Thursday, October 26, 2023

ಕೆಂಪುಗುಡ್ಡೆ ಬಳಿ 2 ದಶಕಗಳ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ : ಅಮ್ಟಾಡಿ ಪಂಚಾಯತ್

Must read

-ಯಾದವ ಕುಲಾಲ್
ಬಿ.ಸಿ.ರೋಡು : 20 ವರ್ಷಗಳಿಂದ ಈ ಪ್ರದೇಶದಲ್ಲಿರುವ ಮನೆಗಳಿಗೆ ನೀರು ಪೂರೈಕೆಗೆ ಇರುವುದು ಒಂದೇ ಕೊಳವೆ ಬಾವಿ. ಹಾಗೆಂದು ಇಲ್ಲಿನ ಪಂಚಾಯತ್ ಸುಮ್ಮನೆ ಕೈಕಟ್ಟಿ ಕೂತಿಲ್ಲ. ಜನರ ಮೂಲಭೂತ ಅವಶ್ಯಕತೆಯಾದ ನೀರಿನ ಪೂರೈಕೆಗಾಗಿ ಮೂರು ಕಡೆ ಹೊಸ ಕೊಳವೆ ಬಾವಿ ನಿರ್ಮಾಣ ಮಾಡಿದೆ. ಆದರೆ ದುರಂತ ಎಂದರೆ ಮೂರೂ ಕೊಳವೆ ಬಾವಿಗಳಲ್ಲಿ ನೀರಿಲ್ಲ. ಪ್ರತೀ ವರ್ಷ ಎಪ್ರಿಲ್-ಮೇ ತಿಂಗಳು ಬಂತೆಂದರೆ ಈ ಪ್ರದೇಶದ ಜನರು ನೀರಿಗಾಗಿ ಪರದಾಡುತ್ತಾರೆ. ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಮತ್ತು ಕುಡಿಯುವ ನೀರಿಗಾಗಿ ಇವರು ಪಡುವ ಪಾಡು ಅಷ್ಟಿಷ್ಟಲ್ಲ. ಪಂಚಾಯತ್ ವತಿಯಿಂದ ವಾರಕ್ಕೆ ಒಮ್ಮೆ ಖಾಸಗಿಯವರಿಂದ ಟ್ಯಾಂಕರ್‌ನಲ್ಲಿ ತಂದು ನೀರು ಪೂರೈಕೆ ಮಾಡಿದರೂ ಅದು ಸ್ವಲ್ಪವೂ ಸಾಕಾಗುವುದಿಲ್ಲ. ಮನೆಯವರು ತಾವೇ ಸ್ವತಃ ಸಾವಿರಾರು ರೂಪಾಯಿ ಕೊಟ್ಟು ಟ್ಯಾಂಕರ್‌ನಲ್ಲಿ ನೀರು ತರಿಸಿಕೊಂಡರೂ ಅದು ನಾಲ್ಕೈದು ದಿವಸಗಳಲ್ಲೇ ಖಾಲಿ.
ಅದೊಂದು ಗುಡ್ಡ ಪ್ರದೇಶ. ಹೆಸರೇ ಕೆಂಪುಗುಡ್ಡೆ. ಇದು ಅಮ್ಟಾಡಿ ಗ್ರಾಮಕ್ಕೆ ಸೇರಿದ್ದು ಗುಡ್ಡದ ಮೇಲೆಯೇ ನೂರಾರು ಮನೆಗಳಿವೆ. ಇದು ದಲಿತರು, ಬಡ ಹಾಗೂ ಮದ್ಯಮ ವರ್ಗದವರೇ ಇರುವ ಮನೆಗಳ ವಠಾರ. ಇಲ್ಲಿಯೇ ಹತ್ತಿರದ ಬಡಾಜೆ ಬಳಿ ಕಳೆದ ೨೦ ವರ್ಷಗಳಿಂದ ಕೊಳವೆ ಬಾವಿಯಿಂದ ನೀರು ಬರುತ್ತದೆ. ಇದುವೇ ಇಲ್ಲಿನ ಜನರಿಗೆ ಜೀವಾಳ. ಈ ಪ್ರದೇಶದಲ್ಲಿ ಜನರ ವಾಸ್ತವ್ಯ ಹೆಚ್ಚಾಗಿದ್ದುದರಿಂದ ಪ್ರತೀ ಮನೆಗೆ ಹೋಗುವ ನೀರಿನ ಪ್ರಮಾಣ ಕಡಿಮೆಯಾಯಿತು. ನಂತರ ಅಮ್ಟಾಡಿ ಪಂಚಾಯತ್ ೩ ಕಡೆ ಕೊಳವೆ ಬಾವಿ ತೋಡಿತು. ಆದರೆ ಏನೂ ಪ್ರಯೋಜನವಿಲ್ಲ. ಪಂಚಾಯತ್ ಅಲ್ಲಿನ ಜನತೆಗೆ ನೀರು ಪೂರೈಸಲು ಎಲ್ಲಾ ಪ್ರಯತ್ನ ಮಾಡಿದೆ. ಆದರೆ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಕುಡಿಯುವ ನೀರಿನ ಸಮಸ್ಯೆಯೇ ಎದ್ದು ಕಾಣುತ್ತಿದೆ.
ಸುಮ್ಮನಿಲ್ಲದ ಅಮ್ಟಾಡಿ ಪಂಚಾಯತ್ : ಪಂಚಾಯತ್‌ನಲ್ಲಿ ಒಟ್ಟು 18 ಬೋರುವೆಲ್‌ಗಳಿದ್ದು ಬಹುತೇಕ ಕೊಳವೆ ಬಾವಿಯಲ್ಲಿ ನೀರಿನ ಒರೆತ ಕಡಿಮೆಯಾಗಿದೆ. ಕೆಲವು ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿದೆ. ಕಲಾಯಿ ಎಂಬಲ್ಲಿರುವ ಕೊಳವೆ ಬಾವಿ ಸಂಪೂರ್ಣ ಬತ್ತಿ ಹೋಗಿದೆ. ಅಜೆಕಲ ಬಳಿ ಇರುವ ಕೊಳವೆ ಬಾವಿಯೂ ಸಂಪೂರ್ಣ ಬತ್ತಿ ಹೋಗಿದೆ. ಆದರೆ ಅಲ್ಲಿಗೆ ಪುರಸಭೆಯಿಂದ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುತ್ತಿದ್ದಾರೆ. ಪೆದಮಲೆ ಬಳಿ ಇದ್ದ ಕೊಳವೆಬಾವಿಯನ್ನು ಇನ್ನೂ ಆಳವಾಗಿ ತೋಡಿದರೂ ನೀರು ಸಿಗಲಿಲ್ಲ. ಕೂರಿಯಾಳ ಪಡು ಬಳಿ ನೂತನ ವಾಗಿ ತೋಡಿದ ಕೊಳವೆ ಬಾವಿಯಲ್ಲಿ ಸಾಧಾರಣವಾಗಿ ನೀರು ಬರುತ್ತಿದೆ. ಕೂರಿಯಾಳ ದುರ್ಗನಗರ ಬಳಿ ಇದ್ದ ಬೋರ್‌ವೆಲ್‌ಗೆ ಇನ್ನೂ ಅಮ್ಟಾಡಿ ಪಂಚಾಯತ್ ಡೀಪ್ ಮಾಡುವ ಯೋಜನೆಯಲ್ಲಿದ್ದಾರೆ. ಹೀಗೆ ಪಂಚಾಯತ್‌ನ ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆಯೇ ತಲೆದೋರಿದೆ.
ಸಮಸ್ಯೆಗೆ ಹೆಗಲು ಕೊಡದ ಮೇಲಧಿಕಾರಿಗಳು : ಜನರ ನೀರಿನ ಸಮಸ್ಯೆಯನ್ನು ಪರಿಹರಿಸಲು ತಳಮಟ್ಟದಲ್ಲಿ ಅಂದರೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಚ್ಚಿನ ಪ್ರಯತ್ನ ನಡೆಯುತ್ತಿದೆ. ಆದರೆ ಈ ಬಗ್ಗೆ ಮೇಲ್ವರ್ಗದ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಚ್ಚಿನ ಆಸ್ಥೆ ತೋರಿಸಬೇಕಾಗಿದೆ. ನೀರು ಜನರ ಅತಿ ಅಗತ್ಯ ವಿಷಯವಾಗಿರುವುದರಿಂದ ಇದರ ಕುರಿತಾಗಿ ದೊಡ್ಡ ಮಟ್ಟದಲ್ಲಿ ಆಲೋಚನೆ ಮಾಡುವ ಅಗತ್ಯವಿದೆ. ಶಾಶ್ವತ ಪರಿಹಾರವನ್ನು ನೀಡುವ ಕುರಿತು ಎಲ್ಲರೂ ಸಮಾಲೋಚಿಸಬೇಕಾಗಿದೆ. ಇಲ್ಲವಾದರೆ ಇಲ್ಲಿರುವ ಬಡಕುಟುಂಬಗಳಿಗೆ ತೊಂದರೆ ತಪ್ಪಿದ್ದಲ್ಲ.
***********
ಕಳೆದ 20 ವರ್ಷದಿಂದ ನಾವು ನೀರಿನ ಸಮಸ್ಯೆ ಅನುಭವಿಸುತ್ತಾ ಬಂದಿದ್ದೇವೆ. ಕಳೆದ ವರ್ಷ ಈ ಅವಧಿಯಲ್ಲಿ ಮಳೆ ಆರಂಭವಾದ್ದರಿಂದ ಅಷ್ಟು ಗೊತ್ತಾಗಲಿಲ್ಲ. ಈ ವರ್ಷ ನೀರಿಗಾಗಿ ದಿನಾಲೂ ಒದ್ದಾಡುತ್ತಿದ್ದೇವೆ.
ಮನೆಯ ಬಳಿಯ ಪಂಚಾಯತ್ ನಿರ್ಮಿಸಿದ ಟ್ಯಾಂಕ್‌ಗಳು ಸಂಪೂರ್ಣ ಖಾಲಿ ಖಾಲಿ. ಇಲ್ಲಿ ಸುತ್ತ ಮುತ್ತ ಮೊದಲು ಹದಿನೈದು ಇಪ್ಪತ್ತು ಮನೆಗಳಿದ್ದವು ಆದರೆ ಈಗ ಅದರ  ದುಪ್ಪಟ್ಟಾಗಿದೆ. ಪಂಚಾಯತ್ ಐದು ದಿನಕ್ಕೊಮ್ಮೆ ಟ್ಯಾಂಕರ್‌ನಿಂದ ನೀರು ಕಳುಹಿಸುತ್ತದೆ. ಅದು ಯಾವುದಕ್ಕೂ ಸಾಕಾಗುವುದಿಲ್ಲ. ಕೆಂಪುಗುಡ್ಡೆ ಶಾಲಾ ಬಳಿ ಹೊಸ ಬೋರ್‌ವೆಲ್ ತೋಡಿತು. ಆದರೆ ಅದರಲ್ಲಿ ನೀರು ಇಲ್ಲವೇ ಇಲ್ಲ. ನಾವು ನಾಲ್ಕೈದು ಮನೆಯವರು ಸೇರಿಕೊಂಡು ಹಣಕೊಟ್ಟು ನೀರು ತರಿಸುವುದು. ಇದು ನiಗೆ ತುಂಬಾ ದುಬಾರಿ ಬೀಳುತ್ತದೆ. ನಮ್ಮ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ನೀಡಲು ಮೇಲ್ಮಟ್ಟ ಅಧಿಕಾರಿಗಳು, ತಾಲೂಕು ಪಂಚಾಯತ್ ಜನಪ್ರತಿನಿಧಿ, ಜಿಲ್ಲಾ ಪಂಚಾಯತ್ ಪ್ರತಿನಿಧಿ ಹಾಗೂ ಶಾಸಕರು ಗಮನ ಹರಿಸಿದರೆ ಒಳ್ಳೆಯದು.
– ದಿನೇಶ್ ಕೆಂಪುಗುಡ್ಡೆ 
********
ಕೋಟಿಗಟ್ಟಲೆ ಖರ್ಚುಮಾಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಬರದೇ ಅಂದಾಜು ತಿಂಗಳೇ ಕಳೆಯಿತು. ಜನರಿಗೆ ಅಗತ್ಯಕ್ಕೆ ಇಲ್ಲವಾದ ಕುಡಿಯುವ ನೀರಿನ ಯೋಜನೆ ಇದ್ದರೂ ಏನೂ ಪ್ರಯೋಜನವಿಲ್ಲ. ಬೇಸಿಗೆ ಕಾಲದಲ್ಲಿ ಸಿಗಬೇಕಾದ ನೀರು ಮಳೆಗಾಲದಲ್ಲಿ ಬಂದರೆ ಏನುಪ್ರಯೋಜನ. 16 ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ  ಕೋಟಿಗಟ್ಟಲೆ ಹಣ ವಿನಿಯೋಗ ಮಾಡಿ ಸರಿಯಾದ ವ್ಯವಸ್ಥೆ ಇಲ್ಲದೆ ತಾಲೂಕಿನ ಜನ ನೀರಿಗಾಗಿ ಪರದಾಡುವಂತಾಗಿದೆ. ಮೂಡಬಿದ್ರೆ ಗಡಿಯಲ್ಲಿ ಈ ಯೋಜನೆ ಇದ್ದು ಇಲ್ಲಿಂದ ನಮ್ಮ ಗ್ರಾಮಕ್ಕೆ ಬರಲು ಬೆಂಜನಪದವಿನಲ್ಲಿ ನೀರು ಶೇಖರಣಾ ಘಟಕಕ್ಕೆ ಬರಬೇಕು. ಅದರ ಬದಲು  ಫಲ್ಗುಣಿಯಲ್ಲಿ ನೀರಿನ ಮಟ್ಟ ಉತ್ತಮವಾಗಿದ್ದು ಇಲ್ಲಿ ಯಾವುದಾದರೂ ಸಣ್ಣ ಮಟ್ಟಿನ ಯೋಜನೆಯನ್ನು ಹಾಕಿ ಇದಕ್ಕೆ ಹತ್ತಿರ ಇರುವ ಆರು ಗ್ರಾಮಗಳಾದ ಅಮ್ಮುಂಜೆ, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಟಾಡಿ, ಕೂರಿಯಾಳ, ಕರಿಯಂಗಳ ಪ್ರದೇಶಗಳಿಗೆ ಬೆಂಜನಪದವಿನಲ್ಲಿರುವ ದೊಡ್ಡದಾದ ನೀರು ಶೇಖರಣಾ ಘಟಕದಿಂದ ಪೂರೈಕೆ ಮಾಡಿದರೆ ನಮ್ಮ ಪಂಚಾಯತ್‌ಗೆ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಬಹುದು. ಇದನ್ನು ಶಾಸಕರ ಗಮನಕ್ಕೂ ತರಲಾಗುವುದು.
– ಹರೀಶ್ ಶೆಟ್ಟಿ ಪಡು, ಅಧ್ಯಕ್ಸರು, ಅಮ್ಟಾಡಿ ಗ್ರಾಮ ಪಂಚಾಯತ್
****
ಅಮ್ಟಾಡಿ ಪಂಚಾಯತ್ ವ್ಯಾಪ್ತಿಯ ಹೆಚ್ಚಿನ ಕಡೆ ನೀರಿನ ಸಮಸ್ಯೆಯನ್ನು ಎದುರಿಸುತ್ತಾ ಇದ್ದಾರೆ. ನಾವು ಆದಷ್ಟು ಪ್ರಯತ್ನ ಮಾಡಿದ್ದೇವೆ. ಹೊಸ ಕೊಳವೆ ಬಾವಿ ತೋಡುವುದು, ಇದ್ದ ಕೊಳವೆ ಬಾವಿಯನ್ನು ಮತ್ತಷ್ಟು ಆಳವಾಗಿ ಕೊರೆಯುವುದು, ಬಾವಿಗಳ ಶುದ್ದೀಕರಣ ಹೀಗೆ ಹಲವು ಕಾರ್ಯಗಳನ್ನು ಮಾಡುತ್ತಾ ಇದ್ದೇವೆ. ಆದರೂ ತುಂಬಾ ಕಷ್ಟವಾಗುತ್ತದೆ. ಖಾಸಗಿ ವಾಹನದಿಂದ ನೀರು ಸರಬರಾಜೂ ಮಾಡಿದ್ದೇವೆ. ಇನ್ನು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಮಹಮ್ಮದ್, ಪಿಡಿಒ, ಅಮ್ಟಾಡಿ ಗ್ರಾಮ ಪಂಚಾಯತ್

More articles

Latest article