ ಅಡವು ಇಟ್ಟಿರುವ ಚಿನ್ನ, ಜೊತೆಗೆ ಅವರ ಮನೆಯವರ ಕಡೆಯಿಂದ ಇವನು ಯಾವಾಗ ಮನೆಯಲ್ಲಿದ್ದ, ಮನೆಯಿಂದ ಎಷ್ಟು ದಿನ ಹೊರಗೆ ಇದ್ದ ಎಂಬ ಹಲವಾರು ಉಪಯುಕ್ತ ಮಾಹಿತಿ ಪಡೆದುಕೊಂಡು ಬಂದಿದ್ದ, ಕೇವಲ ಹೆಸರಿಗಷ್ಟೆ ತನಿಖೆ ಮಾಡಬೇಕಿತ್ತು ಅಷ್ಟೆ, ಗೋಪಿಗೆ ಚಹಾ ಬಂತು, ಕುಡಿದ,
ನಮ್ಮ ವಸಂತ ನೋಡು ಗೋಪಿ, ನಾಟಕ ದಾಲ ಬೋಡ್ಚಿ, ಎಂಕು ಪೂರ ಗೊತ್ತುಂಡಿಯೇ ? ಸತ್ಯ ಪಣು ಮರಾಯ,
ಇಷ್ಟರ ತನಕ ಕಸಿವಿಸಿ ಕಾಣದ ಗೋಪಿಯ ಮುಖ ಕಪ್ಪಿಟ್ಟಿತು, ನಾನು ಕೂಡಲೇ ತಗೋ ವಸಂತ ಇವನನ್ನ ವರ್ಕ್ ರೂಂ ಗೆ ಎಂದು ತಗೆದುಕೊಂಡು ಹೋಗಿ ಸ್ವಲ್ಪ ವರ್ಕ್ ಮಾಡಿದ್ದಷ್ಟೆ, ಗೋಪಿ ಎಲ್ಲವನ್ನೂ ಉದುರಿಸಿದ,
ಗೋಪಿ ಹೇಳಿದ್ದೇನೆಂದರೆ, ನೋಡಿ ಸಾರ್ ನನಗೆ ಸಾಲ ಇತ್ತು, ಆ ಎರಡೂ ಜನ ಹೆಣ್ಮಕ್ಕಳು ಅನಥರಾಗಿದ್ದರು, ತಾಯಿ ಗುಲಾಬಿ ತನ್ನ ಮಗಳಿಗೆ ಒಂದು ವರ ಹುಡುಕಿ ಮದುವೆ ಮಾಡಿಸೆಂದು ಹೇಳಿದ್ದಳು, ಅದನ್ನೇ ನಾನು ಉಪಯೋಗಿಸಿಕೊಂಡು, ಹುಬ್ಬಳ್ಳಿಯಲ್ಲಿ ನಿಮ್ಮ ಜಾತಿಯವನೇ ಒಬ್ಬ ಹುಡುಗ ಇದ್ದಾನೆ, ಅವನೋಂದಿಗೆ ಮಾತನಾಡಿರುವೆ, ನಿಮ್ಮ ಹಣ, ಚಿನ್ನ ಎಲ್ಲಾ ತಗೆದುಕೊಂಡು ಬನ್ನಿ ಎಂದು ತಿಳಿಸಿ ಅವರಿಬ್ಬರನ್ನೂ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ, ಅಲ್ಲಿಯ ಅಯೋಧ್ಯಾ ಹೋಟೇಲ್ ನಲ್ಲಿ, ತಪ್ಪು ವಿಳಾಸ ನೀಡಿ ರೂಂ ಮಾಡಿ, ನಂತರ ಅವರಿಬ್ಬರನ್ನು ಹಾಸಿಗೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿ, ಅವರ ಬಂಗಾರ ಮತ್ತು ಹಣ ತಗೆದುಕೊಂಡು ಬಂದೆನು, ಇಲ್ಲಿ ಹಣ ಖರ್ಚು ಮಾಡಿದೆ, ಬಂಗಾರವನ್ನು ಮೂಕಾಂಬಿಕಾ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದಢನೆ, ಎಂದೇಳಿದ, ನಮಗೋ ಖುಷಿಯೋ ಖುಷಿ, ಅಬ್ಬಾ ಒಂದು ಡಬಲ್ ಮರ್ಡರ್ ಕೇಸು ಡಿಟೆಕ್ಟ್ ಆಯ್ತಲ್ವಾ ಅನ್ನೋ ಸಂತೋಷ, ಇನ್ನು ASP ದಯಾನಂದ ರವರಿಗೆ ತಿಳಿಸುವ ಮುನ್ನ ಹುಬ್ಬಳ್ಳಿಯಲ್ಲಿ ಕೊಲೆ ಆಗಿದೆಯೋ ಇಲ್ಲವೋ ಎಂದು ತಿಳಿಯಬೇಕಲ್ವಾ ? ಆಗ ಈಗಿನಷ್ಟು ಸಂಪರ್ಕ ಕ್ರಾಂತಿ ಆಗಿರದೆ ನಾವು ಟ್ರಂಕಾಲ್ ಬುಕ್ ಮಾಡಿ ಮಾತನಾಡಬೇಕಿತ್ತು, ಅದರಂತೆ ಟ್ರಂಕಾಲ್ ಬುಕ್ ಮಾಡಿ ಹುಬ್ಬಳ್ಳಿಯ ಅಧಿಕಾರಿ ನಮ್ಮ ಬ್ಯಾಚ್ ಮೇಟ್ ಪಠಾಣ್ ಗೆ ಮಾತನಾಡಿದೆ, ಕೊಲೆಯಾಗಿರುವುದು ಕನ್ಫರ್ಮ್ ಆಯ್ತು, ಅಲ್ಲಿಯವರಿಗೆ ಮಾಹಿತಿ ನೀಡಿದೆ, ಇನ್ನು ASP ಯವರಿಗೆ ವಿಚಾರ ತಿಳಿಸಿದೆ, ಖುಷಿ ಆದರು, ಅವರೂ ಸಹ ಠಾಣೆಗೆ ಬಂದು ಪ್ರಶ್ನೆ ಮಾಡಿದರು, ನಮಗೆ ಅಭಿನಂದನೆ ತಿಳಿಸಿದರು, ನಂತರ ಹುಬ್ಬಳ್ಳಿ ಪೋಲೀಸರು ಬಂದಾಗ ಅವರಿಗೆ ನಮ್ಮ ಬಳಿ ಇದ್ದ ಆರೋಪಿ ಗೋಪಿಯನ್ನೂ ಹಾಗೂ ಅವನಿಂದ ರಿಕವರಿ ಮಾಡಿದ ಚಿನ್ನವನ್ನೂ ಹುಬ್ಬಳ್ಳಿ ಪೊಲೀಸರ ವಶಕ್ಕೆ ಕೊಟ್ಟು ಕಳಿಸಿದೆವು,
ಇಲ್ಲಿ ನಮ್ಮ ವಸಂತನ ಚಾಕಚಕ್ಯತೆಯಿಂದ ಒಂದು ಡಬಲ್ ಮರ್ಡರ್ ಪ್ರಕರಣ ಬೆಳಕಿಗೆ ಬಂತು, ಇಂತಹ ಸಿಬ್ಬಂಧಿಗಳಿಂದಲೇ ಇಲಾಖೆಯ ಗೌರವ ಉಳಿದಿರುವುದು, ಈಗ ವಸಂತ ರವರು ಮಂಗಳೂರು ಟ್ರಾಫೀಕ್ ನಲ್ಲಿ ASI ಆಗಿದ್ದಾರೆ,
✍ *ರವೀಶ್ ಚಿನಾ ಹಳ್ಳಿ*