Wednesday, April 10, 2024

ನೆಮ್ಮದಿ

ಕಾಗೆಯೊಂದು ತನ್ನ ಬಣ್ಣದ ಬಗ್ಗೆ ಕೊರಗುತ್ತಿತ್ತು. ತನಗೆ ಭಗವಂತ ಈ ಕರಿಯ ಬಣ್ಣವನ್ನು ಕೊಟ್ಟು ಯಾಕೆ ಸೃಷ್ಟಿಸಿದನೋ? ತನ್ನದು ಮಾನ್ಯತೆಯೇ ಇಲ್ಲದ ಬಣ್ಣ. ಈ ಕಪ್ಪು ಬಣ್ಣವನ್ನು ಯಾರೂ ಬಯಸುವುದಿಲ್ಲ ಮತ್ತು ಸಹಿಸುವುದಿಲ್ಲ. ಸಂತಾಪ ಸೂಚಕ ಬಣ್ಣ ತನ್ನದು……. ಹೀಗೆ ಅದರ ಹಲುಬುವಿಕೆ ಬಹಳಷ್ಟು. ಒಂದು ದಿನ ಆ ದುಃಖಿತ ಕಾಗೆಯು ಕೊಕ್ಕರೆಯೊಂದನ್ನು ನೋಡಿ ಬಿಟ್ಟಿತು. ಅದರ ಬಣ್ಣವನ್ನು ನೋಡಿ ಹೊಗಳಲಾರಂಭಿಸಿತು, ನೀನೇ ಪುಣ್ಯವಂತ, ಒಳ್ಳೆಯ ಬಣ್ಣ ಹೊಂದಿದ್ದಿಯಾ, ಶ್ವೇತ ವರ್ಣವೆಂದರೆ ಎಲ್ಲರಿಗೂ ಇಷ್ಟ. ನನಗಾದರೋ ಎಂತಹ ಕೀಳು ಬಣ್ಣವನ್ನು ಭಗವಂತ ಒದಗಿಸಿದನಪ್ಪಾ, ಛೇ ಎನ್ನುತ್ತಿರುವಂತೆ ಕೊಕ್ಕರೆ ಹೇಳಿತು, ಹೌದು. ನಾನೂ ನನ್ನ ಬಣ್ಣದ ಬಗ್ಗೆ ಬೀಗುತ್ತಿದ್ದೆ. ಬಿಳಿ ಬಣ್ಣ ಎಂದರೆ ಎಲ್ಲರೂ ಮೆಚ್ಚುತ್ತಾರೆ. ಬಿಳಿ ಬಟ್ಟೆ, ಬಿಳಿ ಕಟ್ಟಡ, ಬಿಳಿ ಹಾಲು, ಬಿಳಿ ಹೂ, ಬಿಳಿ ಕಾಗದ ಹೀಗೆ ಬಿಳಿಯ ಬಣ್ಣವೇ ಎಲ್ಲರಿಗೂ ಪ್ರಿಯ. ಆಹಾ ನಾನೆಷ್ಟು ಪುಣ್ಯವಂತ ಎಂದು ಅಭಿಮಾನಿಸುತ್ತಿದ್ದೆ. ಆದರೆ ಒಂದು ದಿನ ಗಿಳಿಯೊಂದನ್ನು ನಾನು ನೋಡಿದೆ, ಛೇ ಅದಕ್ಕೆ ಒಂದೇ ಬಣ್ಣ ಅಲ್ಲ. ಅದನ್ನು ನೋಡುವಾಗಲೇ ನನಗನಿಸಿತು, ಯಾಕಪ್ಪಾ ದೇವರು ನನಗೆ ಒಂದೇ ಬಣ್ಣ ಕೊಟ್ಟ ಎಂದು!
ಪಕ್ಕದಲ್ಲೇ ಇದ್ದ ಗಿಳಿಯು ಹೇಳಿತು, ನನಗೆ ಒಂದಕ್ಕಿಂತ ಹೆಚ್ಚು ಬಣ್ಣವಿದೆ ನಿಜ. ಆದರೆ ನನಗೆ ಸ್ವತಂತ್ರವಾಗಿ ಹಾರಾಡುವುದೇ ಕಷ್ಟವಾಗಿದೆ. ಮರದೆಡೆಯಲ್ಲಿ ಕುಳಿತರೆ ನಾನೂ ಯಾರಿಗೂ ಕಾಣಿಸೆನು. ಮರದಲ್ಲಿದ್ದಾಗ ಮಾತ್ರ ನನಗೆ ಉಳಿಗಾಲ. ಬೇರೆಲ್ಲೂ ನಾನು ಇರುವಂತಿಲ್ಲ. ನನ್ನನ್ನು ಪೋಕರಿ ಹುಡುಗರು ಕಲ್ಲಿನಿಂದ ಹೊಡೆಯುವರು. ಹಿಡಿದು ಪಂಜರದಲ್ಲಿಡಲು ಕೆಲವರು ಯೋಚಿಸುವರು. ಅವರ ಭಾಷೆಯಲ್ಲಿ ಮಾತನಾಡಲು ಒತ್ತಡ ಹೇರುವರು. ಛೇ ನನ್ನದು ಸ್ವಾತಂತ್ರ್ಯವಿಲ್ಲದ ಬದುಕು. ನವಿಲನ್ನು ನೋಡಿದರೆ ಎಲ್ಲರೂ ಸಂತಸದಿಂದ ಅದನ್ನೇ ನೋಡುತ್ತಾರೆ, ಯಾರೂ ಕಲ್ಲೆಸೆಯುವುದಿಲ್ಲ. ಅದರ ಬಹು ವರ್ಣ ಅದರ ಸಂತಸಕ್ಕೆ ಕಾರಣವಾಗಿದೆ. ನಮಗೂ ಬಹು ವರ್ಣವಿದ್ದರೆ ಎಷ್ಟೊಂದು ಸಂತಸದ ಬದುಕು ನಮ್ಮದಾಗಬಹುದಲ್ಲಾ! ಎಂದು ಬಾಯಲ್ಲಿ ನೀರೂರಿಸಿತು.
ಕಾಗೆ, ಕೊಕ್ಕರೆ ಮತ್ತು ಗಿಳಿ ಒಟ್ಟಾಗಿ ನವಿಲೊಂದನ್ನು ಹುಡುಕುತ್ತಾ ಹೋದುವು. ಒಂದು ಮೃಗಾಲಯದಲ್ಲಿ ನವಿಲೊಂದು ಕಾಣಿಸಿತು. ಎಲ್ಲವೂ ಒಟ್ಟಾಗಿ, ಆಹಾ ನಿನಗೆಷ್ಟು ಸೊಗಸಿನ ಬಣ್ಣಗಳು, ಸೊಗ-ಸಂತಸಗಳ ಆಗರ ನೀನು, ನಮ್ಮ ಕಷ್ಟ ನೋಡು ಎಂದುವು. ಆಗ ನವಿಲೆಂದಿತು, ನೋಡಿ ಗೆಳೆಯರಿರಾ, ನನ್ನ ಬಹು ವರ್ಣ ನನಗೇ ಮುಳುವು, ಈ ಬಣ್ಣವನ್ನು ನೋಡಲೆಂದು ನಾನು ನೃತ್ಯ ಮಾಡಿದರೆ ಸಾವಿರ ಸಾವಿರ ಜನರು ಸುತ್ತು ಸೇರುತ್ತಾರೆ. ಆದರೆ ಈ ಬಣ್ಣ ಮತ್ತು ನರ್ತನ ನನಗೆ ಸಂತಸ ಕೊಟ್ಟಿಲ್ಲ, ಸ್ವಾತಂತ್ರ್ಯ ಕೊಟ್ಟಿಲ್ಲ. ನನ್ನನ್ನು ಈ ಮೃಗಾಲಯದಲ್ಲಿ ಬಂಧಿಸಿಟ್ಟಿದ್ದಾರೆ, ನಾನು ನಿತ್ಯ ಬಂಧಿ. ನಿಜವಾದ ಸ್ವತಂತ್ರ ಪಕ್ಷಿ ಕಾಗೆ. ಅದನ್ನು ಯಾರೂ ಬಂಧಿಸುವುದಿಲ್ಲ, ಅದಕ್ಕೆ ಕಲ್ಲು ಹೊಡೆಯುವುದಿಲ್ಲ, ಅದು ಸುಖ ಶಾಂತಿ ನೆಮ್ಮದಿಯಿಂದ ಬದುಕುತ್ತದೆ ಎಂದಿತು. ಕಾಗೆ, ಕೊಕ್ಕರೆ ಮತ್ತು ಗಿಳಿಗಳಿಗರ್ಥವಾಯಿತು, ವರ್ಣ ಸಂಪತ್ತು ಆಪತ್ಕಾರಿ ಎಂದು ತೀರ್ಮಾನಿಸಿ ತಮ್ಮ ಬಣ್ಣದ ಬಗ್ಗೆ ಕಾಣುತ್ತಿದ್ದ ತುಚ್ಛತೆಯನ್ನು ನೀಗಿಕೊಂಡುವು.
ಈ ಘಟನೆ ನಮ್ಮ ನೈಜ ಮನಸ್ಥಿತಿಯನ್ನು ತೆರೆದಿಡುತ್ತದೆ. ನಮ್ಮಲ್ಲಿಲ್ಲದೇ ಇರುವುದರ ಬಗ್ಗೆ ಹೆಚ್ಚು ಮೋಹಿತರಾಗುತ್ತೇವೆ. ಅದನ್ನು ಪಡೆಯಲೇ ಬೇಕೆಂಬ ಆಸೆಯೊಂದಿಗೆ ನಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೇವೆ. ಒಬ್ಬ ಭಿಕ್ಷುಕ ಮೋರಿಯೊಳಗೆ ಸುಖ ನಿದ್ದೆ ಪಡೆಯುತ್ತಾನೆ. ಒಬ್ಬ ಕೋಟ್ಯಾಧಿಪತಿ ಹವಾನಿಯಂತ್ರಿತ ಕೊಣೆಯೊಳಗೆ, ಸ್ವರ್ಣ ಮಂಚದಲ್ಲಿ ಮೃದು ಹಾಸಿಗೆಯ ಮೇಲೆ ಮಲಗಿದರೂ ನಿದ್ದೆಯ ಸುಖವನ್ನು ಅನುಭವಿಸಲು ಪೇಚಾಡುತ್ತಾನೆ, ಅವನಿಗೆ ಸುಖ ನಿದ್ದೆ ಬಾರದು. ಮತ್ತೇನನ್ನೋ ಹೊಂದುವಾಸೆಯಿಂದ ಅವನು ತನ್ನ ನೆಮ್ಮದಿಯನ್ನು ಕಳೆದುಕೊಂಡಿರುತ್ತಾನೆ.
ತನ್ನಲ್ಲಿರುವುದಷ್ಟರ ಬಗ್ಗೆ ತೃಪ್ತನಾಗಿರುವವನ ಮನಸ್ಸು ಕದಡಿರುವುದಿಲ್ಲ, ನಿತ್ಯ ಶಾಂತ ಸಾಗರವಾಗಿರುತ್ತಾನೆ. ಅವನಿಗೆ ರೋಗ ರುಜಿನವಿಲ್ಲ. ಆತ ನಿತ್ಯ ಸ್ವತಂತ್ರನು. ಚಿನ್ನದ ಮೊಟ್ಟೆಗಳಿಗಾಗಿ ಕೋಳಿಯ ಹೊಟ್ಟೆ ಕೊಯ್ದ ಸಂಕಜ್ಜಿಗೇನಾಯಿತೋ ಅದು ನಮಗೂ ಒದಗದಿರಲಿ. ಇತರರಲ್ಲಿರುವುದನ್ನು ನಾವು ಗಳಿಸ ಬೇಕೆಂಬ ಆಸೆ, ಇತರನ್ನು ನಮ್ಮೊಂದಿಗೆ ಸಮೀಕರಿಸಿ ನೋಡುವುದು ಇವೆಲ್ಲವೂ ನಮ್ಮ ಬದುಕಿಗೆ ಕೊಡಲಿಯೇಟನ್ನು ನೀಡುತ್ತವೆ. ನಾವು ಹೊಂದಿರುವುದರಲ್ಲೇ ತೃಪ್ತರಾಗಿರುವುದರಿಂದ ನಮ್ಮ ಉತ್ಥಾನವಾಗುತ್ತದೆ, ಅಲ್ಲೇ ಸಂತಸವಿದೆ ಎಂಬ ಸತ್ಯವನ್ನು ಮನಗಾಣೋಣ.

 

ಲೇ: ರಮೇಶ ಎಂ. ಬಾಯಾರು ಎಂ.ಎ; ಬಿ.ಎಡ್;
ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕರು

More from the blog

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...

ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಪದ್ಮನಾಭ ಸೇವಂತ ಅವರದು, ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಶಂಕೆ: ಪ್ರಕಾಶ್ ಶೆಟ್ಟಿ ತನಿಖೆಗೆ ಒತ್ತಾಯ

ಬಂಟ್ವಾಳ: ದ.ಕ.ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಪದ್ಮನಾಭ‌ ಸೇವಂತ ಎಂಬವರ ಸಾವಿನ ಸುತ್ತ ಅನುಮಾನಗಳು ವ್ಯಕ್ಯವಾಗಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕಂಡು ಬಂದರೂ ಇದನ್ನು ವಿಮರ್ಶೆ ಮಾಡಿದರೆ ಇದೊಂದು ಕೊಲೆ...

ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸಾವು ಸ್ಕೂಟರ್ ನಲ್ಲಿದ್ದ ಯುವತಿ ಗಂಭೀರ

ಬೆಳ್ತಂಗಡಿ : ದ್ವಿಚಕ್ರ ವಾಹನ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ನಗರದ ಸಂತೆಕಟ್ಟೆ ಬಸ್ ನಿಲ್ದಾಣದ ಮುಂಭಾಗದಲ್ಲಿ...

ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ: ಕಾರಿನಲ್ಲಿದ್ದವರು ಗಂಭೀರ

ವಿಟ್ಲ: ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರಿಯಲ್ಲಿ ಗುರುವಾರ ರಾತ್ರಿ ಮರ ಸಾಗಾಟ ಲಾರಿಗೆ ಕಾರು ಡಿಕ್ಕಿಯಾಗಿದೆ. ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾದ ರಬ್ಬಸಕ್ಕೆ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು...