ವಿಟ್ಲ: ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಚಿನ್ಮಯಿ ೬೨೪ ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗುವುದರೊಂದಿಗೆ ಅದ್ವಿತೀಯ ಸಾಧನೆ ಮೆರೆದಿದ್ದಾರೆ. ಇದರೊಂದಿಗೆ ಶಾಲೆ ಸತತ ೧೬ ನೇ ವರ್ಷ ಸತತ ನೂರು ಶೇ. ಫಲಿತಾಂಶವನ್ನು ಪಡೆದ ಹೆಗ್ಗಳಿಕೆಯನ್ನು ಹೊಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಲ್.ಎನ್.ಕೂಡೂರು ತಿಳಿಸಿದರು.
ಅವರು ಮಂಗಳವಾರ ಫಲಿತಾಂಶದ ಬಳಿಕ ಶಾಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಾಲೆ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು.
ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಜಯರಾಮ ರೈ ಸಾಧನೆಯ ಬಗ್ಗೆ ಅಂಕಿ ಅಂಶ ನೀಡಿ ಈ ಬಾರಿ ೯೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಚಿನ್ಮಯಿ ೬೨೪ ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಶಾಲೆಯ ನವ್ಯಶ್ರೀ ೬೨೧ ಅಂಕ ಗಳಿಸಿದರೆ, ಕಾರ್ತಿಕ್ ಶೆಟ್ಟಿ ಹಾಗೂ ಪುಷ್ಪರಾಜ್ ೬೨೦ ಅಂಕ ಗಳಿಸಿದ್ದಾರೆ. ಈ ಪೈಕಿ ೪೧ ವಿದ್ಯಾರ್ಥಿಗಳು ಎ ಪ್ಲಸ್ ಶ್ರೇಣಿಯಲ್ಲಿ, ೩೮ ವಿದ್ಯಾರ್ಥಿಗಳು ಎ ಶ್ರೇಣಿಯಲ್ಲಿ, ೧೫ ಬಿ ಪ್ಲಸ್ ಶ್ರೇಣಿಯಲ್ಲಿ, ೪ ವಿದ್ಯಾರ್ಥಿಗಳು ಬಿ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ವಿಷಯದಲ್ಲಿ ೯ ವಿದ್ಯಾರ್ಥಿಗಳು ೧೨೫ ಪೂರ್ಣ ಅಂಕ ಗಳಿಸಿದ್ದಾರೆ. ಇಂಗ್ಲೀಷ್‌ನಲ್ಲಿ ೧೦, ಹಿಂದಿಯಲ್ಲಿ ೪, ಗಣಿತದಲ್ಲಿ ೪, ವಿಜ್ಞಾನದಲ್ಲಿ ೧, ಸಮಾಜ ವಿಜ್ಞಾನದಲ್ಲಿ ೪ ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತಾಧಿಕಾರಿ ಮೋನಪ್ಪ ಶೆಟ್ಟಿ, ಜತೆ ಕಾರ್‍ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ಗೋಕುಲ್ ಶೇಟ್ ಉಪಸ್ಥಿತರಿದ್ದರು.



ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡುವಾಸೆ- ಚಿನ್ಮಯಿ: ವಿಟ್ಲ ಕೂಡೂರು ರಾಜನಾರಾಯಣ ಗೀತಾ ದಂಪತಿಗಳ ಪುತ್ರಿಯಾದ ಚಿನ್ಮಯಿಗೆ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಆಸೆಯಿದೆಯಂತೆ. ಆ ನಿಟ್ಟಿನ ಸಾಧನೆಗೆ ಪೂರಕವಾಗುವಂತೆ ಶಿಕ್ಷಣ ಪೂರೈಸುತ್ತೇನೆ ಎನ್ನುವ ಆಕೆ ಶಾಲೆಯಲ್ಲಿ ಪ್ರತೀದಿನ ಕೇಳಿದ ಪಾಠವನ್ನೇ ಮನೆಯಲ್ಲಿ ಮನನವಾಗುವ ತನಕ ನಿರಂತರವಾಗಿ ಅಭ್ಯಾಸ ಮಾಡುತ್ತಿದೆ. ನನಗೆ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಬೇಕೆನ್ನುವ ಉತ್ಕಟವಾದ ಇಚ್ಛಗೆ ಮನೆ ಹಾಗೂ ಶಾಲೆಯ ವಾತಾವರಣ ಪೂರಕವಾಯಿತು ಎಂದು ಸಂತಸ ವ್ಯಕ್ತ ಪಡಿಸಿದರು.