ವಿಟ್ಲ: ಪುತ್ತೂರು ಹಾಗೂ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರು ಬೆಳಗ್ಗಿನಿಂದಲೇ ಮತದಾನದಲ್ಲಿ ಉತ್ಸಾಹದಿಂದಲೇ ಪಾಲ್ಗೊಂಡರು. ಕೆಲವು ಕಡೆಗಳಲ್ಲಿ ಮತಯಂತ್ರ ಕೈಕೊಟ್ಟಿರುವುದು ಬಿಟ್ಟರೆ ಶಾಂತಿಯುತ ಮತದಾನ ನಡೆದಿದೆ. ವಿವಾಹದ ಮೊದಲು ಮೂವರು ವಧುಗಳು ಬೇರೆ ಬೇರೆ ಮತಗಟ್ಟೆಗಳಲ್ಲಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಬದುಕಿನ ದಾಂಪತ್ಯದ ಪ್ರಥಮ ಕ್ಷಣಗಳನ್ನು ಸ್ಮರಣೀಯವಾಗಿಸಿಕೊಂಡರು.

ಮತದಾರರು ಸಮಯಕ್ಕೆ ಮುಂಚಿತವಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದು ಈ ಬಾರಿಯ ವಿಶೇಷ ಎನ್ನಬಹುದಾಗಿದೆ. ಆದರೆ ಅಡ್ಯನಡ್ಕ ಮತಗಟ್ಟೆ 90ರಲ್ಲಿ ಆರಂಭದಿಂದಲೇ ಮತಯಂತ್ರ ಕೈಕೊಟ್ಟು ಮತದಾನ ತಡವಾಗಿ ಆರಂಭವಾಗಿದೆ. ಕನ್ಯಾನ ಬಂಡಿತ್ತಡ್ಕ ಮತಗಟ್ಟೆ 244ರಲ್ಲಿ 25 ಮತಚಲಾವಣೆ ಆಗುತ್ತಿದ್ದ ಹಾಗೇ ಮತಯಂತ್ರ ಕೈಕೊಟ್ಟು ಸುಮಾರು ಒಂದು ಗಂಟೆಯಷ್ಟು ಕಾಲ ಮತದಾನ ಸ್ಥಗಿತಗೊಂಡಿತ್ತು.

ಪದ್ಯಾಣ ಮತಗಟ್ಟೆ 240ರಲ್ಲಿ, ಕನ್ಯಾನ ಕಾಲೇಜು ಮತಗಟ್ಟೆ, ಪೆರಾಜೆ ಗ್ರಾಮದ ಪೆರಾಜೆ ಶಾಲಾ ಮತಗಟ್ಟೆ, ಕೆದಿಲ ಗ್ರಾಮದ ಗಡಿಯಾರ ಶಾಲೆಯಲ್ಲಿ ಇವಿಎಂ ಮೆಷಿನ್ ಕೈ ಕೊಟ್ಟಿದ್ದು, ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಲವು ಮತಗಟ್ಟೆಗಳಲ್ಲಿ ಸಿಬ್ಬಂದಿಗೆ ಮತ ಯಂತ್ರದ ಜೋಡಣೆಯ ಬಗ್ಗೆ ಗೊಂದಲ ಉಂಟಾಗಿ ಅಧಿಕಾರಿಗಳು ಸ್ಥಳಕ್ಕೆ ಬರುವಂತಾಯಿತು. ಹೆಚ್ಚಿನ ಎಲ್ಲಾ ಬೂತ್‌ಗಳಲ್ಲೂ ಮತಯಂತ್ರ ನಿಧಾನವಾಗಿ ಕೆಲಸ ಮಾಡುತ್ತಿದ್ದುದರಿಂದ ಮತ ಚಲಾವಣೆಗೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿತ್ತು.
ಕರೋಪಾಡಿ ಗ್ರಾಮದ ಕುಡ್ಪಲ್ತಡ್ಕ ಮತಗಟ್ಟೆ 237ರಲ್ಲಿ ನವವಧು ಅನೆಯಾಲಗುತ್ತು ನಿವಾಸಿ ಶ್ರುತಿ ಸಂಬಂಧಿಗಳ ಜತೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ ಬಳಿಕ ಬಂಟವಾಳ ಬಂಟರ ಭವನದ ವಿವಾಹ ಕಾರ್‍ಯಕ್ರಮಕ್ಕೆ ತೆರಳಿದರು. ವಿಟ್ಲದ ಮೇಗಿನಪೇಟೆ ಮತಗಟ್ಟೆ ೩ರಲ್ಲಿ ಮದುಮಗಳು ಚಂದಳಿಕೆ ನಿವಾಸಿ ಸೌಮ್ಯ ಮುದೂರು ತನ್ನ ತಂದೆ ತಾಯಿ ಹಾಗೂ ಸಹೋದರಿ ಜತೆಗೆ ಬಂದು ಹಕ್ಕು ಚಲಾಯಿಸಿದರು. ಮಾಣಿ ನಾರಾಯಣ ಗುರು ಸಭಾ ಭವನದಲ್ಲಿ ವಿವಾಹವಾಗುವ ವಧು ಉಕ್ಕುಡ ದರ್ಬೆ ನಿವಾಸಿ ಕಾವ್ಯ ಬಂಧುಗಳ ಜತೆಯಲ್ಲಿ ಮಾದರಿ ಶಾಲೆಯ ಮತಗಟ್ಟೆ 11ರಲ್ಲಿ ಮತಚಲಾಯಿಸಿದರು.

ವಿಟ್ಲ: ಮತದಾನದ ದಿನವೇ ದಾಂಪತ್ಯಕ್ಕೆ ಕಾಲಿಡುತ್ತಿರುವ ಮದುಮಗಳು ವಿಟ್ಲ ಉಕ್ಕುಡ ದರ್ಬೆ 3ನೇ ವಾರ್ಡಿನ ಕಾವ್ಯ ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 11ನೇ ಬೂತ್‌ನಲ್ಲಿ ಮತದಾನ ಮಾಡಿ ಸಂಭ್ರಮಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here