Saturday, April 6, 2024

’ಜಿಲ್ಲೆಯ ಅಡಕೆ ಧಾರಣೆ ಕುಸಿತಕ್ಕೆ ಕೇಂದ್ರ ಸರಕಾರ, ಜಿಲ್ಲೆಯ ಸಂಸದರೇ ನೇರ ಹೊಣೆ’- ಕಾಂಗ್ರೆಸ್ ಆರೋಪ

ವಿಟ್ಲ : ಕರಾವಳಿಯ ಜೀವನಾಡಿಯೆನಿಸಿರುವ ಅಡಕೆ ವಾಣಿಜ್ಯ ಬೆಳೆಯ ಮಾರುಕಟ್ಟೆ ಇತ್ತೀಚಿನ ದಿನಗಳಲ್ಲಿ ಪಾತಾಳದತ್ತ ಕುಸಿಯುತ್ತಿದ್ದು, ರೈತರು ಆತಂಕಗೊಂಡಿದ್ದಾರೆ. ಕೇಂದ್ರ ಸರಕಾರದ ಕಡಿವಾಣವಿಲ್ಲದೇ ಬರ್ಮಾ ಮತ್ತಿತರ ದೇಶಗಳಿಂದ ಕಡಿಮೆ ಬೆಲೆಗೆ ಅವ್ಯಾಹತವಾಗಿ ಆಮದಾಗುತ್ತಿದೆ. ಇದು ಅಡಕೆಯನ್ನೇ ನಂಬಿರುವ ಕರಾವಳಿಯ ರೈತಾಪಿ ವರ್ಗಕ್ಕೆ ದ್ರೋಹವಾಗಿದೆ. ಕೇಂದ್ರ ಸರಕಾರದ ಇಬ್ಬಗೆಯ ನೀತಿಯಾಗಿದೆ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಅವರು ಆರೋಪಿಸಿದ್ದಾರೆ.
ಅವರು ವಿಟ್ಲದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಮದು ಮಾಡಿದ ಹೊರದೇಶದ ಅಡಕೆ ಕೆ.ಜಿ ಗೆ 145 ರೂ.ಗಳಿಗೆ ಇಲ್ಲಿನ ವ್ಯಾಪಾರಿಗಳಿಗೆ ದೊರೆಯುತ್ತಿದೆ. ಇದನ್ನು ಸಂಸ್ಕರಿಸಿ, ಸ್ಥಳೀಯ ಅಡಕೆ ಜತೆ ಬೆರೆಸಿ, ಇತರ ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಕಳಪೆ ಗುಣಮಟ್ಟದ ಈ ಅಡಕೆಯ ಮಾನ ಮತ್ತು ಬೆಲೆ ಮಾರುಕಟ್ಟೆಯಲ್ಲಿ ಕುಸಿಯುತ್ತದೆ. ರೈತರ ಜೀವನದಲ್ಲಿ ಚೆಲ್ಲಾಟವಾಡುವ ಕೇಂದ್ರ ಸರಕಾರ ಮತ್ತು ಜಾಣ ಕುರುಡು ಪ್ರದರ್ಶಿಸುತ್ತಿರುವ ಸಂಸದರ ನಡೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಬರ್ಮಾ ಅಡಕೆಯನ್ನು ಕೋಲ್ಕತ್ತಾ ಮೂಲಕ ಪುತ್ತೂರಿಗೆ ಆಮದು ಮಾಡಲಾಗುತ್ತಿತ್ತು. ಆ ಲಾರಿಯ ಬಗ್ಗೆ ಸ್ಥಳೀಯರಾದ ನಮಗೆ ಸಂಶಯ ಉಂಟಾಗಿ ಪರೀಕ್ಷಿಸುವ ಸಂದರ್ಭ ಅದು ಬರ್ಮಾ ಅಡಕೆಯೆಂದು ಬಯಲಾಯಿತು. 20 ಟನ್ ಅಡಕೆ ತುಂಬಿಕೊಂಡು ಈ ಲಾರಿ ಪುತ್ತೂರಿಗೆ ಬಂದಿತ್ತು. ಇದೇ ರೀತಿ ವಾರಕ್ಕೆ ಮೂರು ಬಾರಿ ಒಂದು ಅಡಕೆ ಗಾರ್ಬಲ್‌ಗೆ ಆಗಮಿಸುವ ಮಾಹಿತಿಯೂ ಸಿಕ್ಕಿದೆ. ಕೇವಲ ಒಂದು ವ್ಯಾಪಾರಿಗೆ ಆಮದಾಗುವ ಅಡಕೆ ಇಷ್ಟಾದರೆ ಇನ್ನೆಷ್ಟು ಅಡಕೆ ಆಮದಾಗ ಬಹುದು ಎಂದು ಲೆಕ್ಕಾಚಾರ ಹಾಕಬಹುದು. ಉತ್ತಮ ಗುಣಮಟ್ಟದ ಅಡಕೆಯನ್ನು ಜಿಲ್ಲೆಯಿಂದ ಹೊರಭಾಗಕ್ಕೆ ಕಳುಹಿಸುವ ಬದಲಾಗಿ ಕರಾವಳಿಗೆ ಅಡಕೆ ಆಮದಾಗುವುದನ್ನು ನಿಷೇಧಿಸದೇ ಇದ್ದಲ್ಲಿ ರೈತರು ಸಂಕಷ್ಟಕ್ಕೀಡಾಗುವುದು ಖಚಿತ ಎಂದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕಾಧ್ಯಕ್ಷ ಉಮಾನಾಥ ಶೆಟ್ಟಿ ಅವರು ಮಾತನಾಡಿ, ಬಿಜೆಪಿ ಸರಕಾರ ಸ್ವದೇಶೀ ಚಿಂತನೆಯ ಬಗ್ಗೆ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ ಜಿಲ್ಲೆಯ ಪ್ರಧಾನ ಬೆಳೆ ಅಡಕೆಯನ್ನು ಆಮದು ಮಾಡುತ್ತಿದೆ. ಬೆಳೆಗಾರರಿಗೆ 325ರಿಂದ 350 ರೂ. ಕೆ.ಜಿ ಗೆ ಸಿಗಬೇಕಿತ್ತು. ಆಮದಾಗುತ್ತಿರುವುದರಿಂದ ಅದು 225ಕ್ಕೆ ಕುಸಿದಿದೆ. ಕಲಬೆರಕೆ ಅಡಕೆಯನ್ನು ಖರೀದಿಸುವ ಧೈರ್ಯ ಯಾರಿಗೂ ಇಲ್ಲ. ಅಡಕೆ ಯಾರಿಗೂ ಬೇಡದ ಸ್ಥಿತಿಯಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಡಕೆ ಬೆಳೆಗಾರರಿಗೆ ಜೀವನಾಧಾರ ಬೆಳೆಗೇ ಕೊಡಲಿಯೇಟು ನೀಡಿದೆ ಎಂದರು.
ಕೆಪಿಸಿಸಿ ಕಾರ್‍ಯದರ್ಶಿ ಎಂ.ಎಸ್.ಮಹಮ್ಮದ್ ಅವರು ಮಾತನಾಡಿ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರಿಗೆ ಇಂಗ್ಲಿಷ್ ಹಿಂದಿ ಗೊತ್ತಿಲ್ಲ. ವಿಜಯ ಬ್ಯಾಂಕ್ ವಿಲೀನವನ್ನು ಯುಪಿಎ ಸರಕಾರ ಮಾಡಿದ್ದು ಎನ್ನುವ ನಳಿನ್ ಆಗ ಅವರೇ ಸಂಸದರಾಗಿದ್ದುದು ನೆನಪಿಲ್ಲವೇ ? ಅವರಿಗೆ ಆಗ ವಿರೋಧಿಸಬಹುದಿತ್ತು. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ ಅವರು ನಳಿನ್‌ಗೆ ಬಹಿರಂಗ ಸವಾಲು ಹಾಕಿದ್ದಾರೆ. ಅದಕ್ಕೆ ಉತ್ತರಿಸುವ ಗೋಜಿಗೇ ನಳಿನ್ ಹೋಗಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ರಮಾನಾಥ ವಿಟ್ಲ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ಉಲ್ಲಾಸ್ ಕೋಟ್ಯಾನ್ ಉಪಸ್ಥಿತರಿದ್ದರು.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸಾವು ಗೆದ್ದು ಬಂದ ಸಾತ್ವಿಕ್ ; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್​​ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ...

ಕಲ್ಲಡ್ಕ: ಖಾಸಗಿ ಬಸ್ಸಿಗೆ ಪಿಕಪ್ ಢಿಕ್ಕಿ: ಹಲವರಿಗೆ ಗಾಯ

ವಿಟ್ಲ: ವಿಟ್ಲ ಕಲ್ಲಡ್ಕ ರಸ್ತೆಯ ಗೋಳ್ತಮಜಲು ಎಂಬಲ್ಲಿ ಬಸ್ಸಿಗೆ ಪಿಕಪ್ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡಿದ್ದಾರೆ. ವಿಟ್ಲ ಕಡೆಗೆ ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ಒಯ್ಯುತ್ತಿದ್ದ ಪಿಕಪ್ ಆಕಸ್ಮಿಕವಾಗಿ ವಿಟ್ಲದಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ಸಿಗೆ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...