Friday, October 27, 2023

ಎ.9ರಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ 26ನೇ ಸನ್ಯಾಸಗ್ರಹಣ ದಿನಾಚರಣೆ

Must read

ವಿಟ್ಲ: ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಎ.9ರಂದು ಜೀವನದಾನ ಮತ್ತು ಎ.11ರಂದು ಮಹಾಪಾದುಕಾಪೂಜೆ ನಡೆಯಲಿದೆ. ಈಗಾಗಲೇ 4000ಕ್ಕೂ ಅಧಿಕ ಪಾದುಕಾಪೂಜೆ ನೋಂದಣಿಯಾಗಿದ್ದು, ಸಂಖ್ಯೆ 5000 ದಾಟಲಿದೆ. ಇದು ಸಾಮೂಹಿಕವಾಗಿ ನಡೆಯಲಿದೆ. ಇದು ಇತಿಹಾಸದಲ್ಲಿ ವಿಶಿಷ್ಟ ದಾಖಲೆಯಾಗಲಿದೆ ಎಂದು ಆಯೋಜನ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ತಿಳಿಸಿದರು.
ಅವರು ಬುಧವಾರ ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 26ನೇ ಸನ್ಯಾಸಗ್ರಹಣ ದಿನಾಚರಣೆ ಅಂಗವಾಗಿ ಕಷ್ಟ ನಷ್ಟಗಳಿಗೆ ಒಳಗಾಗಿ ಬದುಕಿನ ಬೆಳಕು ಕಾಣದ ಕುಟುಂಬಕ್ಕೆ ಸದಾಶ್ರಯ ಜೀವನದಾನ ಕಾರ್‍ಯಕ್ರಮ ಜೀವನದಾನ ಟ್ರಸ್ಟ್ ನೇತೃತ್ವದಲ್ಲಿ ಎ.9ರಂದು ನಡೆಯಲಿದೆ. ಇದೇ ದಿನ ಮಧ್ಯಾಹ್ನ 12 ಗಂಟೆಗೆ ಮಹಾಪಾದುಕೆ ಸ್ಥಾಪನೆಯಾಗಲಿದೆ. ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಲಿದ್ದು ಪದ್ಮಭೂಷಣ ಡಾ.ಗಿರೀಶ ಭಾರದ್ವಾಜ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಪಾದುಕಾ ಪ್ರದಾನ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಕಲಾವಿದರಾಗಿ ಕುರಿಯ ಗಣಪತಿ ಶಾಸ್ತ್ರಿ, ಉಮಾಕಾಂತ ಭಟ್ ಮೇಲುಕೋಟೆ, ಮೋಹನ ಭಾಸ್ಕರ ಹೆಗಡೆ, ಅಂಬಾಪ್ರಸಾದ ಪಾತಾಳ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಶ್ರೀಗಳ 26ನೇ ಯೋಗಪಟ್ಟಾಭಿಷೇಕ ದಿನಾಚರಣೆ ಅಂಗವಾಗಿ ಎ.11ರಂದು ಸಹಸ್ರ ಸಹಸ್ರ ಶಿಷ್ಯ ಭಕ್ತರಿಂದ ಮಹಾಪಾದುಕಾಪೂಜೆ ನೆರವೇರಲಿದೆ. ಭಕ್ತರಿಗೆ ರಜತ ಪಾದುಕೆಯನ್ನು ಪ್ರಸಾದ ರೂಪದಲ್ಲಿ ಶ್ರೀಗಳು ನೀಡಿ ಹರಸಲಿದ್ದಾರೆ. ಇದನ್ನು ಶಿಷ್ಯರು ಮನೆಯಲ್ಲಿ ಪೂಜಿಸಿ, ಗುರುವಂದನೆ ಮಾಡಬಹುದು. ಈ ವಿಶೇಷ ಕಾರ್‍ಯಕ್ರಮದ ಮೂಲಕ ಶ್ರೀರಾಮಚಂದ್ರಾಪುರ ಮಠದ ಅವಿಚ್ಛಿನ್ನ ಪರಂಪರೆ ಮುಂದುವರೆಯುತ್ತಿರುವಂತೆ ಶಿಷ್ಯರ ಪರಂಪರೆಯೂ ಅವಿಚ್ಛಿನ್ನವಾಗಿ ಮುಂದುವರೆಯಬೇಕು ಎಂಬ ಕಲ್ಪನೆಯಿದೆ. ಅಪರಾಹ್ನ 3 ಗಂಟೆಗೆ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ ಎಂದು ಹೇಳಿದರು.
ಈ ವಿಶೇಷ ಕಾರ್‍ಯಕ್ರಮಕ್ಕೆ 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಅದಕ್ಕಾಗಿ ಆಯೋಜನ ಸಮಿತಿ ಮತ್ತು ಉಪಸಮಿತಿಗಳನ್ನು ರೂಪಿಸಲಾಗಿದ್ದು, ಆತಿಥ್ಯ, ಊಟೋಪಚಾರ, ವಸತಿ, ಪ್ರಸಾದ ವಿತರಣೆಗೆ ಆಯೋಜನ ಸಮಿತಿ ಭರದ ಸಿದ್ಧತೆ ನಡೆಸುತ್ತಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ಈಗಾಗಲೇ ಗೋಯಾತ್ರೆ, ವಿಶ್ವಮಂಗಲ ಗೋಯಾತ್ರೆ, ವಿಶ್ವಗೋಸಮ್ಮೇಳನ, ರಾಮಸತ್ರ ಇತ್ಯಾದಿ ಕಾರ್‍ಯಕ್ರಮಗಳನ್ನು ಆಯೋಜಿಸಿದ ಶ್ರೀಮಠದ ಶಿಷ್ಯಭಕ್ತರು ಈ ಕಾರ್‍ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಯೋಜನ ಸಮಿತಿ ಪ್ರಧಾನ ಕಾರ್‍ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಬಂಗಾರಡ್ಕ ಜನಾರ್ದನ ಭಟ್ ಉಪಸ್ಥಿತರಿದ್ದರು.

More articles

Latest article