ಬಂಟ್ವಾಳ: ಭೂಮಿ ನಮ್ಮ ಪೂರ್ವಿಕರಿಂದ ಬಂದ ಬಳುವಳಿಯಲ್ಲ, ನಮ್ಮ ಮುಂದಿನ ಪೀಳಿಗೆಗೆ ತೀರಿಸಬೇಕಾದ ಸಾಲ ಎಂದು ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಉಮೇಶ್ ನಿರ್ಮಲ್ ಹೇಳಿದರು.
ಅವರು ವಿಶ್ವ ಭೂ ದಿನಾಚರಣೆಯ ಅಂಗವಾಗಿ ರೋಟರಿ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸರ್ವ ಸದಸ್ಯರ ಸಭೆಯಲ್ಲಿ ಮಾಹಿತಿ ನೀಡಿದರು. ವಿಶ್ವ ಸಂಸ್ಥೆಯು 1970 ರಿಂದ ಎಪ್ರಿಲ್ 22 ರಂದು ವಿಶ್ವ ಭೂ ದಿನಾಚರಣೆ ಆರಂಭಿಸಿದ್ದು, ಪ್ರಸ್ತುತ 193 ಕ್ಕಿಂತ ಹೆಚ್ಚು ದೇಶಗಳಲ್ಲಿ ಮಹತ್ವದ ಬಗ್ಗೆ ಅರಿವು ಕಾರ್ಯ ನಡೆಯುತ್ತಿದೆ ಎಂದರು. ಆಧುನಿಕತೆಯ ಹೆಸರಿನಲ್ಲಿ ಭೂಮಿಯನ್ನು ಬದುಕಲು ಯೋಗ್ಯವಿಲ್ಲದ ರೀತಿ ಮಾಡಿದ್ದೇವೆ. ಪ್ರಕೃತಿಯ ಮೇಲಿನ ಅತ್ಯಾಚಾರ ನಿಲ್ಲಬೇಕು ಎಂದರು. ಇತ್ತೀಚಿನ ಅಂಕಿಅಂಶಗಳನ್ನು ನೋಡಿದರೆ,ಅರಣ್ಯ ನಾಶದಿಂದ ಸುಮಾರು 398 ವಿವಿಧ ಜಾತಿಯ ಸಸ್ಯ ಪ್ರಭೇದಗಳು ಹಾಗೂ 680 ವಿವಿಧ ಜಾತಿಯ ಪ್ರಾಣಿ- ಪಕ್ಷಿಗಳು ಕಣ್ಮರೆಯಾಗಿದೆ. ಭೂಮಿ ಯೊಂದಿಗೆ ಬದುಕು ಹಸನಾಗಬೇಕಿದೆ .ಹಸಿರು ಹೊದಿಕೆ ನಮ್ಮನ್ನು ರಕ್ಷಣೆ ಮಾಡುತ್ತದೆ. ಭೂಮಿಯ ತಾಪಮಾನ ಕಡಿಮೆ ಮಾಡಲು ಪ್ರಾಕೃತಿಕ ಸಂಪನ್ಮೂಲ ಗಳನ್ನು ಹಿತ, ಮಿತ,ಪರಿಸರ ಸಹ್ಯ ವಾಗಿ ಬಳಸಬೇಕು . ಸ್ವಂತ ವಾಹನಗಳನ್ನು ಕಡಿಮೆ ಮಾಡಿ ಸಾರ್ವಜನಿಕ ಸಂಪರ್ಕ ಸಾಧನಗಳನ್ನು ಅವಲಂಬನೆ ಮಾಡಿದಲ್ಲಿ, ಶವರ್ ಬದಲು ಬಕೆಟ್ ಬಳಕೆಯಿಂದ ನೀರಿನ ಮಿತವ್ಯಯ, ಗಾರ್ಡನ್ ನಲ್ಲಿ ಹನಿ ನೀರಾವರಿ, ನೀರಿನ ಮರುಬಳಕೆಯನ್ನು ನಗರದಲ್ಲಿ ಅಳವಡಿಸಿಕೊಳ್ಳದೇ ಹೋದರೆ 2025 ರ ವೇಳೆಗೆ ನೀರಿನ ಲಭ್ಯತೆ ಕೆಲವೇ ಮಂದಿಗೆ ಎಂದು ವಿಶ್ವ ಸಂಸ್ಥೆಯ ಎಚ್ಚರಿಕೆಯನ್ನು ಗಂಭೀರವಾಗಿ ಆಲೋಚಿಸಬೇಕು ಎಂದರು.
ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ. ರೋಟರಿ ಯಂತಹ ಪ್ರಜ್ಞಾವಂತ ಸದಸ್ಯರು ಮುಂದಿನ ಪೀಳಿಗೆಯ ಹಿತರಕ್ಷಣಾ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ರೂಪಿಸಲು ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಕಾರ್ಯದರ್ಶಿ ಜಯರಾಜ್ ಬಂಗೇರ ಉಪಸ್ತಿತರಿದ್ದರು.