ಬಂಟ್ವಾಳ: ಯಕ್ಷ ಕಲಾವಿದರಿಗೆ ಭರವಸೆಯ ಬೆಳಕು ನೀಡಿ ಮುನ್ನಡೆಸುವ ಪುಣ್ಯಕಾರ್ಯವನ್ನು ಮಾಡುತ್ತಿರುವ ಯಕ್ಷಧ್ರ್ರುವ ಪಟ್ಲ ಫೌಂಡೇಶನ್ ಅದ್ಭುತವಾದ ಮಾದರಿ ಸಂಘಟನೆಯಾಗಿದೆ ಎಂದು ನ್ಯಾಯವಾದಿ ಜಯರಾಮ ರೈ ವಿಟ್ಲ ಅವರು ಹೇಳಿದರು.
ಸರಪಾಡಿ, ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮಾ.೩೦ರಂದು ರಾತ್ರಿ ನಡೆದ ಯಕ್ಷಧ್ರ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸರಪಾಡಿ ಘಟಕದ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧೀಮಂತ ಕಲೆಯಾದ ಯಕ್ಷಗಾನಕ್ಕೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಪಟ್ಲ ಸತೀಶ ಶೆಟ್ಟಿಯವರು ಯಕ್ಷ ಕಲಾವಿದರ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.ಅವರ ಜತೆ ಕೈ ಜೊಡಿಸಬೇಕು ಎಂದು ಹೇಳಿದರು.
ಟ್ರಸ್ಟ್ ಸ್ಥಾಪಕಾಧ್ಯಕ್ಷ, ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರು ಸಮಾಜಕ್ಕೆ ಉತ್ತಮ ಕೊಡುಗೆಯಾಗಿದ್ದಾರೆ. ಅಂತಹ ಸತ್ಪಾತ್ರರನ್ನು ಗುರುತಿಸಿ ಅವರ ಸಾಮಾಜಿಕ ಸ್ಥಾನಮಾನ, ಸೌಕರ್ಯಗಳ ಕುರಿತು ಕಾಳಜಿ ವಹಿಸುವ ಕಾರ್ಯ ಯಕ್ಷಧ್ರ್ರುವ ಟ್ರಸ್ಟ್ ಮಾಡುತ್ತಿದೆ. ಕಲಾವಿದರನ್ನು ಗೌರವಿಸುವ ಹೃದಯ ಶ್ರೀಮಂತಿಕೆಯ ಜನರು ನಮ್ಮೊಂದಿಗಿರುವುದು ನಮ್ಮ ಪುಣ್ಯ ಎಂದರು.
ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಹುಟ್ಟಿಕೊಂಡ ನಮ್ಮ ಸಂಸ್ಥೆಯಿಂದ ಅಶಕ್ತ ಕಲಾವಿದರಿಗೆ ಆರ್ಥಿಕ ಚೈತನ್ಯ ನೀಡಲಾಗಿದೆ. ಮುಂದಕ್ಕೂ ಮನೆಗಳನ್ನು ದಾನಿಗಳ ಮುಖಾಂತರ ನಿರ್ಮಿಸಿ ಬಡ ಕಲಾವಿದರಿಗಾಗಿ ಅರ್ಪಿಸುವ ಮಹಾತ್ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಶ್ರೀ ಕ್ಷೇತ್ರ ಬಾಚಕೆರೆಯ ‘ರ್ಮದರ್ಶಿ ದೇಜಪ್ಪ ಬಾಚಕೆರೆ, ನೇರಳಕಟ್ಟೆ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಜೀವ ಪೂಜಾರಿ ಕಟ್ಟದಡೆ, ಉದ್ಯಮಿ ಖಾದರ್ ಇಕ್ರಾ ನೇಲ್ಯಪಲ್ಕೆ, ಮಣಿನಾಲ್ಕೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಮಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಶೆಟ್ಟಿ, ಟ್ರಸ್ಟ್ ಸರಪಾಡಿ ವಲಯ ಗೌರವಾಧ್ಯಕ್ಷರಾದ ಡಾ| ಬಾಲಚಂದ್ರ ಶೆಟ್ಟಿ,ಎ. ಗಣೇಶ ಆಚಾರ್ಯ, ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಆರುಮುಡಿ, ಪದಾಽಕಾರಿಗಳಾದ ಕುಸುಮಾಕರ ಶೆಟ್ಟಿ, ಎಸ್.ಪಿ. ಸರಪಾಡಿ, ಉಮೇಶ್ ಆಳ್ವ, ಸಂತೋಷ್ ಶೆಟ್ಟಿ,ಸಂಪತ್ ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ , ಬೆಂಗಳೂರು ಉದ್ಯಮಿ ಶಿವರಾಮ ಮಯ್ಯ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಭಾಗವತ ದಿ. ಬಜನಿಗುತ್ತು ಲಕ್ಷ್ಮಣ ರೈ ಕೊಟ್ಟುಂಜ ಮತ್ತು ದಿ. ಸರಪಾಡಿ ಸುಬ್ಬಣ್ಣ ಶೆಟ್ಟಿ ಅವರ ಸಂಸ್ಮರಣೆ ನಡೆಸಲಾಯಿತು. ಶಿಕ್ಷಕ ಉದಯ ಕುಮಾರ ಜೈನ್ ಮತ್ತು ಬಂಟ್ವಾಳ ದೇವದಾಸ ಶೆಟ್ಟಿ ಸಂಸ್ಮರಣೆ ನಡೆಸಿದರು.
ಘಟಕ ಸಂಚಾಲಕ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ರಾ‘ಕೃಷ್ಣ ರೈ ಕೊಟ್ಟುಂಜ ವಂದಿಸಿದರು. ಧನಂಜಯ ಶೆಟ್ಟಿ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮುನ್ನ ಯಕ್ಷಗಾನ ತಾಳಮದ್ದಲೆ ನಡೆಯಿತು. ಬಳಿಕ ಜಿಲ್ಲೆಯ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಗಜೇಂದ್ರ ಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಿತು.


