#ಸಣ್ಣ_ಕಥೆ

“ಪೇಸಬುಕ್ಕು ಇಲ್ಲಾ ವಾಟ್ಸಾಪ್ಪು, ಯಾವಾಗ ನೋಡಿದರೂ ಬರಿ ಆನಲೈನ್ ಆನಲೈನ್”

ದಿನಕ್ಕೆ ಹತ್ತು ಸಲ ಇದೇ ಮಾತು ಕೇಳಿ ಕೇಳಿ ಅವನು ರೋಸಿ ಹೋಗಿದ್ದ. ಅದೇ ಕೋಪಕ್ಕೆ ಆರು ತಿಂಗಳಲ್ಲಿ ಹದಿನೈದು ಹೊಸ ಹೊಸ ಮೊಬೈಲಗಳು ತಗೊಂಡ ಕೂಡಲೇ ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದವು. ಪ್ರತಿ ಮೊಬೈಲ್ ಒಡೆದ ಮೇಲೂ “ಛೇ!! ಒಡೆಯಬಾರದಿತ್ತು” ಎಂದು ಆತನಿಗೆ ಆ ನಿಮಿಷಕ್ಕೆ ಅನಿಸಿದರೂ “ಒಡೆದಿದ್ದೇ ಒಳ್ಳೆಯದಾಯಿತು, ಇನ್ನೂ ಮೇಲಾದರೂ ಅವಳು ಹಂಗ ಅನ್ನೋದು ತಪ್ಪುತ್ತೆ” ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದ.

ಮೊಬೈಲ್ ಇಲ್ಲದೇ ಇದ್ದರೂ ಕೂಡ ಎಂದೋ ಗತಕಾಲಕ್ಕೆ ಸೇರಿರುವ ಕಾಯಿನ್ ಫೋನ್ ಹುಡುಕಾಡಕೊಂಡು ಹೋಗಿ ದಿನ ಅವಳಿಗೆ ಒಂದು ಸಲ ಆದರೂ ಕರೆ ಮಾಡುತ್ತಿದ್ದ. ಅವನಿಗೆ ಅವನದೇ ಪೋನ್ ನಂಬರ್ ನೆನಪಿಲ್ಲದಿದ್ದರೂ ಅವಳ ನಂಬರ್ ಮಾತ್ರ ಹಾಗೆ ಬೆರಳಚ್ಚಲ್ಲೇ ಕುಣಿಯುತ್ತಿತ್ತು

ಇನ್ನೂ ಮೊಬೈಲ್ ಸಹವಾಸವೇ ಬೇಡ ಎಂದು ಆ ಮಧ್ಯೆದಲ್ಲಿ ಎಷ್ಟೋ ದಿನಗಳವರೆಗೂ ಮೊಬೈಲ್ ಇಲ್ಲದೇ ಇರುತ್ತಿದ್ದ. ಮೊದಮೊದಲು ಮೊಬೈಲ್ ಬಿಟ್ಟು ಇರುವುದು ಕಷ್ಟ ಎನಿಸಿದರೂ ಕಾಲ ಕ್ರಮೇಣ ಅದು ಅಭ್ಯಾಸವಾಗಿ ಯಾವತ್ತೋ ಅವನು ಆ ಹಂತವನ್ನು ದಾಟಿ ಏನೂ ಇಲ್ಲದೇ ಇದ್ದರೂ ಸಹಜವಾಗಿ ಇರುವುದನ್ನು ಕಲಿತಿದ್ದ. ಆದರೆ ಮೊಬೈಲ್ ತುಂಬಾ ದಿನದವರೆಗೆ ಸ್ವಿಚ್ಆಫ್ ಬಂದರೆ ದೂರದ ಊರಲ್ಲಿ ಇರುವ ತಂದೆ ತಾಯಿ ಬಂಧುಗಳು ಗಾಬರಿ ಆಗುವರೆಂದೂ, ಹತ್ತಿರ ಇರುವ ಸ್ನೇಹಿತರು ಹುಡುಕಾಡಿಕೊಂಡು ಬರುವರೆಂದು ಕೆಲವೇ ದಿನಗಳಲ್ಲಿ ಮತ್ತೊಂದು ಮೊಬೈಲ್ ಖರೀದಿಸುತ್ತಿದ್ದ.

ಅಷ್ಟಕ್ಕೂ ಆತ ಅಷ್ಟು ಆನಲೈನ್ ಅಲ್ಲಿ ಇರತಾನಾ??? ಇದೇ ವಿಷಯ ಅವನು ಕೂಡ ತುಂಬಾ ಸಲ ಯೋಚಿಸಿದ್ದ. ಹೌದು ಆತ ಆನಲೈನಗೆ ಬರತಿದ್ದೆ ಕಮ್ಮಿ. ಸಾಮಾನ್ಯವಾಗಿ ದಿನಕ್ಕೆ ಐದಾರು ಸಲ ಬಂದು ಹೋಗುತ್ತಿದ್ದ. ಹೆಚ್ಚು ಹೊತ್ತು ಅವರೀವರ ಜೊತೆಗೆ ಚಾಟ್ ಮಾಡಿಕೊಂಡು ಇರುವ ಹುಡುಗ ಕೂಡ ಅವನಾಗಿರಲಿಲ್ಲ. ಆದರೆ ಅವನು ಪ್ರತಿ ಸಲ ಆನಲೈನಗೆ ಬಂದು ಹೋಗುವುದನ್ನು ಅವಳು ಯಾವಾಗಲೂ ಗಮನಿಸುತ್ತಾಳೆ. ಇವನು ಇಲ್ಲವೆಂದು ವಾದಿಸುವಂತೆಯೇ ಇಲ್ಲ, ಇವನು ಎಷ್ಟು ಸಲ ಆನಲೈನಗೆ ಬಂದಿರುವನೋ ಅಷ್ಟು ಸಲದು ಅವಳು ಲಾಸ್ಟ್ ಸೀನನ ಸ್ಕ್ರಿನಶಾಟ್ ತೆಗೆದು ಇಟ್ಟುಕೊಂಡು ಸಾಕ್ಷಿ ಸಮೇತ ಸಾಬೀತು ಪಡಿಸುತ್ತಿದ್ದಳು. ಇದೇ ಸಮಯದಲ್ಲಿ “ನಾನು ಯಾವಾಗಲೋ ಆನಲೈನಗೆ ಬಂದು ಹೋಗತೀನಿ, ಆದರೂ ನನಗೆ ಹೀಗೆಲ್ಲಾ ಎನ್ನುವ ಹುಡುಗಿ ನನಗಿಂತ ಜಾಸ್ತಿ ಆನಲೈನಲ್ಲಿ ಇರತಾಳೆ ಅಲ್ವಾ” ಅಂತ ಅವನಿಗೆ ತುಂಬಾ ಸಲ ಅನಿಸಿದರೂ ಅವಳು ಅನ್ನುವಂತೆ ಅವನು ಯಾವತ್ತೂ ಅವಳಿಗೆ ಹಾಗೆ ಅಂದಿರಲಿಲ್ಲ. ಈ ಬಗ್ಗೆ ಒಮ್ಮೆ ಕೇಳಿದನಾದರೂ “ನಾನು ಆನಲೈನಗೆ ಬರೋದೇ ನಿಮ್ಮನ್ನ ಚೆಕ್ ಮಾಡೋಕೆ” ಅಂದಿದ್ದಳು ಹುಡುಗಿ.

“ನೋಡಮ್ಮಾ, ನೀನು ಅಂದುಕೊಂಡ ಹಾಗೆ ನಾನು ಜಾಸ್ತಿ ಆನಲೈನಲ್ಲಿ ಇರಲ್ಲ, ಯಾವ ಹುಡುಗಿ ಜೊತೆಗೂ ಚಾಟ್ ಮಾಡಲ್ಲ. ಆನಲೈನಲ್ಲಿ ಕೆಲವೊಮ್ಮೆ ಬೇಕಾದ ಮಾಹಿತಿ ಹುಡುಕತಾ ಇರತೀನಿ, ಇನ್ನೂ ಕೆಲವೊಮ್ಮೆ ಆನಲೈನ್ ಮ್ಯಾಗಜೀನ್ ಆಂಡ್ ಪೇಪರ್ಸ್ ಓದತಾ ಇರತೀನಿ. ನನಗೆ ಬರೆಯುವ ಹುಚ್ಚಿದೆ, ವಾಟ್ಸಾಪ್ ಅಲ್ಲಿ ಅದು ಇದು ಟೈಪ್ ಮಾಡತಾ ಇರತೀನಿ. ಕೆಲವು ಒಳ್ಳೆಯ ಗ್ರೂಪಗಳಲ್ಲಿ ಬರುವ ಉಪಯುಕ್ತ ಸಂದೇಶ ಓದತಾ ಇರತೀನಿ ಅಷ್ಟೇ” ಎಂದು ಎಷ್ಟೆಲ್ಲಾ ತಿಳಿಸಿ ಹೇಳಿ ಏನೇ ಸಮಜಾಯಿಸಿ ಕೊಟ್ಟರೂ ಹುಡುಗಿ ಕೇಳದೇ ಕ್ಯಾರೇ ಎನ್ನುತ್ತಿರಲಿಲ್ಲ. ಅವನಿಗೆ ಪೂರ್ತಿ ಮಾತನಾಡಲು ಸಹ ಅವಕಾಶ ಕೊಡದೆ ತಾನು ಹೇಳಿದ್ದೇ ಸತ್ಯ ಎಂದು ವಾದಿಸಿ ಹಿಗ್ಗಾಮುಗ್ಗಾ ಮಾತಲ್ಲೇ ಜಾಡಿಸುತ್ತಿದ್ದಳು.

ಇತ್ತೀಚೆಗೆ ಆತ ಇದರಿಂದ ತುಂಬಾ ನೊಂದು ಹೋಗಿದ್ದ. ಒಮ್ಮೆ ಕುಳಿತು ಯೋಚಿಸುವಾಗ “ಈ ಹುಡುಗಿ ಮುಂಚೆ ಹೀಗೆ ಇದ್ದಾಳಾ?” ಸಾಕಷ್ಟು ಎಲ್ಲಾ ರೀತಿಯಿಂದ ಯೋಚಿಸಿದ್ದ. “ಹೌದು, ಹೀಗಿರಲಿಲ್ಲ ಅಲ್ವಾ??? ಮುಂಚೆಯೂ ಸಹ ಅನುಮಾನ ಪಟ್ಟು ಯಾವಾಗಾದರೂ ಒಮ್ಮೆ ಈ ಬಗ್ಗೆ ತಿಳಿಸಿ ಹೇಳುತ್ತಿದ್ದಳು ಜಾಸ್ತಿ ಆನಲೈನಗೆ ಬರಬೇಡಿ ಅಂತ. ಈ ನಡುವೆ ಮಾತು ಎತ್ತಿದರೇ “ಬರಿ ಆನಲೈನ್, ಯಾರ ಜೊತೆಗೆ ಪ್ಲರ್ಟ್ ಮಾಡತಾ ಇದೀರಾ” ಎಂದು ವಿಪರೀತ ಬೈಗುಳ ಸುರಿಮಳೆ, ಯಾಕೆ ಹೀಗೆ???” ಒಂದೇ ಸಮನೆ ಚಿಂತಿಸತೊಡಗಿದ.

ಇದರಿಂದ ಸಾಕಷ್ಟು ಮಾನಸಿಕ ಯಾತನೆಯಾಗಿ ಅವನ ದಿನ ನಿತ್ಯದ ಆಗು ಹೋಗುಗಳ ಮೇಲೆ ಕಳವಳಕಾರಿಯಾಗಿ ಪರಿಣಾಮ ಬೀರಿತು. ದೈಹಿಕವಾಗಿಯೂ ಸಹ ಕುಗ್ಗಿ ಹೋಗಿ ಜೀವನದಲ್ಲಿ ಹೆಚ್ಚಿನ ಏರುಪೇರುಗಳು ಸಂಭವಿಸಿದವು. ನೋಡಿದವರೆಲ್ಲರೂ “ಇವನು ಯಾಕೆ ಹೀಗಾದ, ಮುಂಚೆ ಎಷ್ಟು ಚೆನ್ನಾಗಿ ಇದ್ದ” ಎಂದೆಲ್ಲಾ ಮಾತಾಡತೊಡಗಿದರು. ಹೆಚ್ಚಿನ ನಿಯಮ ನಿಬಂಧನೆಗಳು ಮನುಷ್ಯನನ್ನು ಬೇಕಾಬಿಟ್ಟಿಯಾಗಿ ಮಾಡಿ ಅಡ್ಡ ದಾರಿಗೆ ಹಿಡಿಸುತ್ತವೆ, ಅನುಮಾನಗಳು ಜೀವನವನ್ನು ಇನ್ನಿಲ್ಲದಂತೆ ನರಕದ ಕೂಪಕ್ಕೆ ತಳ್ಳುತ್ತಾವೆ.

ಆ ಹುಡುಗಿ ಇಷ್ಟೆಲ್ಲಾ ಅನುಮಾನಪಟ್ಟು ದಿನ ಜಗಳ ಮಾಡಿ ಏನೇ ಅಂದರೂ ಅನಿಸಿಕೊಂಡು ಸುಮ್ಮನೆ ಇರುತ್ತಿದ್ದ. ಆತ ತಿರುಗಿಯೂ ಕೂಡ ಒಂದೇ ಒಂದು ಮಾತು ಸಹ ಅವಳಿಗೆ ಏನು ಅನ್ನುತ್ತಿರಲಿಲ್ಲ. ಆಗಾಗ ಆಕ್ಷೇಪಗಳನ್ನು ವ್ಯಕ್ತಪಡಿಸತಾನಾದರೂ ಅವಳು ಸಂಸ್ಕೃತ ಪದ ಪ್ರಯೋಗಿಸಿದಾಗಲೂ “ಯಾಕ ಪುಟ್ಟ ಹೀಗೆ ಅಂತ ಇದೀಯಾ, ಮತ್ತೇನಾದರೂ ನನ್ನಿಂದ ತಪ್ಪು ಆಯಿತಾ” ಎಂದು ವಿನಯದಿಂದಲೇ ವರ್ತಿಸುತ್ತಿದ್ದ. ಹಾಗೆಂದು ಈತನೇನು ತೀರಾ ಅಮಾಯಕನಲ್ಲ, ಜಾಸ್ತಿ ಒಳ್ಳೆಯವನು ಅಲ್ಲ. ಜೀವನದಲ್ಲಿ ಆಡಬಾರದ ಆಟಗಳನ್ನು ತಕ್ಕ ಮಟ್ಟಿಗೆ ಆಡಿ ರುದ್ರ ತಾಂಡವ ನೃತ್ಯ ಸಹ ಮಾಡಿರುವವನು. ಆದರೆ ಕಾಲ ಅನ್ನೋದು ಒಂದು ಇದೀಯಾ ಅಲ್ವಾ, ಅದು ಕೆಲವು ವಿಷಯಗಳಿಗೆ ಎಂತವರನ್ನು ಮೆತ್ತಗೆ ಮಾಡಿ ಬಿಡುತ್ತೆ. ಅದೇ ಸಮಯಕ್ಕೆ ಒಂದು ಸೂಕ್ಷ್ಮ ಸ್ವಭಾವದ ಅತಿ ಸಂಭಾವಿತ ಹುಡುಗಿ ನೋಡ ನೋಡುತ್ತಿದ್ದಂತೆ ಜೀವನದ ಎಲ್ಲಾ ಕಲೆಗಳನ್ನು ಕರಗತ ಮಾಡಿಕೊಂಡು ಎಲ್ಲಾ ಎಲ್ಲೆಗಳನ್ನು ಮೀರಿ ನಿಲ್ಲುವಳು. ಕಾಲಕ್ಕೆ ಮೆತ್ತಗೆ ಮಾಡೋದು ಮಾತ್ರ ಅಲ್ಲ, ಅನುಭವ ಹೆಚ್ಚಿದಂತೆ ಕಾಠಿಣ್ಯ, ಗಟ್ಟಿತನವನ್ನು ಸಹ ಹೆಚ್ಚಿಸುತ್ತದೆ.

ಸಹಿಸಿಕೊಳ್ಳುವ ಮಟ್ಟ ಮೀರಿದ ನಂತರವೂ ಆತ ಸಹಿಸಿಕೊಳ್ಳುತ್ತಿದ್ದಾನೆ ಅಂದರೆ ಅದಕ್ಕೆ ಇರುವ ಕಾರಣ ಅವಳೆಡೆಗೆ ಇರುವ ತೀವ್ರ ಒಲವು ಮತ್ತು ಅವಳಿಗೆ ನನ್ನಿಂದ ಒಂಚೂರು ಬೇಸರ ಆಗಬಾರದು ಎನ್ನುವ ನಿಲುವು. ಆತನಿಗೆ ವೈಯಕ್ತಿಕವಾಗಿ ಇದು ಎಷ್ಟೇ ದುಷ್ಪರಿಣಾಮ ಬೀರಿದರೂ, ಅವನು ಏನೇ ಆದರೂ ಅವಳು ಚೆನ್ನಾಗಿ ಇರಬೇಕು ಎನ್ನುವ ಉದ್ದಾತ ಆಶಯ ಇದೆ ಅಲ್ವಾ ಅದು ಅವನನ್ನು ಇಂತಹ ಸಾವಿರಾರು ಪರೀಕ್ಷೆಗಳಿಗೆ ಸಿದ್ದಗೊಳಿಸಿ ಬಿಟ್ಟಿದೆ. ಬೆಂಕಿಗೆ ಎದೆಯೊಡ್ಡಿ ನಿಲ್ಲುವ ಸಾಹಸವನ್ನು ತನಗರಿವಿಲ್ಲದಂತೆ ಮನಸ್ಸು ಧೈರ್ಯ ಮಾಡಿ ಬಿಟ್ಟಿದೆ. ಇಂತಹ ನೋವು ಕಷ್ಟಗಳು ತನಗೇನೇ ಬಂದರೂ ಶಾಂತವಾಗಿರಬೇಕು ಎಂದು ಆತ ಎಂದೋ ನಿರ್ಧಾರಿಸಿ ಆಗಿದೆ.

ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಹುಡುಗನ ಬಗ್ಗೆ ಇಷ್ಟೆಲ್ಲಾ ತೋರಿಕೆಯ ಸಂದೇಹ ವ್ಯಕ್ತಪಡಿಸುವ ಹುಡುಗಿಗೆ ಎಂದೂ ಒಂಚೂರು ಬೆಟ್ಟದಷ್ಟು ಗಟ್ಟಿಯಾದ ನಂಬಿಕೆ ಇದೆ. ಮಾತು ಮಾತಿಗೂ ಚುಚ್ಚುವ ಕೊಂಕು ಬಾಣಗಳನ್ನು ಸತತವಾಗಿ ಬಿಟ್ಟರೂ ಆಗಸ ಕರಗಿಸುವ ಪ್ರೀತಿ ಮನದೊಳಗೆ ಹೆಪ್ಪುಗಟ್ಟಿ ಒದ್ದಾಡುತ್ತಲೇ ಕೊಸರಾಡುತ್ತಿದೆ. ಪ್ರತಿ ಸಲ ಆತನೊಂದಿಗೆ ಜಗಳವಾದಾಗಲೆಲ್ಲಾ ಅವನಿಗಿಂತ ಇವಳೇ ಹೆಚ್ಚು ನೋವು ಸಂಕಟಗಳನ್ನು ಅನುಭವಿಸಿ ಯಾರಿಗೂ ಹೇಳಿಕೊಳ್ಳಕಾಗದೆ ಹಗಲು ರಾತ್ರಿಯೆನ್ನದೆ ಒಂದೇ ಸಮನೆ ಅವನ ಹೆಸರು ಚಡಪಡಿಸುತ್ತಲೇ ನರಳುವಳು.

ಹಾಗಾದರೆ ಈ ಕೋಪ ತಾಪ,ಜಗಳ ಬೈಗುಳ ಎಲ್ಲಾ ಯಾಕೆ??? ಇಬ್ಬರು ಪ್ರೀತಿಯಿಂದ ಖುಷಿಯಾಗಿ ಇರಬಹುದು ಆದರೆ “ಅವನು ನನ್ನ ಬಿಟ್ಟು ಹೋಗಬೇಕು, ನನ್ನ ಮೇಲೆ ಅವನಿಗೆ ಹೇಸಿಗೆ ಹುಟ್ಟಬೇಕು ಅದಕ್ಕೆ ನಾನು ಆದಷ್ಟು ಕೆಟ್ಟವಳು ಆಗಬೇಕು. ಇದಕ್ಕೋಸ್ಕರ ಅವನಿಗೆ ಸಹಿಸಲಸಾಧ್ಯವಾಗಿ ಗೊತ್ತು ಗುರಿಯಿಲ್ಲದೇ ಕಾರಣನೂ ಹೇಳದೆ ನನ್ನಿಂದ ಹಾಗೆ ದೂರ ಆಗಿ ಬಿಡಬೇಕು” ಎಂದು ಅವಳು ಅಂದೆಂದೋ ಚಿಂತಿಸಿ ಅದರಂತೆಯೇ ನಿರಂತರ ನಡೆದುಕೊಳ್ಳುತ್ತಿರುವಳು.

ಹೀಗಾದರೆ ಆತ ಅವಾಗಲಾದರೂ ಬೇರೆ ಹುಡುಗಿ ನೋಡಕೊಂಡು ತನ್ನ ಜೀವನ ತಾ ಕಟ್ಟಕೊಂತಾನೆ ಎಂದು ಭಾವಿಸಿರುವಳು. ಈ ವಿಷಯ ಅವನು ಗ್ರಹಿಸಿದರೂ ತನ್ನ ಪ್ರೀತಿಯ ತನ್ನತನವನ್ನು ಬಿಟ್ಟು ಕೊಡದವನು. ಇಬ್ಬರದು ಪರಸ್ಪರ ವಿರುದ್ಧ ಹೆಜ್ಜೆಯ ಲಹರಿಗಳು ಮತ್ತು ವಿಭಿನ್ನ ರೀತಿ ನೀತಿಯ ನಡವಳಿಕೆಗಳು ಆದರೆ ಇಬ್ಬರಿಗೂ ಅವರು ಅವರವರ ಪ್ರಕಾರ ಅವರು ನಡೆದುಕೊಳ್ಳುತ್ತಿರುವುದು ಸರಿ.

ಇನ್ನೇನು ಅವಳ ಮದುವೆ ಮತ್ತು ಅಂದು ಇವನು ಅವಳಿಂದ ದೂರ ಆಗುವ ಸಮಯ ಅಂದು ಮೌನಗಳ ಆಣೆಕಟ್ಟು ಒಡೆದು ಕಣ್ಣೀರ ನದಿ ಗುಪ್ತವಾಗಿ ಭೋರ್ಗೆರೆದು ಹರಿಯಲಿದೆ. ಇಬ್ಬರಿಗೂ ಗೊತ್ತು ಹೀಗೆ ಆಗುತ್ತೆ ಅಂತ ಆದರೆ ಗೊತ್ತಿರದಂತೆ ಇರುವ ಅನಿವಾರ್ಯತೆ ಇದೆ. ಇನ್ನೇನು ಬಂದಷ್ಟು ಹತ್ತಿರ ಇಬ್ಬರಲ್ಲೂ ಆತಂಕದ ಮೋಡಗಳು ದಿನೇದಿನೇ ಹೆಚ್ಚು ಜಮಾವಣೆ ಆಗುತ್ತಿವೆ.

ಆ ಸ್ಕೂಲ್ ಮಿಸ್ಸು, ಹೈಸ್ಕೂಲ್ ಪ್ರೇಂಡ್ಸ್, ಆ ಊರಿನ ಜನ, ಈ ಊರಿನ ಸಹೋದ್ಯೋಗಿ ಹೀಗೆ ಜೀವನದ ಯಾವುದೋ ಹಂತದಲ್ಲಿ ಪರಿಚಯವಾಗಿ ಮನಸ್ಸು ಹಚ್ಚಿಕೊಂಡ ಜಗದಲ್ಲಿ ಎಲ್ಲವೂ ಹೀಗೆ ನಿಗದಿತ ಸಮಯದ ಓಡನಾಟಗಳ ಮಧುರ ಬಾಂಧವ್ಯ. ಇದ್ದಷ್ಟು ದಿನ ಜೊತೆಗೆ ಚೆನ್ನಾಗಿ ಇರಬೇಕು, ದೂರ ಆಗೋದು ಇದ್ದೇ ಇದೆ ಆದರೆ ಅಲ್ಲಿವರೆಗೂ ಮರೆಯದಂತ ಭಾವನೆಗಳ ಅನುಭೂತಿ ಕೊಡಲು ಹಾಗೆ ಪ್ರೀತಿ ಕಾಪಾಡಿಕೊಳ್ಳುವ ತವಕವಂತೂ ಇರಲೆಬೇಕು.

ಹೌದು ಅವನ ಮನದಲ್ಲಿ ಇದ್ದಿದ್ದು ಅದೇ!!!

 

#ಬಸವರಾಜ_ಕಾಸೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here