Sunday, October 22, 2023

’ಬಿಜೆಪಿಗೆ ಹೊಸ ದಾಖಲೆಯ ಗೆಲುವು’- ನಳಿನ್

Must read

ವಿಟ್ಲ: ಈ ಬಾರಿಯೂ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಅಭೂತಪೂರ್ವ ಗೆಲುವು ಸಾಧಿಸಲಿದೆ. ಜನರ ಒಲವು ಭಾರತೀಯ ಜನತಾ ಪಾರ್ಟಿಯ ಕಡೆಗೆ ಇದೆ ಎಂಬುದು ಜಿಲ್ಲಾ ಪ್ರವಾಸದ ಸಮಯ ಅನುಭವಕ್ಕೆ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು.
ಹಿಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇದ್ದ ಸಮಯ ದಿನ ನಿತ್ಯ ಕೊಲೆ, ಸುಲಿಗೆ, ಗಲಭೆ ನಡೆಯುತ್ತಿತ್ತು. ಈಗ ೭ ಶಾಸಕರು ಬಿಜೆಪಿಯವರಾದ ಬಳಿಕ ಜಿಲ್ಲೆಯ ದಿನಚರಿ ಶಾಂತಿಯುತವಾಗಿದೆ. ವಿದ್ಯುತ್ ಸಹಿತ ಹಲವು ವಿಚಾರದಲ್ಲಿ ರಾಜ್ಯ ಸರಕಾರದ ಆಡಳಿತ ವಿಫಲವಾಗಿದೆ. ಬೆಳಕಿನ ಯುಗ ಕತ್ತಲೆಯಾಗಿದ್ದು, ರೈತರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್‍ಮಾಣವಾಗಿದೆ. ಈ ಸರ ನಡೆಯುತ್ತಿಲ್ಲ, ಕಾಂಗ್ರೆಸ್ ಎಂಬ ಆಕ್ಸಿಜನ್ ಕೊಟ್ಟು ಐಸಿಯುನಲ್ಲಿರಿಸಲಾಗಿದೆ. ಚುನಾವಣೆಯ ಮುಗಿದ ತಕ್ಷಣ ಶವವಾಗಿ ಐಸಿಯುನಿಂದ ಹೊರ ಬರುತ್ತದೆ ಎಂದು ವಿಟ್ಲದಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.
ಪ್ರಧಾನ ಮಂತ್ರಿ ಯೋಜನೆ ಹತ್ತು ವರ್ಷದಿಂದ ನೆನೆಗುದಿಗೆ ಬಿದ್ದಿದ್ದು, ಈ ವರ್ಷ ಪ್ರಾರಂಭವಾಗುತ್ತದೆ. ಮತ್ತೆ ಪ್ರಾರಂಭವಾಗುವ ಸಮಯದಲ್ಲಿ ಹಿಂದೆ ಬಾಕಿಯಾದ ಸರ್ವೇ ಆದ ಎಲ್ಲಾ ಕಾಮಗಾರಿಗಳು ಮುಂದುವರಿಯುತ್ತದೆ. ಅನುದಾನಗಳನ್ನು ನೀಡುವ ನಾಯಕನ ಹೆಸರಿನಲ್ಲಿ ಪಕ್ಷ ಮುನ್ನಡೆಯುತ್ತದೆ ಮತ್ತೆ ಕ್ಷೇತ್ರದ ಅಭಿವೃದ್ಧಿಯ ಹೆಸರು ಬರುತ್ತದೆ. ಬಿಎಸ್‌ಎನ್‌ಎಲ್ ಹಿಂದಿನ ವ್ಯವಸ್ಥೆಯಲ್ಲಿ ಸಮಸ್ಯೆಗಳಿದ್ದು, ಕೇಂದ್ರದ ಘಟ್ಟ ತೀರ್ಮಾನದಿಂದ ಬದಲಾವಣೆಯಾಗುತ್ತದೆ. ಒಂದು ತಿಂಗಳಲ್ಲಿ ಈಗ ಇರುವ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ ವಿಟ್ಲ ತಾಲೂಕು ಆಗಬೇಕೆಂಬ ನಿಯೋಗ ಬಂದಿದ್ದು, ಪೂರ್ತಿ ಬೆಂಬಲವನ್ನು ನೀಡಲಾಗಿದೆ. ಪುತ್ತೂರು ಜಿಲ್ಲೆಯಾಗಬೇಕು, ವಿಟ್ಲ ತಾಲೂಕು ಆಗಬೇಕೆಂಬುದು ಬಿಜೆಪಿಯ ಸ್ಪಷ್ಟ ನಿಲುವು. ಯಡಿಯೂರಪ್ಪನವರು ಪುತ್ತೂರನ್ನು ಜಿಲ್ಲೆ ಮಾಡುತ್ತೇನೆಂದು ಹಿಂದೆ ಘೋಷಣೆ ಮಾಡಿದ್ದು, ಅವರು ಇನ್ನೊಮ್ಮೆ ಮುಖ್ಯಮಂತ್ರಿಯಾಗಬೇಕಾಗಿದೆ. ವಿಟ್ಲಮುಡ್ನೂರು ರಸ್ತೆಗೆ 10 ಕೋಟಿಯನ್ನು ಸಿಆರ್‌ಎಫ್ ನಲ್ಲಿ ಸಂಸದರು ಮಂಜೂರು ಮಾಡಿಸಿ, ಕೇಂದ್ರ ರಾಜ್ಯಕ್ಕೆ ನೀಡಿದೆ. ರಾಜ್ಯದ ಲೋಕೋಪಯೋಗಿ ಸಚಿವರಲ್ಲಿ ಮಾತುಕತೆ ನಡೆಸಿದಾಗ 3ನೇ ಹಂತದಲ್ಲಿ ನಡೆಸಲಾಗುವುದು ಎಂದಿದ್ದಾರೆ. ರಾಜ್ಯ ಸರಕಾರದ ನಿಧಾನಗತಿಯ ಧೋರಣೆಯಿಂದ ಕಾಮಗಾರಿ ತಡವಾಗಿದೆಯಾದರೂ 100ಕ್ಕೆ ನೂರು ಆಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಜಯಶ್ರೀ ಕೋಡಂದೂರು, ಪುತ್ತೂರು ಪ್ರಭಾರಿ ಕೃಷ್ಣ ಶೆಟ್ಟಿ ಕಡಬ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಜೀವ ಭಂಡಾರಿ, ಪುತ್ತೂರು ಮಂಡಲ ಕಾರ್‍ಯದರ್ಶಿ ಆರ್. ಸಿ. ನಾರಾಯಣ, ವಿಟ್ಲ ನಗರ ಅಧ್ಯಕ್ಷ ಮೋಹನದಾಸ ಉಕ್ಕುಡ ಮತ್ತಿತರರು ಹಾಜರಿದ್ದರು.

More articles

Latest article